ಕನ್ನಡಪ್ರಭ ವಾರ್ತೆ ಸುತ್ತೂರುಐಸಿಎಆರ್- ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐಸಿಎಆರ್- ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸಹಜ ಸೀಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ದೇಸಿ ಭತ್ತದ ತಳಿ ವೈವಿಧ್ಯತೆ, ವಿಷಮುಕ್ತ ಭತ್ತದ ಕೃಷಿ, ಬೀಜೋತ್ಪಾದನೆಗೆ ಇರುವ ಸವಾಲುಗಳು ಹಾಗೂ ಅವಕಾಶಗಳು ಕುರಿತು ತರಬೇತಿ ಆಸಕ್ತ ರೈತರಿಗೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಐಸಿಎಆರ್- ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ದೇಸಿ ತಳಿಗಳನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕು, ಭತ್ತದ ವಿವಿಧ ತಳಿಗಳು, ನಂಜನಗೂಡು ರಸಬಾಳೆ ಇನ್ನಿತರೆ ದೇಸಿ ಬೆಳೆಗಳನ್ನು ಸಂರಕ್ಷಣೆಯಲ್ಲಿ ತೊಡಗಿಕೊಂಡ ರೈತರಿಗೆ ಹಾಗೂ ಸಹಜ ಸೀಡ್ಸ್ ಅವರಿಗೆ ಅಭಿನಂದಿಸಿದರು. ಸಹಜ ಸೀಡ್ಸ್ ನ ನಿರ್ದೇಶಕ ಕೃಷ್ಣಪ್ರಸಾದ್ ರೈತರನ್ನು ಉದ್ದೇಶಿಸಿ, ರೈತರು ಈ ಭಾಗಕ್ಕೆ ಸೂಕ್ತವಾಗುವ ಲಾಭದಾಯಕವಾದ ಹಲವು ತಳಿಗಳ ಕುರಿತು ವಿವರಿಸಿದರು.ರೈತರು ದೇಸಿ ತಳಿಗಳ ಬೀಜೋತ್ಪಾದನೆ ಮಾಡಬೇಕು. ಮಾರುಕಟ್ಟೆಗೆ ಸಹಜ ಸೀಡ್ಸ್ ಹಲವು ಮೇಳಗಳನ್ನು ಮಾಡುತ್ತದೆ. ಅಲ್ಲದೆ ಕೆವಿಕೆಯು ಸುತ್ತೂರಿನ ಕೃಷಿ ಮೇಳ ಹಾಗೂ ಇನ್ನಿತರೆ ಕೃಷಿ ಮೇಳಗಳಲ್ಲಿ ತಮ್ಮ ಪದಾರ್ಥಗಳನ್ನು ಮಾರುಕಟ್ಟೆ ಮಾಡಲು ವ್ಯವಸ್ಥೆ ಮಾಡುತ್ತದೆ. ಅಲ್ಲಿ ರೈತರಿಗೆ ಲಾಭವಾಗುವಂತೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು. ಇದರಿಂದ ಲಾಭಾಂಶ ಹೆಚ್ಚುತ್ತದೆ. ಸಾವಯವ ಪದ್ಧತಿಯಿಂದ ಮಣ್ಣಿನ ಆರೋಗ್ಯ ಹಾಗೂ ನಮ್ಮ ಆರೋಗ್ಯ ವೃದ್ಧಿಸುತ್ತದೆ ಎಂದು ಕರೆ ನೀಡಿದರು. ಪ್ರಗತಿಪರ ರೈತರಾದ ಭತ್ತದ ಸಿದ್ಧಸಣ್ಣ ತಳಿಯ ಅಭಿವೃದ್ಧಿಗಾರ ಶಿವಳ್ಳಿ ಬೋರೇಗೌಡ ವಿಷಮುಕ್ತ ಭತ್ತದ ಕೃಷಿ ಕುರಿತು ಉಪನ್ಯಾಸ ನೀಡಿದರು. ಕೃಷಿಯಲ್ಲಿ ತಾವು ಕಂಡ ಕಷ್ಟಗಳು, ಅದನ್ನು ಮೆಟ್ಟಿ ನಿಂತ ಬಗೆಯನ್ನು ವಿವರಿಸಿ ರೈತರಿಗೆ ಮಾರ್ಗದರ್ಶನ ಮಾಡಿದರು. ಸಹಜ ಸೀಡ್ಸ್ ಕೆ.