ದ್ವಿದಳ ಧಾನ್ಯ ಬೆಳೆ ಸಮಗ್ರ ನಿರ್ವಹಣೆ ಕುರಿತು ತರಬೇತಿ

KannadaprabhaNewsNetwork |  
Published : Jul 27, 2024, 12:49 AM IST
ಫೋಟೊ ಶೀರ್ಷಿಕೆ: 24ಆರ್‌ಎನ್‌ಆರ್3ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ದ್ವಿದಳ ಧಾನ್ಯ ಬೆಳೆಗಳಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್. ಉದ್ಘಾಟಿಸಿದರು. | Kannada Prabha

ಸಾರಾಂಶ

ದ್ವಿದಳ ಧಾನ್ಯ ಬೆಳೆಗಳಲ್ಲಿ ಕಂಡು ಬರುವ ಪ್ರಮುಖ ಕೀಟಗಳು, ಹಾನಿಯ ಲಕ್ಷಣ ಹಾಗೂ ಅವುಗಳ ಸಮಗ್ರ ನಿರ್ವಹಣೆಯಿಂದ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಹೇಳಿದರು.

ರಾಣಿಬೆನ್ನೂರು: ದ್ವಿದಳ ಧಾನ್ಯ ಬೆಳೆಗಳಲ್ಲಿ ಕಂಡು ಬರುವ ಪ್ರಮುಖ ಕೀಟಗಳು, ಹಾನಿಯ ಲಕ್ಷಣ ಹಾಗೂ ಅವುಗಳ ಸಮಗ್ರ ನಿರ್ವಹಣೆಯಿಂದ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ವಿಜ್ಞಾನ ಕೇಂದ್ರ, ಬೈಪ್- ಸುಸ್ಥಿರ ಜೀವನೋಪಾಯ ಅಭಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ದ್ವಿದಳ ಧಾನ್ಯ ಬೆಳೆಗಳಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರು ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ನಿರ್ಮಾಣ ಮಾಡಬಹುದು ಹಾಗೂ ಮಣ್ಣಿನ ಜೈವಿಕ, ರಸಾಯನಿಕ ಮತ್ತು ಭೌತಿಕ ಗುಣಧರ್ಮದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ ಎಂದರು.

ಬೇಸಾಯ ಶಾಸ್ತ್ರದ ವಿಷಯ ತಜ್ಞೆ ಡಾ. ಸಿದ್ದಗಂಗಮ್ಮ ಕೆ.ಆರ್. ಮಾತನಾಡಿ, ದ್ವಿದಳ ಧಾನ್ಯ ಬೆಳೆಗಳಾದ ಉದ್ದು, ಹೆಸರು. ಹುರುಳಿ, ಕಡಲೆ ಬೆಳೆಗಳನ್ನು ಕಡಿಮೆ ಅವಧಿಯಲ್ಲಿ ಕಟಾವು ಮಾಡಬಹುದಾಗಿದ್ದು, ಕಡಿಮೆ ತೇವಾಂಶದ ಜಮೀನಿಗೆ ಹೊಂದಿಕೊಳ್ಳುವ ಬೆಳೆಯಾಗಿವೆ. ಇವುಗಳನ್ನು ಇಡೀ ಬೆಳೆಯಾಗಿ ಬೆಳೆಯದಿದ್ದರೂ ಅಂತರ ಬೆಳೆ ಹಾಗೂ ಬಹು ಬೆಳೆ ಪದ್ಧತಿಯಲ್ಲಿ ಬೆಳೆಯಲು ಪ್ರಾರಂಭಿಸಿದರೆ ಸುಸ್ಥಿರ ಆದಾಯವನ್ನು ಪಡೆಯಬಹುದು. ದ್ವಿದಳ ಧಾನ್ಯ ಬೆಳೆಗಳಿಗೆ ರೈಜೋಬಿಯಂ ಜೈವಿಕ ಗೊಬ್ಬರದಿಂದ ಬೀಜೋಪಚಾರ ಮಾಡಿದರೆ ಬೆಳೆಗಳಿಗೆ ಕೊಡಬೇಕಾದಂತಹ ಸಾರಜನಕವನ್ನು ಶೇ. 25ರಷ್ಟು ಕಡಿತಗೊಳಿಸಬಹುದು. ಇದರಿಂದ ಉತ್ಪಾದನೆ ವೆಚ್ಚ ಕಡಿಮೆಯಾಗಿ ಉತ್ತಮ ಆದಾಯ ಪಡೆಯಬಹುದು ಎಂದರು.

ಸಸ್ಯ ಸಂರಕ್ಷಣೆ ವಿಷಯ ತಜ್ಞೆ ಡಾ. ಬಸಮ್ಮ ಹಾದಿಮನಿ ಮಾತನಾಡಿ, ದ್ವಿದಳ ಧಾನ್ಯ ಬೆಳೆಗಳಲ್ಲಿ ಬರುವ ರೋಗಗಳ ಸಮಗ್ರ ನಿರ್ವಹಣೆಯಿಂದ ಇಳುವರಿ ಹೆಚ್ಚಿಸಬಹುದು ಎಂದರು.

ಕೇಂದ್ರದ ಗೃಹ ವಿಜ್ಞಾನಿ ಡಾ. ಅಕ್ಷತಾ ರಾಮಣ್ಣನವರ ಮಾತನಾಡಿ, ದ್ವಿದಳ ಧಾನ್ಯ ಬೆಳೆಗಳಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಸ್ಕರಣೆಗೆ ಒತ್ತು ನೀಡಿ ವಿವಿಧ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಅವುಗಳಿಗೆ ಪ್ಯಾಕಿಂಗ್, ಲೇಬಲಿಂಗ್ ಮತ್ತು ಬ್ರ್ಯಾಡಿಂಗ್ ಮಾಡುವುದರಿಂದ ಅಧಿಕ ಲಾಭ ಪಡೆಯುವುದರ ಜೊತೆಗೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದರು.

ಬೈಪ್ ಸಂಸ್ಥೆಯ ಹಿರಿಯ ಪ್ರಾಜೆಕ್ಟ್ ಎಂಜಿನಿಯರ್ ಚೇತನ, ರಾಮಣ್ಣನವರ ಅತಿಥಿಗಳಾಗಿ ಆಗಮಿಸಿದ್ದರು. ಶಿಬಿರದಲ್ಲಿ ರೈತರು ಹಾಗೂ ವಿಜ್ಞಾನಿಗಳ ಸಂವಾದವನ್ನು ಏರ್ಪಡಿಸಲಾಗಿದ್ದು, ಶಿಗ್ಗಾಂವಿ ತಾಲೂಕಿನ ಬೆಳಗಲಿ ಹಾಗೂ ಹಿರೇಬೆಂಡಿಗೇರಿ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಜನ ರೈತರು ಪಾಲ್ಗೊಂಡಿದ್ದರು

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''