ಸ್ಪರ್ಧಾತ್ಮ ಪರೀಕ್ಷೆ ಎದುರಿಸಲು ಪ್ರೌಢಶಾಲೆಯಲ್ಲೇ ತರಬೇತಿ

KannadaprabhaNewsNetwork | Published : Dec 16, 2024 12:49 AM

ಸಾರಾಂಶ

ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ತರಬೇತಿ ನೀಡಲಾಗುತ್ತಿದೆ. ಇದರಿಂದ ಮುಂದಿನ ಪಿಯುಸಿ ವಿದ್ಯಾಭ್ಯಾಸ ನಂತರ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಅದರಲ್ಲಿ ಯಶಸ್ವಿಯಾಗಲು ತುಂಬಾ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಪ್ರತಿಭಾನ್ವೇಷಣೆ ಪರೀಕ್ಷೆ ತರಬೇತಿ ಶಿಬಿರದಲ್ಲಿ ಬಿಇಒ ಎಲ್‌.ಜಯಪ್ಪ ಹೇಳಿಕೆ- - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ತರಬೇತಿ ನೀಡಲಾಗುತ್ತಿದೆ. ಇದರಿಂದ ಮುಂದಿನ ಪಿಯುಸಿ ವಿದ್ಯಾಭ್ಯಾಸ ನಂತರ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಅದರಲ್ಲಿ ಯಶಸ್ವಿಯಾಗಲು ತುಂಬಾ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹೇಳಿದರು.

ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರೌಢಶಾಲಾ ಹಂತಗಳಲ್ಲಿಯೇ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಭದ್ರ ಅಡಿಪಾಯವಾಗಲಿದೆ. ಬೇರೆ ರಾಜ್ಯಗಳಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸುವುದು ಕಡಿಮೆ. ಇಂತಹ ಪ್ರತಿಭಾನ್ವೇಷಣಾ ಪರೀಕ್ಷೆ ತಯಾರಿಯಿಂದ ಎಲ್ಲ ರೀತಿಯ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಭಾಗಿಯಾಗಲು ಸಹಾಯಕವಾಗಲಿದೆ ಎಂದರು.

ಜೂನ್ ತಿಂಗಳಿನಿಂದಲೇ ಶಾಲಾ ಹಂತಗಳಲ್ಲಿ ಶಾಸಕ ಬಸವರಾಜು ಶಿವಗಂಗಾ ಆಶಯದಂತೆ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 8ನೇ ತರಗತಿಯಿಂದ 12ನೇ ತರಗತಿವರೆಗೆ ಪ್ರತಿ ತಿಂಗಳು ₹1000 ದಂತೆ ₹48000 ಪ್ರತಿಭಾ ವಿದ್ಯಾರ್ಥಿ ವೇತನ ಪಡೆಯುವರು. ಕಳೆದ ವರ್ಷ ದಾವಣಗೆರೆ ಜಿಲ್ಲೆಯಿಂದ 174 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು ಎಂದ ಅವರು, ಅದರಲ್ಲಿ ಚನ್ನಗಿರಿ ತಾಲೂಕಿನ 66 ವಿದ್ಯಾರ್ಥಿಗಳು ಆಯ್ಕೆಯಾಗಿದ್ದನ್ನು ಸ್ಮರಿಸಿದರು.

ತರಬೇತಿ ಶಿಬಿರದಲ್ಲಿ ತಾಲೂಕಿನ 5 ಶಾಲೆಗಳಿಂದ 100 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಂತೋಷ್ ಕುಮಾರ್ ತರಬೇತಿ ಶಿಬಿರ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕರಾದ ಕಾಂತರಾಜ್, ಲಕ್ಷ್ಮೀನಾರಾಯಣ್, ಹನುಮಂತಪ್ಪ, ಶಾಲಾ ಶಿಕ್ಷಕರು ಹಾಜರಿದ್ದರು.

- - - -15ಕೆಸಿಎನ್‌ಜಿ1.ಜೆಪಿಜಿ:

ಪ್ರತಿಭಾನ್ವೇಷಣೆ ಪರೀಕ್ಷೆ ತರಬೇತಿ ಶಿಬಿರದಲ್ಲಿ ಬಿಇಒ ಜಯಪ್ಪ ಮಾತನಾಡಿದರು.

Share this article