ಸಾರಾಂಶ
ಬಿಸಿ ಅಲೆಗಳು ಅಲ್ಪಾವಧಿಯಲ್ಲೇ ಹೆಚ್ಚಿನ ಜನರ ಮೇಲೆ ತೀವ್ರ ಪರಿಣಾಮ ಬೀರಬಹುದಾಗಿವೆ
ಕನ್ನಡಪ್ರಭ ವಾರ್ತೆ ಮೈಸೂರು
ಬಿಸಿಗಾಳಿಯು ಈಗ ಹವಾಮಾನ ಸಂಬಂಧಿತ ಚಿಂತೆ ಮಾತ್ರವಲ್ಲ. ಇದು ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿ ಆಗಿದೆ. ಬಿಸಿಗಾಳಿಯೂ ಜನರ ಆರೋಗ್ಯದ ಜೊತೆಗೆ ದೇಶದ ಆರ್ಥಿಕತೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದರು.ನಗರದ ಎಸ್ ಜೆಸಿಇ ಕ್ಯಾಂಪಸ್ಸಿನಲ್ಲಿ ಇರುವ ಆರ್.ಪಿ. ಸಿಂಘಾನೀಯ ಸಭಾಂಗಣದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ, ನೆದರ್ ಲ್ಯಾಂಡ್ಸ್ ನ ಎನ್‌ಎಎಂ ಎಸ್ ಅಂಡ್ ಟಿ ಕೇಂದ್ರ ಹಾಗೂ ಸ್ಕೋಪ್ ಸಂಯುಕ್ತವಾಗಿ ಆಯೋಜಿಸಿರುವ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಿಸಿ ಮತ್ತು ಶಾಖ ಅಲೆಗಳ ಪ್ರವೃತ್ತಿಗಳು ಮತ್ತು ಆರೋಗ್ಯದ ಮೇಲೆ ಅವುಗಳ ಪರಿಣಾಮಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.ಬಿಸಿ ಅಲೆಗಳು ಅಲ್ಪಾವಧಿಯಲ್ಲೇ ಹೆಚ್ಚಿನ ಜನರ ಮೇಲೆ ತೀವ್ರ ಪರಿಣಾಮ ಬೀರಬಹುದಾಗಿವೆ. ಇದರಿಂದ ಜನರಲ್ಲಿ ಆರೋಗ್ಯ ಹದಗೆಡಬಹುದು. ಸಾವುಗಳು ಸಂಭವಿಸಬಹುದು. ಇವುಗಳು ಸಾಮಾಜಿಕ ಹಾಗೂ ಆರ್ಥಿಕವಾಗಿ ಪರಿಣಾಮಗಳನ್ನು ಉಂಟು ಮಾಡುತ್ತವೆ. ಇದರಿಂದ ದೇಶದ ಅಭಿವೃದ್ಧಿಯಲ್ಲಿ ತಡೆಗಳು ನಿರ್ಮಾಣವಾಗಲಿವೆ ಎಂದು ಅವರು ಹೇಳಿದರು.ಅತಿಯಾದ ಶಾಖದ ಪರಿಸ್ಥಿತಿಯು ಧೀರ್ಘಕಾಲದ ವರೆಗೆ ಅವೃತ್ತಗೊಂಡರೆ ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ಹಾನಿಯಾಗುತ್ತದೆ. ತಾಪಮಾನಕ್ಕೆ ಒಗ್ಗಿಕೊಳ್ಳಲು ಆಗದೇ ಚಿಗುರಿನಲ್ಲೇ ಮುರುಟಿ ಹೋಗುತ್ತವೆ. ಬಿಸಿ ಗಾಳಿಯನ್ನು ಮೈಗೆ ಒಡ್ಡಿಕೊಳ್ಳುವುದರಿಂದ ಜಾನುವಾರುಗಳಿಗೆ ಗಾಯಗಳು ಆಗುವ ಸಂಭವ ಇದೆ. ಇದರ ಪರಿಣಾಮವಾಗಿ ಅವುಗಳು ಮರಣ ಹೊಂದಲೂ ಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.