ಕನ್ನಡಪ್ರಭ ವಾರ್ತೆ ನಾಗಮಂಗಲ
ಬೆಂಗಳೂರಿನ ಶ್ರೀ ಕಾಲಭೈರವೇಶ್ವರ ಆಯುರ್ವೇದ ಕಾಲೇಜಿನ ಉಪನ್ಯಾಸಕ ಡಾ. ಡಿ.ಎಂ.ಶ್ರೇಯಸ್ ಅವರು, ರೋಗಗಳು ಮತ್ತು ಆಯುರ್ವೇದ ವಿಷಯವಾಗಿ ಮಾತನಾಡಿ, ವಾತ, ಪಿತ್ತ, ಕಫ, ಕ್ಷಯ, ವೃದ್ಧಿ, ರೋಗ ಉತ್ಪತ್ತಿಗೆ ಕಾರಣಗಳು, ರೋಗಗಳಿಗೆ ಉಪಯೋಗಿಸುವ ಮೂಲಿಕೆಗಳ ವಿಧಾನ ಬಗ್ಗೆ ಯಾವ ರೀತಿ ಆಯುರ್ವೇದ ಪದ್ಧತಿಯಲ್ಲಿ ಔಷಧೋಪಚಾರ ಮಾಡಬೇಕು ಎಂದು ತಿಳಿಸಿಕೊಟ್ಟರು.
ಪಾರಂಪರಿಕ ವೈದ್ಯ ಪರಿಷತ್ ದಾವಣಗೆರೆ ಘಟಕದ ಕಾರ್ಯದರ್ಶಿ ವೈದ್ಯೆ ಮಮತಾ ನಾಗರಾಜ್ ಅವರು, ಮನೆ ಮದ್ದು ಬಗ್ಗೆ ಉಪನ್ಯಾಸ ನೀಡಿದರು. ಶಿವಮೊಗ್ಗ ಜಿಲ್ಲೆಯ ಮೊಲಗಪ್ಪ ಗ್ರಾಮದ ಖ್ಯಾತ ವೈದ್ಯೆ ಲಲಿತಮ್ಮ ಅವರು 60 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಔಷಧಿಯನ್ನು ಕೊಟ್ಟು ಗುಣಪಡಿಸಿರುವ ಪುರುಷರತ್ನ ಔಷಧಿ ಗಿಡದಿಂದ ವಿವಿಧ ಬಗೆಯ ಮೂಲವ್ಯಾಧಿಗೆ ಯಾವ ರೀತಿ ಔಷಧೋಪಚಾರ ಮಾಡಬೇಕೆಂಬ ಕುರಿತು ಮಾಹಿತಿ ನೀಡಿದರು.ಉಡುಪಿ ಜಿಲ್ಲೆಯ ಖ್ಯಾತ ಪಾರಂಪರಿಕ ವೈದ್ಯ ಹರೀಶ್ ಸಾಮುಗ ಇವರು ಸಂಧಿವಾತ, ಆಮವಾತ ನಿವಾರಣೆಗೆ 2ಲೀ. ಸಾಸಿವೆ ಎಣ್ಣೆ, 2ಲೀ. ಎಳ್ಳೆಣ್ಣೆ, 1ಲೀ. ಕೊಬ್ಬರಿ ಎಣ್ಣಿಗೆ ಮೂಲಿಕೆಗಳಾದ ಬಲ, ಅಗ್ನಿಮಂತ, ನೋನಿ ಎಲೆ, ಎಕ್ಕದ ಎಲೆ, ಹುಣಸೆ ಎಲೆ, ತುಂಬೆ, ನೀರಗುಂಡಿ (ಲಕ್ಕೆ), ಬೆಳ್ಳುಳ್ಳಿ, ನಿಂಬೆ ಎಲೆ ಇವುಗಳನ್ನು ಬಳಸಿ ಯಾವ ರೀತಿ ತೈಲ ತೆಗೆಯಬೇಕು ಹಾಗೂ ನೋವುಗಳಿಗೆ ಯಾವ ರೀತಿ ಔಷಧೋಪಚಾರ ಮಾಡಬೇಕು ಎಂದು ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಪರಿಷತ್ತಿನ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ಅವರು, ಮೂಳೆ ಮುರಿತ, ಬೆನ್ನು ಮೂಳೆ ಮಣಿಗಳು ಜರುಗಿದಾಗ, ಮಂಡಿ ಚಿಪ್ಪು ಜರುಗಿದಾಗ, ಭುಜ ಮತ್ತು ಕತ್ತಿನ ಭಾಗದಲ್ಲಿ ಕೀಲುಗಳು ಜರುಗಿದಾಗ ಯಾವ ರೀತಿ ಸಮಸ್ಥಿತಿಗೆ ಕೂರಿಸಬೇಕು. ಯಾವ ರೀತಿ ಔಷಧೋಪಚಾರ ಮಾಡಬೇಕು ಎಂದು ಮತ್ತು ಹಿಲ್ಡ್ ಚಪ್ಪಲಿಯಿಂದ ಆಯತಪ್ಪಿ ಬಿದ್ದು ಮಂಡಿ ಚಿಪ್ಪಿನ ನೋವು ಎಂದು ಬಂದಿದ್ದ ರೋಗಿಗೆ ಶಿಬಿರದಲ್ಲೇ ಚಿಕಿತ್ಸೆ ನೀಡಿ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.