ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ : ಕಲ್ಯಾಣ ಕರ್ನಾಟಕದಲ್ಲಿ ಸೂರ್ಯ ಪ್ರಖರತೆ ಹೆಚ್ಚುತ್ತಲೇ ಇದೆ. ಮಾರ್ಚ್ ತಿಂಗಳಲ್ಲಿಯೇ ಏಪ್ರಿಲ್ ಬಿಸಿಲಿನ ಅನುಭವ ನೀಡುತ್ತಿದ್ದು, ಜನರು ಪರಿತಪಿಸುತ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಸ್ಪತ್ರೆಗಳಲ್ಲಿ ಹೀಟ್ ಸ್ಟ್ರೋಕ್ ಪ್ರತ್ಯೇಕ ವಾರ್ಡ್ ಪ್ರಾರಂಭಿಸಿಸಲು ಸೂಚಿಸಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಹತ್ತಾರು ಬೆಡ್ ಇರುವ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ.
ಬಿಸಿಗಾಳಿ ಆತಂಕ: ರಾಜ್ಯ ಹವಮಾನ ಇಲಾಖೆ ಈ ವರ್ಷ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಮುನ್ನಚ್ಚರಿಕೆ ನೀಡಿದೆ. ಹಿಂದಿನ ಎಲ್ಲ ದಾಖಲೆ ಮೀರಿ ತಾಪಮಾನ ಹೆಚ್ಚಳವಾಗಲಿದೆ ಎಂದು ತಿಳಿಸಿದೆ. ಹೀಗಾಗಿ, ಕೊಪ್ಪಳದಲ್ಲಿ ಹೀಟ್ ಸ್ಟ್ರೋಕ್ ವಾರ್ಡ್‌ನ್ನು ಜಿಲ್ಲಾಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿ ವಿಶೇಷ ಸೌಲಭ್ಯಗಳೇನೂ ಇಲ್ಲ. ಇತರೆ ವಾರ್ಡ್‌ಗಳಲ್ಲಿ ಇರುವಂತೆಯೇ ಪ್ರಥಮ ಚಿಕಿತ್ಸಾ ಸೌಲಭ್ಯವಿದೆ. ಆದರೆ, ಬೆಡ್‌ಗಳ ನಡುವೆ ಅಂತರ, ಪ್ಯಾನ್ ಸೌಲಭ್ಯ ಸೇರಿದಂತೆ ಹೀಟ್ ಸ್ಟ್ರೋಕ್‌ಗೆ ಒಳಗಾದವರಿಗೆ ಕೊಡಬೇಕಾದ ಪ್ರಥಮ ಚಿಕಿತ್ಸೆಯ ಸೌಲಭ್ಯ ಇರಿಸಲಾಗಿದೆ.
ಹೀಟ್ ಸ್ಟ್ರೋಕ್ ಪ್ರತ್ಯೇಕ ವಾರ್ಡ್ ಪ್ರಾರಂಭಿಸಿರುವುದು ಇದೇ ಮೊದಲು ಎನ್ನುವುದು ವಿಶೇಷ. ಈ ಹಿಂದೆ ಪ್ರತ್ಯೇಕ ವಾರ್ಡ್ ಪ್ರಾರಂಭಿಸಿದ ಉದಾಹರಣೆ ಇಲ್ಲ ಎನ್ನುತ್ತಾರೆ ಜಿಲ್ಲಾಸ್ಪತ್ರೆಯ ವೈದ್ಯರು. ಹವಮಾನ ಇಲಾಖೆ ನೀಡಿರುವ ಮುನ್ನಚ್ಚರಿಕೆಯಿಂದಲೇ ಸರ್ಕಾರ ಜಿಲ್ಲಾಸ್ಪತ್ರೆಗಳಲ್ಲಿ ಹೀಟ್ ಸ್ಟ್ರೋಕ್ ಪ್ರತ್ಯೇಕ ವಾರ್ಡ್ ಪ್ರಾರಂಭಿಸಲಾಗಿದೆ ಎನ್ನಲಾಗಿದೆ.
