ಸಾರಾಂಶ
ಕಾಂಗ್ರೆಸ್ ಇದೀಗ ಮತ್ತೆ ಅನಾವಶ್ಯಕವಾಗಿ ಸಂಸದೆ ಸುಧಾಮೂರ್ತಿ, ಕೇಂದ್ರ ಸಚಿವ ಜೈಶಂಕರ್ ಹೆಸರನ್ನೆತ್ತಿ ಹೊಸ ವಿವಾದವನ್ನು ಮೈಮೇಲೆಳೆದುಕೊಂಡಿದೆ.
ನವದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರ ತಲೆಯಿಲ್ಲದ ಫೋಟೋವನ್ನು ‘ಗಾಯಬ್’ (ಮಾಯ) ಎಂಬ ಬರಹದೊಂದಿಗೆ ಹಂಚಿಕೊಂಡು ಪಕ್ಷದ ವರಿಷ್ಠರಿಂದಲೇ ಕಿವಿ ಹಿಂಡಿಸಿಕೊಂಡಿದ್ದ ಕಾಂಗ್ರೆಸ್ ಇದೀಗ ಮತ್ತೆ ಅನಾವಶ್ಯಕವಾಗಿ ಸಂಸದೆ ಸುಧಾಮೂರ್ತಿ, ಕೇಂದ್ರ ಸಚಿವ ಜೈಶಂಕರ್ ಹೆಸರನ್ನೆತ್ತಿ ಹೊಸ ವಿವಾದವನ್ನು ಮೈಮೇಲೆಳೆದುಕೊಂಡಿದೆ.
ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ‘ನಾನು ಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ, ರಾಜ್ಯದ ಸಂಸದರೊಬ್ಬರ ಅಪ್ರಾಪ್ತ ಮಕ್ಕಳು ಭಾರತೀಯ ಪ್ರಜೆಗಳೇ ಅಲ್ಲ. ಇದು ಆರಂಭವಷ್ಟೇ. ಹೊರಬರಬೇಕಾದ ವಿಷಯಗಳು ಅನೇಕವಿದೆ’ ಎಂದಿದ್ದರು.
ಇದನ್ನವರು, ಬ್ರಿಟನ್ ಮಹಿಳೆ ವರಿಸಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಉದ್ದೇಶಿಸಿ ಹೇಳಿದ್ದರು., ಬಿಸ್ವಾ ಅವರ ಈ ಟ್ವೀಟ್‌ಗೆ ಮರುಟ್ವೀಟ್ ಮಾಡಿರುವ ಕಾಂಗ್ರೆಸ್, ‘ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ? ಎಸ್. ಜೈಶಂಕರ್, ಪಿಯೂಷ್ ಗೋಯಲ್, ಹರ್ದೀಪ್ ಸಿಂಗ್ ಪುರಿ ಅಥವಾ ಸುಧಾ ಮೂರ್ತಿಯವರ ಮಕ್ಕಳ ಬಗ್ಗೆ ಹೇಳುತ್ತಿದ್ದೀರಾ?’ ಎಂದು ಹೆಸರನ್ನುಲ್ಲೇಖಿಸಿ ಪ್ರಶ್ನೆ ಮಾಡಿದೆ. ಇದು ವಿವಾದಕ್ಕೆ ಎಡೆಮಾಡಿದೆ.