₹150 ಕೋಟಿ ದೋಚಿದ್ದ ಸೈಬರ್‌ ವಂಚಕ ದಾವಣಗೆರೆಯಲ್ಲಿ ಸೆರೆ

| N/A | Published : Oct 12 2025, 05:42 AM IST

Cyber Crime

ಸಾರಾಂಶ

ಆನ್‌ಲೈನ್‌ ವಂಚನೆ ಮೂಲಕ ದೇಶಾದ್ಯಂತ ಹಲವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಸುಮಾರು 150 ಕೋಟಿ ರು.ಎಗರಿಸಿದ್ದ ಅಂತಾರಾಜ್ಯ ಸೈಬರ್ ವಂಚಕನನ್ನು ದಾವಣಗೆರೆಯ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ದಾವಣಗೆರೆ :  ಆನ್‌ಲೈನ್‌ ವಂಚನೆ ಮೂಲಕ ದೇಶಾದ್ಯಂತ ಹಲವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಸುಮಾರು 150 ಕೋಟಿ ರು.ಎಗರಿಸಿದ್ದ ಅಂತಾರಾಜ್ಯ ಸೈಬರ್ ವಂಚಕನನ್ನು ದಾವಣಗೆರೆಯ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಬೇಲೂರಿನ ಶಾಂತಿನಗರ ನಿವಾಸಿ, ಸಿಸಿ ಕ್ಯಾಮರಾ ಕೆಲಸಗಾರ ಸಯ್ಯದ್‌ ಅರ್ಫಾತ್ (28) ಬಂಧಿತ ಆರೋಪಿ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:

ದಾವಣಗೆರೆಯ ನಿಟುವಳ್ಳಿಯ ಎಚ್.ಎಸ್.ಪ್ರಮೋದ್‌ ಎಂಬುವರಿಗೆ ತಮ್ಮ ಕೆನರಾ ಬ್ಯಾಂಕ್ ಖಾತೆ ಆ.14ರಂದು ಬ್ಲಾಕ್ ಆಗಿದ್ದು ಗಮನಕ್ಕೆ ಬಂತು. ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ 5 ದಿನದ ನಂತರ ಖಾತೆ ಓಪನ್ ಆಗುತ್ತದೆ ಎಂದು ವ್ಯವಸ್ಥಾಪಕರು ತಿಳಿಸಿದ್ದರು. ಆ.25ರಂದು ಪ್ರಮೋದ್ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಖಾತೆಯಲ್ಲಿ ಕೇವಲ 4,956 ರು. ಮಾತ್ರ ಬ್ಯಾಲೆನ್ಸ್ ಇರುವುದು ಗೊತ್ತಾಗಿದೆ.

ಕಡಿತಗೊಂಡ 52,60,523 ರು. ಬಗ್ಗೆ ಮಾಹಿತಿ ಕೇಳಿದಾಗ ನೆಟ್ ಬ್ಯಾಂಕಿಂಗ್‌ ಮೂಲಕ ಹಣ ವರ್ಗಾವಣೆಯಾಗಿರುವುದಾಗಿ ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ. ಈ ಬಗ್ಗೆ ಪ್ರಮೋದ್ ಅವರು ದಾವಣಗೆರೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ನೆಟ್‌ ಬ್ಯಾಂಕಿಂಗ್‌ ವ್ಯವಹಾರಕ್ಕೆ ಬಳಸಿದ ಮೊಬೈಲ್ ನಂಬರ್‌ ಪರಿಶೀಲನೆ ವೇಳೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

ಸೈಯ್ಯದ್‌ನ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ದಾವಣಗೆರೆಯ 3ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಪ್ರಮೋದ್‌ ಅವರಿಗೆ 52,60,400 ರು.ಗಳನ್ನು ಮರುಪಾವತಿ ಮಾಡಿಸುವಲ್ಲಿ ಸೈಬರ್‌ ಅಪರಾಧ ಪೊಲೀಸ್‌ ತಂಡ ಯಶಸ್ವಿಯಾಗಿದೆ.

150 ಕೋಟಿ ರು. ವಂಚನೆ:

ತನಿಖೆ ವೇಳೆ ಆರೋಪಿಗಳ ಭಯಾನಕ ಕೃತ್ಯ ಹೊರಬಿದ್ದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಆಂಧ್ರದ ಏಲೂರು, ಮಹಾರಾಷ್ಟ್ರದ ಮುಂಬೈ, ಕರ್ನಾಟಕದ ಬೆಂಗಳೂರು, ದಾವಣಗೆರೆ ಸೈಬರ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ.

ಆರೋಪಿ ಸೈಯದ್, ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾದ ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆದರೆ, ಇದೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯ ಸೈಬರ್ ಪೊಲೀಸ್ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದಾನೆ.