ಏಪ್ರಿಲ್ ಬಿಸಿಲು: ಮಾರ್ಚ್ ಎರಡನೇ ವಾರದಲ್ಲಿಯೇ ಏಪ್ರಿಲ್ ತಿಂಗಳಲ್ಲಿ ಇರುತ್ತಿದ್ದ ಬಿಸಿಲು, ಸೆಕೆ ಪ್ರಾರಂಭವಾಗಿದೆ. ಇದರಿಂದ ಜನರು ಚಡಪಡಿಸುತ್ತಿದ್ದಾರೆ. ಕೊಪ್ಪಳ ಸೇರಿದಂತೆ ಜಿಲ್ಲಾದ್ಯಂತ 36 ಡಿಗ್ರಿ ಸೆಲ್ಸಿಯಸ್‌ಗೂ ಮೀರಿದ ತಾಪಮಾನ ದಾಖಲಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ ಎರಡನೇ ವಾರದಲ್ಲಿ 32ರಿಂದ 34 ಇರುತ್ತಿದ್ದ ತಾಪಮಾನ ಈ ಬಾರಿ 36 ದಾಟಲಾರಂಭಿಸಿದೆ.
ವೈದ್ಯರು ಸಲಹೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈದ್ಯರು ಬಿಸಿಲಿನ ತಾಪದ ಕುರಿತು ಮುನ್ನಚ್ಚರಿಕೆ ನೀಡಿದ್ದಾರೆ. ನೀರು ಹೆಚ್ಚು ಕುಡಿಯುವುದು, ಬೆಳಗ್ಗೆಯೇ ಕೆಲಸ-ಕಾರ್ಯ ಪೂರ್ವಣಗೊಳಿಸಿಕೊಳ್ಳುವುದು, ಮಧ್ಯಾಹ್ನ ಬಿಸಿಲಿನಲ್ಲಿ ಅನಗತ್ಯವಾಗಿ ತಿರುಗಾಡದಿರುವುದು. ಸಾಧ್ಯವಾದಷ್ಟು ನೆರಳಿನಲ್ಲಿ ಇರುವುದು. ಮನೆಯಲ್ಲಿ ಇದ್ದಾಗಲೂ ಕಿಟಕಿ, ಬಾಗಿಲು ತೆರೆದುಕೊಂಡು ಮುಕ್ತವಾಗಿ ಗಾಳಿಯಾಡುವಂತೆ ನೋಡಿಕೊಳ್ಳುವುದು. ಹಣ್ಣು, ತರಕಾರಿ ಸೇರಿದಂತೆ ದೇಹಕ್ಕೆ ಹಿತವಾದಂತಹ ಆಹಾರ ಸೇವಿಸುವುದು ಸೇರಿದಂತೆ ಅನೇಕ ರೀತಿಯ ಸಲಹೆ ನೀಡಿದ್ದಾರೆ.
ತುರ್ತು ಚಿಕಿತ್ಸೆ: ಬಿಸಿಲಿನ ತಾಪದಿಂದ ಬಳಲುವವರು ಕೂಡಲೇ ಚಿಕಿತ್ಸೆ ಪಡೆಯಬೇಕು. ಅದರಲ್ಲೂ ಹೀಟ್ ಸ್ಟ್ರೋಕ್ ಗೆ ತುತ್ತಾದವರು ಜಿಲ್ಲಾಸ್ಪತ್ರೆಯಲ್ಲಿ ತೆರೆದಿರುವ ವಿಶೇಷ ವಾರ್ಡ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ. ತಾಲೂಕು ಕೇಂದ್ರಗಳಲ್ಲಿಯೂ ಶೀಘ್ರದಲ್ಲಿಯೇ ಹೀಟ್ ಸ್ಟ್ರೋಕ್ ವಾರ್ಡ್ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
ಬೆಳಗ್ಗೆ 8 ಗಂಟೆ ಆಗುತ್ತಿದ್ದಂತೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ. ಇದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಬಿಸಿಲ ಝಳದಿಂದ ಆಯಾಸವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಗಾಳೆಪ್ಪ ಟಪಾಲ ಹೇಳಿದರು.
ಈ ವರ್ಷ ಬಿಸಿಲನ ತಾಪಮಾನ ಹೆಚ್ಚಳವಾಗುವ ಮುನ್ನೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ, ಹೀಟ್ ಸ್ಟ್ರೋಕ್ ವಾರ್ಡ್ ಪ್ರಾರಂಭಿಸಲಾಗಿದೆ. ಈ ವರೆಗೆ ಯಾವುದೇ ರೋಗಿ ದಾಖಲಾಗಿಲ್ಲ ಎಂದು ಜಿಲ್ಲಾಶಸ್ತ್ರ ಚಿಕಿತ್ಸಕ ಡಾ. ಕೃಷ್ಣಾ ಓಂಕಾರ ಹೇಳಿದರು.