ಕರ್ನಾಟಕ ಬಜೆಟ್ : ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಬಜೆಟ್‌ನಲ್ಲಿ ಸಿದ್ದರಾಮಯ್ಯ ಭರ್ಜರಿ ಸಹಕಾರ

| N/A | Published : Mar 08 2025, 09:14 AM IST

Karnataka CM Siddaramaiah with Budget document (Photo/ANI)

ಸಾರಾಂಶ

ಕಲ್ಯಾಣ ಕರ್ನಾಟಕಕ್ಕೆ ಸಿದ್ದು ಭರ್ಜರಿ ಸಹಕಾರ

- ಕಲಬುರಗಿಯಲ್ಲಿ ಮೆಗಾ ಡೈರಿ, ಕೊಪ್ಪಳದಲ್ಲಿ ಕುರಿ- ಮೇಕೆ ಮಾರುಕಟ್ಟೆ

- ತೊಗರಿಗೆ ₹450 ಪ್ರೋತ್ಸಾಹ ಧನ । ಹೈನುಗಾರಿಕೆಗೆ ₹10 ಕೋಟಿ

- ರಾಜ್ಯದ ಎಪಿಎಂಸಿಗಳಲ್ಲಿ ದುಡಿವ ಶ್ರಮಿಕರಿಗೆ ಇನ್ನು 5 ಲಕ್ಷ ರು. ವಿಮೆ

ಬೆಂಗಳೂರು :  ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಬಜೆಟ್‌ನಲ್ಲಿ ಕೆಲ ಹೊಸ ಯೋಜನೆಗಳನ್ನು ಘೋಷಿಸಿ ಆ ಭಾಗದ ಜನರ ಅಸಮಾಧಾನ ಕಡಿಮೆಗೊಳಿಸಲು ಯತ್ನಿಸಲಾಗಿದೆ. ಕಲಬುರಗಿಯಲ್ಲಿ ಮೆಗಾಡೈರಿ, ಪ್ರಾದೇಶಿಕ ಸಹಕಾರ ಭವನ, ಕೊಪ್ಪಳದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಪ್ರಕಟಿಸಲಾಗಿದೆ. ಮುಖ್ಯವಾಗಿ ತೊಗರಿಗೆ ಹೆಚ್ಚುವರಿಯಾಗಿ 450 ರು. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಲಾಗಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್‌ಗೆ 7,550 ರು. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹ ಧನ 450 ರು.ಗಳಂತೆ ಒಟ್ಟು 138 ಕೋಟಿ ರು. ಒದಗಿಸಲಾಗಿದೆ. ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್‌, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಅನುಕೂಲವಾಗಲಿದೆ.

ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದಲ್ಲಿ 25 ಕೋಟಿ ರು. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಸ್ಥಾಪಿಸಲು ಅನುದಾನ ಮೀಸಲು ಇಡಲಾಗಿದೆ. ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಅನುವಾಗುವಂತೆ ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆ ಉತ್ತೇಜಿಸಲು 10 ಕೋಟಿ ರು.ಅನುದಾನವನ್ನು ಮೊದಲ ಹಂತದಲ್ಲಿ ನೀಡಲು ಉದ್ದೇಶಿಸಲಾಗಿದೆ. ಅಂತೆಯೇ 50 ಕೋಟಿ ರು.ವೆಚ್ಚದಲ್ಲಿ ಕಲಬುರಗಿಯಲ್ಲಿ ಕೆಕೆಆರ್‌ಡಿಬಿ ವತಿಯಿಂದ ನೂತನ ಮೆಗಾ ಡೈರಿ ಮತ್ತು 10 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಸಹಕಾರ ಭವನ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಎಪಿಎಂಸಿ ಶ್ರಮಿಕರ ವಿಮೆ ಹೆಚ್ಚಳ:

ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ(ಎಪಿಎಂಸಿ) ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿರುವ ಶ್ರಮಿಕರು ಮೃತರಾದರೆ ಅವರ ವಾರಸುದಾರರಿಗೆ ನೀಡುತ್ತಿದ್ದ ಒಂದು ಲಕ್ಷ ರು. ವಿಮಾ ಮೊತ್ತವನ್ನು ಐದು ಲಕ್ಷ ರು.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿರುವ ಮಾರುಕಟ್ಟೆ ಸಮಿತಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಬೆಂಗಳೂರಿನ ಹೊರವಲಯದಲ್ಲಿ ಹೊಸ ಸ್ಯಾಟಲೈಟ್‌ ಮಾರ್ಕೆಟ್‌ ಸ್ಥಾಪಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಪೂರ್ಣಗೊಂಡಿರುವ ಉಗ್ರಾಣಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಒದಗಿಸಲು ಪ್ರಸಕ್ತ ಸಾಲಿನಲ್ಲಿ ಬಾಕಿ ಇರುವ 47 ಕೋಟಿ ರು.ಮೊತ್ತವನ್ನು ಒದಗಿಸಲು ನಿರ್ಧರಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್‌ ಹೂವಿನ ಮಾರುಕಟ್ಟೆಯನ್ನು ಹಾಗೂ ಕೆಜಿಎಫ್‌ನಲ್ಲಿ ರೈತರ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

2024-25ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,900 ಕೋಟಿ ರು. ಕೃಷಿ ಸಾಲ ವಿತರಿಸಲಾಗಿದೆ. ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ನಬಾರ್ಡ್‌ ಶೇ.58ರಷ್ಟು ಕಡಿಮೆ ಮಾಡಿದೆ. ಆದರೂ ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ಸಾಲವನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ.

ಪ್ರಸಕ್ತ ಸಾಲಿನಲ್ಲಿ 3 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣ ಮಾಡಲು ಉದ್ದೇಶಿಸಲಾಗಿದೆ. ರಾಜ್ಯದ ಎಲ್ಲಾ ನೋಂದಾಯಿತ ಗೃಹ ನಿರ್ಮಾಣ ಸಹಕಾರ ಸಂಘಗಳ ಮಾಹಿತಿಯನ್ನು ರಾಜ್ಯ ಸಹಕಾರ ವಸತಿ ಮಹಾಮಂಡಳದ ವತಿಯಿಂದ ಆನ್‌ಲೈನ್‌ನಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಠೇವಣಿದಾರರ ಹಿತಾಸಕ್ತಿ ಕಾಪಾಡಲು ಹಾಗೂ ಅವ್ಯವಹಾರ ತಡೆಯಲು ಸಹಾಯವಾಣಿ ಮತ್ತು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರದಿಗಳನ್ನು ಡಿಜಿಟಲೀಕರಣಗೊಳಿಸಲು ಉದ್ದೇಶಿಸಲಾಗಿದೆ.

ಸಂಶೋಧನೆಗೆ ಅವಕಾಶವಿಲ್ಲ

ರಾಜ್ಯ ಸರ್ಕಾರ ಸಹಕಾರಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ಪ್ರಸ್ತಾಪಿಸದಿರುವುದು ಮತ್ತು ಅನುದಾನ ಹಂಚಿಕೆ ಮಾಡದಿರುವುದು ಶೋಚನೀಯವಾಗಿದೆ. ಸಹಕಾರ ಇಲಾಖೆಯಲ್ಲಿ ಕಾರ್ಯಕ್ಷಮತೆ, ಪಾರದರ್ಶಕತೆ ಹಾಗೂ ಜನಸ್ನೇಹಿ ಸೇವೆಗಳಿಗೆ ಆದ್ಯತೆ ನೀಡಿರುವುದು ಅಭಿನಂದನಾರ್ಹ. ಅದರಲ್ಲೂ ವಿಶೇಷವಾಗಿ ಗೃಹ ನಿರ್ಮಾಣ ಸಹಕಾರ ಸಂಘಗಳ ಸಮಸ್ಯೆಗಳ ಪರಿಹಾರ, ಠೇವಣಿದಾರರ ಹಿತಾಸಕ್ತಿ ಕಾಪಾಡಲು ಸಹಾಯವಾಣಿ ಪ್ರಾರಂಭಿಸುವುದು ಉತ್ತಮ ಸುಧಾರಣಾ ಕ್ರಮವಾಗಿದೆ.

- ಎಚ್‌.ಎಸ್‌.ನಾಗರಾಜಯ್ಯ, ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕರು, ಬೆಂಗಳೂರು