ಆರೋಪಿಗಳ ಚಾಲ್ತಿ ಖಾತೆಯಲ್ಲಿ ಜುಲೈ 27ರಿಂದ ಆ.19ರವರೆಗೆ ಸುಮಾರು 150 ಕೋಟಿ ರು.ಆನ್‌ಲೈನ್ ವಂಚನೆ ಮೊತ್ತ ಡಿಪಾಸಿಟ್ ಆಗಿದ್ದು, ಆರೋಪಿಗಳು 132 ಕೋಟಿ ರು.ವಿತ್ ಡ್ರಾ ಮಾಡಿಕೊಂಡಿದ್ದಾರೆ. ಈ ಹಣ ಯಾರ ಕೈ ಸೇರಿದೆ ಎಂಬ ಕುತೂಹಲ ಇದೀಗ ಮೂಡಿದೆ. ಹಾಲಿ ಖಾತೆಯಲ್ಲಿದ್ದ 18 ಕೋಟಿ ರು.ಗಳನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಇತ್ತೀಚೆಗೆ ದಾವಣಗೆರೆಯ ಪ್ರಮೋದ್‌ ಎಂಬುವವರ ಬ್ಯಾಂಕ್‌ ಖಾತೆಯಿಂದ ಏಕಾಏಕಿ 52 ಲಕ್ಷ ರು. ಹಣ ವರ್ಗಾವಣೆಯಾಗಿತ್ತು.

ಈ ಬಗ್ಗೆ ದೂರು ಸಲ್ಲಿಕೆ. ವಿಚಾರಣೆ ವೇಳೆ ಹಣ ವರ್ಗಕ್ಕೆ ಬಳಸಿದ ಮೊಬೈಲ್‌ ನಂಬರ್‌ ಪತ್ತೆ. ಅದರ ಆಧಾರದಲ್ಲಿ ಅರ್ಫಾತ್‌ ಸೆರೆ

ಬಳಿಕ ಅರ್ಫಾತ್‌ ಖಾತೆಯಿಂದ ಹಣ ಕಳೆದುಕೊಂಡಿದ್ದ ವ್ಯಕ್ತಿಗೆ 52 ಲಕ್ಷ ರು. ಹಣ ಮರಳಿಸಿದ್ದ ದಾವಣಗೆರೆ ಸೈಬರ್‌ ಪೊಲೀಸರು

ಹೆಚ್ಚಿನ ವಿಚಾರಣೆ ವೇಳೆ ಬಂಧಿತ ಅರ್ಫಾತ್‌ ದೇಶಾದ್ಯಂತ ಹಬ್ಬಿರುವ ಸೈಬರ್‌ ವಂಚನೆ ದಾಳಿ ಜಾಲದಲ್ಲಿ ಭಾಗಿಯಾಗಿದ್ದು ಬೆಳಕಿಗೆ

ಆರೋಪಿಗಳ ಖಾತೆ ತಪಾಸಣೆ ವೇಳೆ ಕೇವಲ 25 ದಿನದಲ್ಲಿ ಅವರ ಖಾತೆಗೆ 150 ಕೋಟಿ ಹಣ ಜಮೆ. 138 ಕೋಟಿ ವಿತ್‌ಡ್ರಾ ಪತ್ತೆ

ಹಲವು ರಾಜ್ಯಗಳಲ್ಲಿ ವಂಚನೆ

ತನಿಖೆ ವೇಳೆ ಆರೋಪಿಗಳು ಉತ್ತರ ಪ್ರದೇಶದ ಗಾಜಿಯಾಬಾದ್‌, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಆಂಧ್ರದ ಏಲೂರು, ಮಹಾರಾಷ್ಟ್ರದ ಮುಂಬೈ, ಕರ್ನಾಟಕದ ಬೆಂಗಳೂರು, ದಾವಣಗೆರೆ ಸೈಬರ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಯಲಾಗಿದೆ.

₹138 ಕೋಟಿ ಯಾರ ಬಳಿ?

ಆರೋಪಿಗಳ ಚಾಲ್ತಿ ಖಾತೆಯಲ್ಲಿ ಜುಲೈ 27ರಿಂದ ಆ.19ರವರೆಗೆ ಸುಮಾರು 150 ಕೋಟಿ ರು .ಆನ್‌ಲೈನ್ ವಂಚನೆ ಮೊತ್ತ ಡಿಪಾಸಿಟ್ ಆಗಿದೆ. ಬಳಿಕ ಆರೋಪಿಗಳು 132 ಕೋಟಿ ರು.ವಿತ್ ಡ್ರಾ ಮಾಡಿಕೊಂಡಿದ್ದಾರೆ. ಈ ಹಣ ಯಾರ ಕೈ ಸೇರಿದೆ ಎಂಬ ಕುತೂಹಲ ಇದೀಗ ಮೂಡಿದೆ.

Read more Articles on