ಸಾರಾಂಶ
ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಕಂಪನಿ ಸಹ ಸಂಸ್ಥಾಪಕಿ ಸುಧಾಮೂರ್ತಿ ಅವರಿಗೆ ಕೇಂದ್ರ ದೂರ ಸಂಪರ್ಕ ಸಚಿವಾಲಯದ ನೌಕರರ ಹೆಸರಿನಲ್ಲಿ ವಂಚಿಸಿ ಹಣ ದೋಚಲು ಸೈಬರ್ ಕಿಡಿಗೇಡಿಗಳು ಯತ್ನಿಸಿರುವ ಘಟನೆ ನಡೆದಿದೆ.
ಬೆಂಗಳೂರು : ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಕಂಪನಿ ಸಹ ಸಂಸ್ಥಾಪಕಿ ಸುಧಾಮೂರ್ತಿ ಅವರಿಗೆ ಕೇಂದ್ರ ದೂರ ಸಂಪರ್ಕ ಸಚಿವಾಲಯದ ನೌಕರರ ಹೆಸರಿನಲ್ಲಿ ವಂಚಿಸಿ ಹಣ ದೋಚಲು ಸೈಬರ್ ಕಿಡಿಗೇಡಿಗಳು ಯತ್ನಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ರಾಜ್ಯ ಸಭಾ ಸದಸ್ಯರ ಸಹಾಯಕ ಗಣಪತಿ ಬೊಪ್ಪಯ್ಯ ನೀಡಿದ ದೂರಿನ ಮೇರೆಗೆ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಏನಿದು ಪ್ರಕರಣ?:
ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರಿಗೆ ಸೆ.5 ರಂದು ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಆಗ ಕರೆ ಸ್ವೀಕರಿಸಿದ ಸುಧಾಮೂರ್ತಿ ಅವರಿಗೆ ಕೇಂದ್ರ ಸರ್ಕಾರದ ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಮೊಬೈಲ್ ಸಂಖ್ಯೆ ಜನವರಿಯಲ್ಲಿ ಆಧಾರ್‌ಗೆ ಲಿಂಕ್ ಆಗಿಲ್ಲ ಎಂದು ಹೇಳಿ ವೈಯಕ್ತಿಕ ವಿವರ ಸಂಗ್ರಹಿಸಲು ಕಿಡಿಗೇಡಿ ಯತ್ನಿಸಿದ್ದಾನೆ. ಅಲ್ಲದೆ, ತಮ್ಮ ಮೊಬೈಲ್ ಸಂಖ್ಯೆಯಿಂದ ಅಶ್ಲೀಲ ವಿಡಿಯೋಗಳು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿ ಅಸಭ್ಯವಾಗಿ ಮಾತನಾಡಿದ್ದಾನೆ. ಕೂಡಲೇ ಆತನ ಕರೆ ಸ್ಥಗಿತಗೊಳಿಸಿದ ಸುಧಾ ಮೂರ್ತಿ ಅವರು, ತಮಗೆ ಕರೆ ಬಂದಿದ್ದ ಮೊಬೈಲ್ ಸಂಖ್ಯೆಯನ್ನು ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿದಾಗ ಟೆಲಿಕಾಂ ಡಿಪಾರ್ಟ್‌ಮೆಂಟ್ ಎಂದು ತೋರಿಸಿದೆ. ಬಳಿಕ ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದಾಗ ಸೈಬರ್ ವಂಚಕರ ಕೃತ್ಯ ಎಂಬುದು ಗೊತ್ತಾಗಿದೆ. ಅಂತೆಯೇ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.