ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕುಟುಂಬ ನಿರ್ವಹಣೆ ಹಾಗೂ ಸಮಾಜದಲ್ಲಿ ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರ ವಹಿಸುವಂತಹ ಮಹಿಳೆಯರ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕುಟುಂಬ ನಿರ್ವಹಣೆ ಹಾಗೂ ಸಮಾಜದಲ್ಲಿ ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರ ವಹಿಸುವಂತಹ ಮಹಿಳೆಯರ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.ಪಟ್ಟಣದ ಅಕ್ಕಮಹಾದೇವಿ ಮಹಿಳಾ ಸಮಾಜದ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಲಾಗಿದ್ದ ೧೨ನೇ ಕ್ನನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ನಡೆದ ಮಹಿಳಾ ಸಂವೇದನೆ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಅವಲಂಬಿತರೊಂದಿಗೆ ತಾಯಿ, ತಂಗಿ, ಸೊಸೆಯಾಗುವ ಮೂಲಕ ಕುಟುಂಬದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಇಂತಹ ಮಹಿಳೆಯರಿಗೆ ಉತ್ತಮ ಸ್ಥಾನಮಾನ ನೀಡುವುದರೊಂದಿಗೆ ಅವರಿಗೆ ಸಿಗಲೇಬೇಕಾದಂತಹ ಅವಕಾಶಗಳು ಗೌರವಗಳನ್ನು ನೀಡಬೇಕು ಎಂದ ಅವರು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅವರನ್ನು ಸದೃಢರನ್ನಾಗಿಸಬೇಕಿದೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾಗಿರುವಂತಹ ಮೀಸಲಾತಿ ಸರಿಯಾಗಿ ಸಿಗುತ್ತಿಲ್ಲ. ಮಹಿಳೆರಿಗೆ ಇರುವಂತಹ ಅವಕಾಶಗಳ ಬಗ್ಗೆ ಮತ್ತು ಅವರು ಸಮಾಜದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸಲು ಇಂತಹ ವೇದಿಕೆಗಳು ಅಗತ್ಯ. ಈ ಬಾರಿಯ ಸಮ್ಮೇಳದ ಅಂಗವಾಗಿ ನಡೆಯುತ್ತಿರುವ ಈ ಮಹಿಳಾ ಸಂವೇದನೆ ಗೋಷ್ಠಿ ಉತ್ತಮವಾಗಿದೆ ಎಂದು ಹೇಳಿದರು.
ಸಮಕಾಲೀನ ಗ್ರಾಮೀಣ ಮತ್ತು ನಗರಗಳ ಮಹಿಳಾ ಸಂವೇದನೆ ಹಾಗೂ ಸ್ಥಿತ್ಯಂತರಗಳ ಕುರಿತಂತೆ ತಾ. ಕಸಾಪ ನಿಕಟಪೂರ್ವ ಅಧ್ಯಕ್ಷೆ ಎನ್.ಇಂದಿರಮ್ಮ ವಿಷಯಮಂಡಿಸಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಹಿಳೆಯರಲ್ಲಿ ಅಷ್ಟೇನು ವ್ಯಾತ್ಯಾಸವಿಲ್ಲ. ಇವರೆಲ್ಲರೂ ಇಂದು ಮೌಢ್ಯಕ್ಕೆ ಮಾರುಹೋಗುತ್ತಿದ್ದಾರೆ. ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತಿಸುವುದು ಕಡಿಮೆಯಾಗುತ್ತಿದೆ. ಮಹಿಳೆಯರ ದುಡಿಮೆಯಲ್ಲಿ ವ್ಯತ್ಯಾಸವಿದೆ. ದುಡ್ಡಿಗೆ ಮಾಡುವಂತಹ ಕೆಲಸ ಮಾತ್ರ ದುಡಿಮೆಯಾದರೆ ಮನೆಯಲ್ಲಿ ಮಾಡುವಂತಹ ಕೌಟುಂಬಿಕ ಕೆಲಸಗಳು ದುಡಿಮೆ ಎನಿಸಿಕೊಳ್ಳುತ್ತಿಲ್ಲ. ಅದ್ದರಿಂದ ಮಹಿಳೆಯರು ಇನ್ನೂ ಜಾಗೃತವಾಗಬೇಕದಂತಹ ಅವಶ್ಯಕತೆ ಇದೆ ಎಂದರು.ಈ ಸಂದರ್ಭದಲ್ಲಿ ಅಧುನಿಕ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಅಭಿವ್ಯಕ್ತಿ ಮತ್ತು ಒಳನೋಟ ಕುರಿತಂತೆ ನವೋದಯ ಕಾಲೇಜಿನ ಪ್ರಾಂಶುಪಾಲ ಸಿ.ರವಿಕುಮಾರ್ ವಿಷಯ ಮಂಡಿಸಿದರು. ತಾಲೂಕು ಸಾಹಿತ್ಯ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹಿಳೆಯರ ಕೊಡುಗೆ ಕುರಿತಂತೆ ಹುಳಿಯಾರಿನ ಬಿಎಂಎಸ್ ಕಾಲೇಜಿನ ಸಹ ಪ್ರಾಧ್ಯಾಪಕಿ ಕೆ.ಬಿ.ಸರಸ್ವತಿ ವಿಷಯ ಮಂಡಿಸಿದರು. ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಬಸವರಾಜು ವಹಿಸಿದ್ದರು.
ನಂತರ ಮಹಿಳಾ ಕವಿಗೋಷ್ಠಿಯಲ್ಲಿ ಸುಮಾರು ೧೧ಜನ ಮಹಿಳಾ ಕವಿಗಳು ಕವನ ವಾಚಿಸಿದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ರಂಗಮ್ಮ ಹೊದೇಕಲ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಸೇರಿದಂತೆ ಉಪಾದ್ಯಕ್ಷ ನಂದೀಶ್ ಬಟ್ಲೇರಿ ಹಾಜರಿದ್ದರು. ಉದ್ಘಾಟನಾ ಕಾರ್ಯಕ್ರಮದ ಆಶಯ ನುಡಿಗಳನ್ನು ಮಹಿಳಾ ಘಟಕದ ಸಂಚಾಲಕರಾದ ವರಮಹಾಲಕ್ಷ್ಮಿ ಟಿ.ಆರ್. ನುಡಿದರು. ಆಶಯನುಡಿಗಳನ್ನು ಕವಿಯತ್ರಿ ರಾಧಾಮಣಿ ನುಡಿದರು. ಈ ಸಂದರ್ಭದಲ್ಲಿ ನಾಗಮಣಿ, ಭವಾನಿ ಜಯರಾಂ ಸೇರಿ ಇತರರು ಇದ್ದರು.