ಸಿನಿವಾರ್ತೆ
ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿ ಲಕ್ಷಾಂತರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ ಖ್ಯಾತ ಗಾಯಕ ಅರಿಜಿತ್ ಸಿಂಗ್ ಇದೀಗ ಕಾನ್ಸರ್ಟ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೋಲ್ಕತ್ತಾದಲ್ಲಿ ಆಯೋಜನೆಯಾಗಿದ್ದ ಸಿತಾರ್ ದಂತಕತೆ ಪಂಡಿತ್ ರವಿಶಂಕರ್ ಪುತ್ರಿ, ಖ್ಯಾತ ಸಿತಾರ್ ವಾದಕಿ ಅನೌಷ್ಕಾ ಶಂಕರ್ ಅವರ ಸಂಗೀತ ಕಚೇರಿಯಲ್ಲಿ ಕಾಣಿಸಿಕೊಂಡ ಅರಿಜಿತ್ ಬೆಂಗಾಲಿಯ ‘ಮಾಯಾ ಭೋರಾ ರಾತಿ’ ಎಂಬ ಸೊಗಸಾದ ಗೀತೆಗೆ ಧ್ವನಿಯಾದರು.
ನನ್ನನ್ನು ಆಹ್ವಾನಿಸಿರುವುದಕ್ಕೆ ಕೃತಜ್ಞ
ಈ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಹಾಡನ್ನು ಹಾಡುವ ಮೊದಲು, ‘ಬಹಳ ನರ್ವಸ್ ಆಗಿದ್ದೀನಿ, ನನ್ನನ್ನು ಆಹ್ವಾನಿಸಿರುವುದಕ್ಕೆ ಕೃತಜ್ಞ. ಮುಂದಿನ ದಿನಗಳಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ನಾನು ಹೆಚ್ಚೆಚ್ಚು ತೊಡಗಿಸಿಕೊಳ್ಳಲಿದ್ದೇನೆ’ ಎನ್ನುತ್ತ ಅನೌಷ್ಕಾ ಜೊತೆಗೆ ಕೆಲಸ ಮಾಡಿದ ಗತ ದಿನಗಳನ್ನು ಸ್ಮರಿಸಿಕೊಂಡರು. ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಪಾಲ್ಗೊಂಡ ಮೊದಲ ಸಾರ್ವಜನಿಕ ಕಾರ್ಯಕ್ರಮ ಇದಾಗಿತ್ತು.
ಅಮೀರ್ ಖಾನ್ ನಿವೃತ್ತಿ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು
ಇದಕ್ಕೂ ಮೊದಲು ಅಮೀರ್ ಖಾನ್, ಅರಿಜಿತ್ ಮನೆಗೆ ತೆರಳಿ ಅವರನ್ನು ನಿವೃತ್ತಿ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ಆದರೆ ಅರಿಜಿತ್ ವಿನಯಪೂರ್ವಕವಾಗಿ ನಿರಾಕರಿಸಿದ್ದರು. ಬಳಿಕ ತನ್ನ ಮುಂಬರುವ ರೊಮ್ಯಾಂಟಿಕ್ ಡ್ರಾಮಾ ‘ಏಕ್ ದಿನ್’ನ ಹಾಡುಗಳಿಗೆ ಅರಿಜಿತ್ ಧ್ವನಿಯಾಗಿರುವುದಕ್ಕೆ ಅಮೀರ್ ಖಾನ್ ಧನ್ಯವಾದ ತಿಳಿಸಿದ್ದರು.
