ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ವರ್ಗಾವಣೆ ಆದೇಶ ರದ್ದಾಗಿದೆ. ಹೀಗಾಗಿ ಸಹಜವಾಗಿ ರುದ್ರೇಶ ಘಾಳಿ ಅವರೇ ಆಯುಕ್ತರಾಗಿ ಮುಂದುವರಿಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಸರ್ಕಾರದಿಂದ ಹೊಸ ಆದೇಶ ಮಾತ್ರ ಹೊರಬಂದಿಲ್ಲ. ಈ ನಡುವೆ ಅಧಿಕಾರ ಸ್ವೀಕರಿಸಲು ಆಗಮಿಸುತ್ತಿದ್ದ ಮಂಜುನಾಥ ಡೊಂಬರ್ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಡುದಾರಿಯಿಂದಲೇ ವಾಪಸ್ ತೆರಳಿದ್ದಾರೆನ್ನಲಾಗಿದೆ.
2 ದಿನದ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ರುದ್ರೇಶ ಘಾಳಿ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಇವರ ವರ್ಗಾವಣೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ನಡುವೆ ವರ್ಗಾವಣೆ ಮಾಡಿದ ಬಳಿಕ ಒಂದು ದಿನ ಬಿಟ್ಟು ಮಂಜುನಾಥ ಡೊಂಬರ್ ಅವರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಿಸಿತ್ತು.ಸರ್ಕಾರಿ ಆದೇಶದಂತೆ ಮಂಜುನಾಥ ಡೊಂಬರ್ ಅವರು, ಶುಕ್ರವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಅದರಂತೆ ಡೊಂಬರ ಅವರು ಸಹ ಧಾರವಾಡದಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದರು. ಆದರೆ, ಅವರು ಮಹಾನಗರ ಪಾಲಿಕೆಗೆ ಆಗಮಿಸುವ ಮುನ್ನವೇ ಸರ್ಕಾರ ಡೊಂಬರ್ ನೇಮಕದ ಆದೇಶವನ್ನು ರದ್ದುಪಡಿಸಿದ ಆದೇಶ ಬಂದಿದೆ.
ಆಗ ಹುಬ್ಬಳ್ಳಿಗೆ ಬರುತ್ತಿದ್ದ ಮಂಜುನಾಥ, ಬಂದ ದಾರಿಗೆ ಸುಂಕ ಇಲ್ಲ ಎಂದುಕೊಂಡು ಬಿವಿಬಿ ಕಾಲೇಜ್ ಕ್ರಾಸ್‌ನಿಂದ ಮರಳಿ ಧಾರವಾಡಕ್ಕೆ ತೆರಳಿದ್ದಾರೆ.ಈ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತರನ್ನಾಗಿ ಘಾಳಿ ಅವರನ್ನು ನಿಯೋಜಿಸಿತ್ತು. ಇದೀಗ ಆ ವರ್ಗಾವಣೆ ಆದೇಶವೇ ರದ್ದಾಗಿರುವುದರಿಂದ ಘಾಳಿ ಇಲ್ಲೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಶಿಕ್ಷಣ ಇಲಾಖೆ ಅಪರ ಆಯುಕ್ತರಾಗಿದ್ದ ಜಯಶ್ರೀ ಶಿಂತ್ರೆ ಅವರೇ ಮುಂದುವರಿಯುತ್ತಾರೋ ಅವರ ಜಾಗೆಗೆ ಬೇರೆಯವರು ಬರುತ್ತಾರೋ ಎಂಬುದನ್ನು ಕಾಯ್ದು ನೋಡಬೇಕಿದೆ.
ಕೇವಲ ಮೂರು ದಿನದಲ್ಲಿ ಮೂರು ಆದೇಶಗಳನ್ನು ಹೊರಡಿಸಿರುವ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್)ಯ ಈ ಧೋರಣೆ ಬಗ್ಗೆ ಅವಳಿ ನಗರದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿರವುದಂತೂ ಸತ್ಯ.ಹುಡಾ ಅಧಿಕಾರ ಸ್ವೀಕಾರ
ಈ ನಡುವೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ದೇವರಾಜ್ ಆರ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಇದ್ದಂತಹ ಸಂತೋಷ ಬಿರಾದಾರ ಅವರನ್ನು ವರ್ಗಾವಣೆ ಮಾಡಲಾಗಿತ್ತು. ತೆರವಾದ ಸ್ಥಾನಕ್ಕೆ ದೇವರಾಜ್ ಅವರನ್ನು ನೇಮಿಸಿತ್ತು. ಅದರಂತೆ ಇದೀಗ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಇವರ ವರ್ಗಾವಣೆ ಆದೇಶವೂ ರದ್ದಾಗಿದೆ ಎನ್ನಲಾಗಿದೆ. ಆದರೆ ರದ್ದಾಗುವ ಮುನ್ನವೇ ದೇವರಾಜ್ ಅಧಿಕಾರ ಸ್ವೀಕರಿಸಿದ ಪರಿಣಾಮ ಇವರೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.