ಎಸ್. ಮಂಜು ಅವರು ದೇಸಿ ಬಿತ್ತನೆಗೆ ಇರುವ ಮಾರುಕಟ್ಟೆ ಕುರಿತು ರೈತರಿಗೆ ವಿವರಿಸಿದರು. ಕೆವಿಕೆಯ ಬೀಜ ತಂತ್ರಜ್ಞಾನ ವಿಭಾಗದ ವಿಷಯ ತಜ್ಞ ಎಚ್.ವಿ. ದಿವ್ಯಾ ಮಾತನಾಡಿ, ದೇಸಿ ಬಿತ್ತನೆ ಬೀಜದ ಬೀಜೋತ್ಪಾದನೆ ಪ್ರೋತ್ಸಾಹಿಸಲು ಈ ಭಾಗಕ್ಕೆ ಸೂಕ್ತವಾಗುವ ಸಿದ್ಧಸಣ್ಣ ಭತ್ತದ ತಳಿಗಳನ್ನು ಆಸಕ್ತ ರೈತರಿಗೆ ನೀಡಿ, ಜೈವಿಕ ಗೊಬ್ಬರದಿಂದ ಬೀಜೋಪಚಾರ ಮಾಡುವ ಬಗೆಯನ್ನು ತಿಳಿಸಿದರು. ಸಾವಯವ ಕೃಷಿಯಲ್ಲಿ ದೇಸಿ ಬಿತ್ತನೆ, ಅಕ್ಕಿ, ಕಾಳುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಕೆವಿಕೆ ಹಾಗೂ ಸಹಜ ಸೀಡ್ಸ್ ಇವರೆಡರ ಸಹಾಯದಿಂದ ರೈತರು ದೇಸಿ ತಳಿಗಳ ಸಂರಕ್ಷಣೆ ಹಾಗು ಉತ್ಪಾದನೆ ಮಾಡಬಹುದಾಗಿದೆ ಎಂದು ತಿಳಿಸಿದರು.ರೈತ ತಳಿ ಅಭಿವೃದ್ಧಿ ಹಾಗು ಹಕ್ಕುಗಳ ಕಾಯ್ದೆಯಡಿಯಲ್ಲಿ ದೇಸಿ ಬಿತ್ತನೆ ಸಂರಕ್ಷಕ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಾಡ್ರಳ್ಳಿ ಶಂಕರಗುರು, ಹೊಸಮಾಲಂಗಿಯ ರೇಚಣ್ಣ, ಸಿದ್ಧನಹುಂಡಿಯ ಶ್ರೀನಿವಾಸಮೂರ್ತಿ ರೈತರನ್ನು ಉದ್ದೇಶಿಸಿ ದೇಸಿ ಬೀಜದ ಸಂರಕ್ಷಣೆಯ ಕುರಿತು ಹಾಗೂ ತಳಿ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ ಹಾಗೂ ಸುತ್ತಮುತ್ತಲಿನ 45ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಕೆವಿಕೆಯ ವಿಷಯ ತಜ್ಞರಾದ ಡಾ. ವಿನಯ್ ಹಾಗೂ ಕ್ಷೇತ್ರ ವ್ಯವಸ್ಥಾಪಕ ಗಂಗಪ್ಪ ಹಿಪ್ಪರಗಿ ಇದ್ದರು. ಎಚ್.ವಿ. ದಿವ್ಯಾ ಸ್ವಾಗತಿಸಿದರು. ನಿರೂಪಿಸಿದರು. ಕೆವಿಕೆಯ ಗೃಹ ವಿಜ್ಞಾನದ ವಿಷಯ ತಜ್ಞ ಡಾ. ದೀಪಕ್ ವಂದಿಸಿದರು.