ಹುಬ್ಬಳ್ಳಿ:
ನೇಹಾ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಆದಷ್ಟು ಬೇಗ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.ಇಲ್ಲಿನ ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಆದರೆ, ತನಿಖೆಯ ಬೆಳವಣಿಗೆ ಗಮನಿಸಿದರೆ ಸಿಐಡಿ ತನಿಖೆಯಿಂದ ನ್ಯಾಯ ಸಿಗುವ ಭರವಸೆ ನಮಗೆ ಹಾಗೂ ಕುಟುಂಬಕ್ಕಿಲ್ಲ. ಸಚಿವರ ಹೇಳಿಕೆ ಗಮನಿಸಿದರೆ ಪರೋಕ್ಷವಾಗಿ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.ಈ ಕೊಲೆ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಆರೋಪಿಗಳಿದ್ದಾರೆ ಎಂದು ನೇಹಾ ತಂದೆ ನಿರಂಜನ ಅವರೇ ಹೇಳುತ್ತಿದ್ದಾರೆ. ಆದರೆ, ಈವರೆಗೂ ಪೊಲೀಸರು ಅವರನ್ನು ಬಂಧಿಸಿಲ್ಲ. ಸಿಐಡಿ ಅಧಿಕಾರಿಗಳು ಸಹ ವಿಚಾರಣೆಗೆ ಒಳಪಡಿಸದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಇದನ್ನೆಲ್ಲ ಗಮನಿಸಿದರೆ ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಬಹುದು ಎನ್ನುವ ಅನುಮಾನ ನಮಗೆ ಮೂಡುತ್ತಿದೆ ಎಂದರು.
ಈ ಪ್ರಕರಣವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಅವಶ್ಯಕತೆ ಪಕ್ಷಕ್ಕಿಲ್ಲ. ಯಾರು ಕೂಡ ಇದನ್ನು ಜಾತಿ, ಧರ್ಮಕ್ಕೆ ಬಳಸಿಕೊಳ್ಳಬಾರದು. ನೊಂದ ಹೆತ್ತವರಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಕಾರ್ಯ ಮಾಡಬೇಕಿದೆ. ಆದರೆ, ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಸವಾಲು ಎದ್ದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಸಿಐಡಿಯಿಂದ ಸಿಬಿಐ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.ಧೈರ್ಯ ತುಂಬುವ ಕಾರ್ಯವಾಗಲಿ:
ಹಿಂದೂಗಳು ಕೊಲೆಯಾದರೆ ಬಿಜೆಪಿಗೆ ಹಬ್ಬ ಎನ್ನುವ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕನ ನಿವಾಸಕ್ಕೆ ಬೆಂಕಿ ಹಚ್ಚಿದಾಗ, ಕಾಂಗ್ರೆಸ್ ಸರ್ಕಾರ ಅವರಿಗೆ ಸಾಂತ್ವನ ಸಹ ಹೇಳಲು ಹೋಗಲಿಲ್ಲ. ಮಾನವೀಯತೆ ಮರೆತು ವರ್ತಿಸುವುದು ಕಾಂಗ್ರೆಸ್ ಸಂಸ್ಕೃತಿ. ಇಂತಹ ಪ್ರಕರಣದಲ್ಲಿ ರಾಜಕೀಯ ಬಿಟ್ಟು ಮನುಷ್ಯತ್ವದ ಆಧಾರದಲ್ಲಿ ಧೈರ್ಯ ತುಂಬಬೇಕು ಎಂದರು.ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ ಸೇರಿದಂತೆ ಹಲವರಿದ್ದರು.