ಭಾರತ ಮತ್ತು ಅಮೇರಿಕಾ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಘೋಷಣೆಗೆ ದೇಶದ ರೈತ-ಕಾರ್ಮಿಕ ಸಂಘಟನೆಗಳು, ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಉಭಯ ದೇಶಗಳ ಒಪ್ಪಂದದ ಪ್ರತಿ ಸುಟ್ಟು ಹಾಕುವ ಮೂಲಕ ಜಿಲ್ಲೆಯ ರೈತರು ಭಾನುವಾರ ಪ್ರತಿಭಟಿಸಿದ್ದಾರೆ.

ದಾವಣಗೆರೆ: ಭಾರತ ಮತ್ತು ಅಮೇರಿಕಾ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಘೋಷಣೆಗೆ ದೇಶದ ರೈತ-ಕಾರ್ಮಿಕ ಸಂಘಟನೆಗಳು, ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಉಭಯ ದೇಶಗಳ ಒಪ್ಪಂದದ ಪ್ರತಿ ಸುಟ್ಟು ಹಾಕುವ ಮೂಲಕ ಜಿಲ್ಲೆಯ ರೈತರು ಭಾನುವಾರ ಪ್ರತಿಭಟಿಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ರೈತ ಮುಖಂಡರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಅಮೇರಿಕಾ- ಭಾರತದ ಒಪ್ಪಂದದ ಪ್ರತಿಯನ್ನು ದಹಿಸಿ ಒಪ್ಪಂದ ಕೈಬಿಡುವಂತೆ ಆಗ್ರಹಿಸಿದರು. ರೈತ ಮುಖಂಡರು ಮಾತನಾಡಿ, ಅಮೇರಿಕಾದಿಂದ ಆಮದಾಗುವ ಆಹಾರ ಉತ್ಪನ್ನ, ಹಣ್ಣು, ಧಾನ್ಯಗಳ ಮೇಲಿನ ತೆರಿಗೆ ಸಂಪೂರ್ಣ ಅಥವಾ ಭಾಗಶಃ ತೆಗೆದು ಹಾಕುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಅಮೇಕಾದ ಉತ್ಪನ್ನಗಳು ಪ್ರವೇಶಿಸಿ, ಸ್ಥಳೀಯ ರೈತರ ಬೆಲೆಗಳು ಕುಸಿಯುವ ಅಪಾಯ ಬಂದೊದಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಮೇರಿಕಾದ ಜನ್ಯತಂತ್ರ ಮಾರ್ಪಡಿತ ಬೆಳೆಗಳು ಅಥವಾ ಉತ್ಪನ್ನಗಳು ಭಾರತಕ್ಕೆ ಬರುವುದರಿಂದ ಸ್ಥಳೀಯ ರೈತರು ಮತ್ತು ಪರಿಸರಕ್ಕೂ ಹಾನಿಯಾಗುತ್ತದೆಂಬ ಆತಂಕವಿದೆ. ಯಾವುದೇ ರೈತ ಸಂಘಟನೆಗಳನ್ನು ಸಂಪರ್ಕಿಸದೇ ಕೇಂದ್ರ ಸರ್ಕಾರವು ಇಂತಹ ಒಪ್ಪಂದ ಮಾಡಿಕೊಂಡಿದ್ದು, ತಕ್ಷಣವೇ ರದ್ದುಪಡಿಸಬೇಕು ಎಂದರು.

ಒಪ್ಪಂದದಲ್ಲಿ ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುವಂತೆ ಅಥವಾ ಅಮೇರಿಕಾದ ಯಂತ್ರೋಪಕರಣಗಳ ಮೇಲಿನ ಸುಂಕ ಕಡಿತದಂತಹ ಅಂಶಗಳು ಸೇರಿರುವುದು ಸರಿಯಲ್ಲ. ದೇಶದ ರೈತರು, ಕೃಷಿಗೆ, ಜನರಿಗೆ ಅಪಾಯ, ಸಮಸ್ಯೆಗಳನ್ನು ತಂದೊಡ್ಡುವ ಯಾವುದೇ ಒಪ್ಪಂದವಿದ್ದರೂ ಅದನ್ನು ಕೇಂದ್ರ ರದ್ದುಪಡಿಸಲಿ ಎಂದು ತಾಕೀತು ಮಾಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಲ್ಲೂರು ರವಿಕುಮಾರ, ನಿಟುವಳ್ಳಿ ಅಂಜಿನಪ್ಪ ಪೂಜಾರ, ಮಿಯ್ಯಾಪುರ ತಿರುಮಲೇಶ್, ಆರ್.ಎಚ್.ಪ್ರತಾಪ ಮಾಯಕೊಂಡ, ನಾಗರಕಟ್ಟೆ ಜಯನಾಯ್ಕ, ವಿ.ಎಚ್. ಸೋಮಗುಂದ ಇತರರು ಇದ್ದರು.

- - -

-15ಕೆಡಿವಿಜಿ2: