ಮಳೆಗಾಲದ ಅಬ್ಬರದ ಸಮುದ್ರ, ಒಂದೆಡೆ ಕಡಲ್ಕೊರೆತದ ಭೀತಿ, ಮತ್ತೊಂದೆಡೆ ಎತ್ತರದ ಅಲೆಗಳ ಅಬ್ಬರ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲೂ ತನ್ನ ಜೀವವನ್ನೇ ಪಣಕ್ಕಿಟ್ಟು ಸುಮಾರು 200 ಮೀಟರ್ ದೂರ ಸಮುದ್ರದಲ್ಲಿ ಈಜಿ ಬಲೆಯಲ್ಲಿ ಸಿಲುಕಿದ್ದ ಸಮುದ್ರ ಆಮೆಯೊಂದನ್ನು ರಕ್ಷಿಸಿದ ಮಲ್ಪೆಯ ಯುವಕ ಜ್ಞಾನೇಶ್ ಕೋಟ್ಯಾನ್ ಮಾನವೀಯ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಂ ಅಜೆಕಾರು

ಕಾರ್ಕಳ: ಮಳೆಗಾಲದ ಅಬ್ಬರದ ಸಮುದ್ರ, ಒಂದೆಡೆ ಕಡಲ್ಕೊರೆತದ ಭೀತಿ, ಮತ್ತೊಂದೆಡೆ ಎತ್ತರದ ಅಲೆಗಳ ಅಬ್ಬರ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲೂ ತನ್ನ ಜೀವವನ್ನೇ ಪಣಕ್ಕಿಟ್ಟು ಸುಮಾರು 200 ಮೀಟರ್ ದೂರ ಸಮುದ್ರದಲ್ಲಿ ಈಜಿ ಬಲೆಯಲ್ಲಿ ಸಿಲುಕಿದ್ದ ಸಮುದ್ರ ಆಮೆಯೊಂದನ್ನು ರಕ್ಷಿಸಿದ ಮಲ್ಪೆಯ ಯುವಕ ಜ್ಞಾನೇಶ್ ಕೋಟ್ಯಾನ್ ಮಾನವೀಯ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾನುವಾರ ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಮಲ್ಪೆಯ ಹನುಮಾನ್ ವಿಠೋಬ ಭಜನಾ ಮಂದಿರದ ಮುಂಭಾಗದ ಸಮುದ್ರದಲ್ಲಿ ಬೃಹತ್ ಮೀನುಗಾರಿಕಾ ಬಲೆಯೊಂದು ಅಲೆಗಳ ನಡುವೆ ತೇಲುತ್ತಿತ್ತು. ಅದರೊಳಗೆ ಸುಮಾರು 10 ಕೆ.ಜಿ. ತೂಕದ ಸಮುದ್ರ ಆಮೆಯೊಂದು ಸಂಪೂರ್ಣವಾಗಿ ಸಿಲುಕಿ ನರಳಾಡುತ್ತಿತ್ತು. ಕಳೆದ ಸುಮಾರು ಆರು ದಿನಗಳಿಂದ ಬಲೆಯಲ್ಲೇ ಸಿಲುಕಿದ್ದ ಪರಿಣಾಮ ಅದರ ದೇಹದ ಹಲವೆಡೆ ಗಾಯಗಳಾಗಿದ್ದು, ಉಸಿರಾಡಲೂ ಪರದಾಡುತ್ತಿತ್ತು.

ಈ ದೃಶ್ಯ ಕಂಡ ಜ್ಞಾನೇಶ್ ಕೋಟ್ಯಾನ್ ಕ್ಷಣವೂ ವಿಳಂಬ ಮಾಡದೆ ಸಮುದ್ರಕ್ಕಿಳಿದರು. ಪ್ರಬಲ ಅಲೆಗಳ ವಿರುದ್ಧ ಸಾಗಿ ಸುಮಾರು 200 ಮೀಟರ್ ಈಜಿ ಆಮೆಯಿದ್ದ ಸ್ಥಳ ತಲುಪಿದರು. ತಮ್ಮ ಬಳಿಯಿದ್ದ ಚೂರಿಯಿಂದ ಬಲೆ ಕತ್ತರಿಸಿ ಆಮೆಯನ್ನು ಬಂಧ ಮುಕ್ತಗೊಳಿಸಿದರು. ಈ ರಕ್ಷಣಾ ಕಾರ್ಯದಲ್ಲಿ ಸಾತ್ವಿಕ್ ಸಾಥ್ ನೀಡಿದರು.

ಗಾಯಗೊಂಡಿದ್ದ ಆಮೆಯನ್ನು ಸುರಕ್ಷಿತವಾಗಿ ಮತ್ತೆ ಸಮುದ್ರಕ್ಕೆ ಬಿಡಲಾಯಿತು. ಈ ದೃಶ್ಯ ಕಂಡ ಸ್ಥಳೀಯರು ಜ್ಞಾನೇಶ್ ಅವರ ಧೈರ್ಯ, ಸಮಯಪ್ರಜ್ಞೆ ಹಾಗೂ ಜೀವಪರ ಕಾಳಜಿಯನ್ನು ಶ್ಲಾಘಿಸಿದರು.

ರಕ್ಷಿಸಲ್ಪಟ್ಟ ಆಮೆ ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಜಾತಿಗೆ ಸೇರಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಮೀನುಗಾರಿಕಾ ಬಲೆಗಳಲ್ಲಿ ಸಿಲುಕಿ ಸಾವನ್ನಪ್ಪುವುದು ಈ ಜಾತಿಯ ಆಮೆಗಳಿಗೆ ಸಾಮಾನ್ಯ ಸಮಸ್ಯೆಯಾಗಿದ್ದು, ಸಮುದ್ರ ಮಾಲಿನ್ಯ, ಪ್ಲಾಸ್ಟಿಕ್ ತ್ಯಾಜ್ಯ, ಕಡಲತೀರಗಳ ನಾಶ ಹಾಗೂ ಅಕ್ರಮ ಬೇಟೆಯಿಂದಾಗಿ ಇವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.ಆಲಿವ್ ರಿಡ್ಲಿ ಆಮೆಗಳು ಭಾರತೀಯ ಮಹಾಸಾಗರ, ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಪ್ರತಿ ವರ್ಷ ಸಂತಾನೋತ್ಪತ್ತಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಕಡಲತೀರಕ್ಕೆ ಬಂದು ಮೊಟ್ಟೆ ಇಡುವ ವಿಶಿಷ್ಟ ಸ್ವಭಾವವನ್ನು ಹೊಂದಿದ್ದು, ಈ ಸಾಮೂಹಿಕ ಮೊಟ್ಟೆ ಇಡುವ ಪ್ರಕ್ರಿಯೆಯನ್ನು ‘ಅರಿಬಾಡಾ’ ಎಂದು ಕರೆಯಲಾಗುತ್ತದೆ.

ಅಳಿವಿನಂಚಿನಲ್ಲಿರುವ ಈ ಜಾತಿಯನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅನುಸೂಚಿ–I ಅಡಿಯಲ್ಲಿ ಅತ್ಯುನ್ನತ ರಕ್ಷಣೆಗೆ ಒಳಪಡಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಈ ಜೀವಿಯನ್ನು ಅಪಾಯದಲ್ಲಿರುವ ಪ್ರಭೇದಗಳ ಲ್ಲಿ ಗುರುತಿಸಲಾಗಿದೆ.

ಮಾನವೀಯತೆ ಮನುಷ್ಯರಿಗೆ ಮಾತ್ರ ಸೀಮಿತವಾಗಬಾರದು. ಮಾತಾಡಲಾರದ ಜೀವಿಗೂ ನೆರವಾಗುವುದು ನಮ್ಮ ಕರ್ತವ್ಯ.

-ಜ್ಞಾನೇಶ್ ಕೋಟ್ಯಾನ್ ಮಲ್ಪೆ