ಸಾರಾಂಶ
ಸೈಬರ್ ಖದೀಮರ ಕುತಂತ್ರ ಅರಿಯದೇ ಕನ್ನಡದ ‘ಬುದ್ಧಿವಂತ’ ಚಿತ್ರದ ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಮೋಸ ಹೋಗಿದ್ದಾರೆ
ಬೆಂಗಳೂರು : ದೇಶದಲ್ಲಿ ದಿನೇ ದಿನೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಕರ್ನಾಟಕದಲ್ಲೂ ಈ ಕುರಿತು ಸಾಕಷ್ಟು ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದೀಗ ಈ ಸೈಬರ್ ಖದೀಮರ ಕುತಂತ್ರ ಅರಿಯದೇ ಕನ್ನಡದ ‘ಬುದ್ಧಿವಂತ’ ಚಿತ್ರದ ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಮೋಸ ಹೋಗಿದ್ದಾರೆ. ಸ್ಟಾರ್ ದಂಪತಿಯ ಮೊಬೈಲ್ ಸಂಖ್ಯೆಗಳನ್ನು ಹ್ಯಾಕ್ ಮಾಡಿದ ದುರುಳರು, ಹಣ ವಸೂಲಿ ಮಾಡಿದ್ದಾರೆ.
ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಗೆ ಸೋಮವಾರ ನಟ ಉಪೇಂದ್ರ ದೂರು ಸಹ ದಾಖಲಿಸಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಆನ್‌ಲೈನ್ ಶಾಂಪಿಂಗ್‌ಗೆ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ಬಳಸಿದ್ದ ಮೊಬೈಲ್ ಸಂಖ್ಯೆಯನ್ನು ಸೈಬರ್ ವಂಚಕರು ಹ್ಯಾಕ್ ಮಾಡಿ ಇಂಥ ಕೃತ್ಯಕ್ಕಿಳಿದಿದ್ದರು ಎಂದು ತಿಳಿದು ಬಂದಿದೆ.
ಆಗಿದ್ದೇನು?:
‘ಬೆಳಗ್ಗೆ ಆನ್‌ಲೈನ್ ಮೂಲಕ ವಸ್ತು ತರಿಸಿಕೊಳ್ಳಲು ಪ್ರಿಯಾಂಕಾ ಆರ್ಡರ್ ಮಾಡಿದ್ದರು. ಆಗ ಆಕೆಯ ಮೊಬೈಲ್ ಸಂಖ್ಯೆಗಳನ್ನು ಹ್ಯಾಕ್ ಆಗಿ ಮಾಡಿದ ಹ್ಯಾಕರ್‌ಗಳು ವಂಚನೆ ಕೃತ್ಯಕ್ಕೆ ಇಳಿದರು. ಅಪರಿಚಿತ ವ್ಯಕ್ತಿ (ಹ್ಯಾಕರ್) ಕರೆ ಮಾಡಿ ಏನೇನೋ ಅಪ್ಷನ್‌ಗೆ ಪ್ರತಿಕ್ರಿಯಿಸುವಂತೆ ಸೂಚಿಸಿದ. ಪ್ರಿಯಾಂಕಾಳಿಂದ ನನ್ನ ಹಾಗೂ ನನ್ನ ಆಪ್ತನ ನಂಬರ್ ಅನ್ನೂ ಪಡೆದುಕೊಂಡ’ ಎಂದು ಉಪೇಂದ್ರ ಹೇಳಿದ್ದಾರೆ.
‘ಬಳಿಕ ಹ್ಯಾಕರ್‌ಗಳು ನಮ್ಮ ಎಲ್ಲರ ಸಂಪರ್ಕ ಸಂಖ್ಯೆಗಳನ್ನೂ ಹ್ಯಾಕ್ ಮಾಡಿ ಕೆಲವು ಸ್ನೇಹಿತರಿಗೆ ಹಣ ಬೇಕೆಂದು ಸಂದೇಶ ಕಳಿಸಿದ್ದರು. ಸ್ನೇಹಿತರು ಸಂದೇಶ ನಂಬಿ ₹1.5 ಲಕ್ಷ ಹಣ ನೀಡಿದ್ದರು. ಬಳಿಕ ಸ್ನೇಹಿತರು ನಮಗೆ ಫೋನ್ ಮಾಡಿ, ಹಣ ನೀಡಿದ ವಿಷಯ ತಿಳಿಸಿದಾಗ ನಮ್ಮ ಮೊಬೈಲ್ ಹ್ಯಾಕ್ ಆಗಿರುವುದು ಹಾಗೂ ನಾವು ಮೋಸ ಹೋಗಿರುವುದು ಗೊತ್ತಾಯಿತು. ಹ್ಯಾಕರ್‌ಗಳು ನಮ್ಮ ಹೆಸರಿನಲ್ಲಿ ಹಣ ವಸೂಲಿಗೆ ಮುಂದಾಗಿದ್ದರು’ ಎಂದು ನಟ ಹೇಳಿಕೊಂಡಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಮಾತನಾಡಿ, ‘ನನ್ನ ಹೆಸರಿನಲ್ಲಿ ನನ್ನ ಸ್ನೇಹಿತರಿಗೆ ಹ್ಯಾಕರ್‌ಗಳು ವಾಟ್ಸಾಪ್‌ನಲ್ಲಿ ‘55 ಸಾವಿರ ರು. ಕಳಿಸಿ. ತುರ್ತಾಗಿ ಹಣ ಬೇಕು. 2 ತಾಸಿನಲ್ಲಿ ವಾಪಸ್ ಕಳಿಸುವೆ’ ಎಂದು ಮೆಸೇಜ್ ಮಾಡಿದ್ದರು. ನನ್ನ ಮಗನಿಗೂ ಸಂದೇಶ ಬಂದಿತ್ತು. ಈ ಸಂದೇಶ ನೋಡಿ ನನ್ನ ಮಗ ಸೇರಿ ಕೆಲವು ಸ್ನೇಹಿತರು ಪ್ರತಿಕ್ರಿಯಿಸಿದ್ದರು. ಬಳಿಕ ಸ್ನೇಹಿತರು ನನ್ನನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂತು. ಈ ಬಗ್ಗೆ ತಕ್ಷಣವೇ ದೂರು ನೀಡಿದೆ’ ಎಂದು ಹೇಳಿದ್ದಾರೆ.
ಆಗಿದ್ದೇನು?
- ಆನ್‌ಲೈನ್ ಶಾಪಿಂಗ್‌ಗೆ ಉಪ್ಪಿ ಪತ್ನಿ ಪ್ರಿಯಾಂಕಾ ಮೊಬೈಲ್ ಸಂಖ್ಯೆ ಬಳಸಿದ್ದರು
- ಆ ಸಂಖ್ಯೆ ಜತೆಗೆ ಉಪ್ಪಿ ನಂಬರ್ ಪಡೆದು ಅದನ್ನೂ ಹ್ಯಾಕ್ ಮಾಡಿದ ವಂಚಕರು
- ಉಪ್ಪಿ, ಪ್ರಿಯಾಂಕಾ ಆಪ್ತರ ಸಂಪರ್ಕ ಸಂಖ್ಯೆಗಳಿಗೆ ಸಂದೇಶ. ಹಣಕ್ಕೆ ಕೋರಿಕೆ
- ಉಪ್ಪಿ ದಂಪತಿ ಹೆಸರಿನಲ್ಲಿ ಅರ್ಜೆಂಟ್ ಹಣ ಬೇಕೆಂದು 1.5 ಲಕ್ಷ ರು. ವಸೂಲಿ
- ಬಳಿಕ ಆಪ್ತರು ಈ ಬಗ್ಗೆ ವಿಚಾರಿಸಿದಾಗ ವಂಚನೆ ಬಯಲು. ಉಪ್ಪಿ ದಂಪತಿ ದೂರು