ಮಾರ್ಚ್‌-ಮೇವರೆಗೆ ಭಾರಿ ತಾಪ: ಹವಾಮಾನ ಇಲಾಖೆ

ನವದೆಹಲಿ: ದೇಶ ಬೇಸಿಗೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಮಾರ್ಚ್‌ನಿಂದ ಮೇ ವರೆಗೆ ಸಾಮಾನ್ಯಕ್ಕಿಂತ ಅತಿಹೆಚ್ಚು ತಾಪಮಾನ ದಾಖಲಾಗಲಿದೆ ಹಾಗೂ ಬಿಸಿಗಾಳಿ (ಹೀಟ್‌ ವೇವ್‌) ಬೀಸುವ ಸಾಧ್ಯತೆ ಇದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕರ್ನಾಟಕ, ಉತ್ತರ ತಮಿಳುನಾಡು, ಪಶ್ಚಿಮ ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್, ದಕ್ಷಿಣ ಮತ್ತು ಪೂರ್ವ ಮಹಾರಾಷ್ಟ್ರ, ಪೂರ್ವ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಗಂಗಾತಟ, ಒಡಿಶಾ, ಛತ್ತೀಸ್‌ಗಢ, ತೆಲಂಗಾಣ, ಆಂಧ್ರಪ್ರದೇಶದ ಭಾಗಗಳು ಈ ಆಪತ್ತನ್ನು ಎದುರಿಸಲಿವೆ ಎಂದು ಅದು ಹೇಳಿದೆ.ಮಾರ್ಚ್‌ನಲ್ಲಿ ದೇಶಾದ್ಯಂತ ಸರಾಸರಿ ಮಳೆಯಾಗುವ ಕಾರಣ ಆ ತಿಂಗಳಲ್ಲಿ, ಈಶಾನ್ಯ, ಪೂರ್ವ ಮತ್ತು ಪಶ್ಚಿಮ ಹಿಮಾಲಯ ಪ್ರದೇಶದ ಕೆಲವು ಭಾಗಗಳನ್ನು ಹೊರತುಪಡಿಸಿ, ಕೆಲವೆಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎನ್ನಲಾಗಿದೆ.