ಬಿಸಿಗಾಳಿಯ ಪರಿಣಾಮದಿಂದಾಗಿ ಕಾಡಿನಲ್ಲಿ ಬೆಂಕಿಯ ಅವಘಡಗಳು ಉಂಟಾಗುತ್ತದೆ. ಈ ಉಷ್ಣತೆಯೂ ಸೇರಿಕೊಂಡು ಕಾಡ್ಗಿಚ್ಚಾಗಿ ಪರಿವರ್ತನೆ ಹೊಂದುವುದರಿಂದ ಅಪಾರ ಪ್ರಮಾಣದ ವನ್ಯ ಸಂಪತ್ತು ನಾಶವಾಗುತ್ತದೆ. ಮಳೆ ಸರಿಯಾಗಿ ಆಗದೆ ತೀವ್ರ ಬರಗಾಲ ಉಂಟಾಗುತ್ತದೆ. ನೀರಿಗೆ ಕೊರತೆ ಬರುತ್ತದೆ. ನಾಗರಿಕರು ಉಷ್ಣ ಗಾಳಿಯನ್ನು ತಡೆದುಕೊಳ್ಳಲು ಆಗದೆ ಹವಾನಿಯಂತ್ರಣ ಸಾಧನಗಳಿಗೆ ಮೊರೆ ಹೋಗುವುದರಿಂದ ವಿದ್ಯುತ್ ಬಳಕೆ ಮಾಮೂಲಿಗಿಂತ ಹೆಚ್ಚಿನ ಮಟ್ಟದಲ್ಲಿ ಆಗುತ್ತದೆ. ಹೀಗಾಗಿ, ವಿದ್ಯುತ್ ಜಾಲವೂ ಒತ್ತಡಕ್ಕೆ ಒಳಗಾಗಿ, ಅನಿಯಮಿತ ವಿದ್ಯುತ್ ಕಡಿತದ ಅಪಾಯವನ್ನು ಹೆಚ್ಚಿಸುತ್ತದೆ ಎಂದರು.ಪ್ರಸ್ತುತ ವಿಶ್ವದ ಜನರೆಲ್ಲರೂ ಜಾಗತಿಕ ತಾಪಮಾನವನ್ನು ಅನುಭವಿಸುತ್ತಿದ್ದಾರೆ. ಈಗಂತೂ ಹವಾಮಾನ ಬದಲಾವಣೆಯ ಪರಿಣಾಮವಾಗಿ ಶಾಖದ ಅಲೆಗಳ ತೀವ್ರತೆ ಹೆಚ್ಚುತ್ತಿದೆ. ಹೆಚ್ಚಿನ ಗಾಳಿಯ ಉಷ್ಣತೆ ಮತ್ತು ಹಗಲು ಮತ್ತು ರಾತ್ರಿಯ ತಾಪಮಾನದಲ್ಲೂ ದೀರ್ಘಾವಧಿಯಾಗಿ ಉಷ್ಣತೆ ಇರುವುದರಿಂದ ಇದು ಮಾನವ ದೇಹದ ಮೇಲೆ ಒತ್ತಡವನ್ನು ಉಂಟು ಮಾಡುತ್ತಿದೆ. ಇದರಿಂದ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮತ್ತು ಮೂತ್ರಪಿಂಡ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದು ಜಾಗತಿಕ ಮಟ್ಟದಲ್ಲಿ ಸಾವಿನ ಪ್ರಕರಣಗಳು ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.ವೈವಿಧ್ಯಮಯ ಭೌಗೋಳಿಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಶಾಖ ಅಲೆಯೂ ತೀವ್ರ ಏರಿಕೆಯನ್ನು ಕಂಡಿದೆ. ಕರ್ನಾಟಕದಲ್ಲಿ 15 ಜಿಲ್ಲೆಗಳು ವಿಭಿನ್ನ ಪ್ರಮಾಣದಲ್ಲಿ ಬಿಸಿ ಗಾಳಿಗೆ ಗುರಿಯಾಗುತ್ತಿವೆ. ಕಲುಬುರಗಿ, ರಾಯಚೂರು ಮತ್ತು ಬಳ್ಳಾರಿಯಂತಹ ಜಿಲ್ಲೆಗಳನ್ನು ಶಾಖ ಸಂಬಂಧಿತ ಕಾಯಿಲೆಗಳ ಹೆಚ್ಚಿನ ಅಪಾಯದ ವಲಯಗಳಾಗಿ ವರ್ಗೀಕರಿಸಲಾಗಿದೆ ಎಂದರು.ಉಷ್ಣ ಅಲೆಯ ಪರಿಣಾಮ ತಗ್ಗಿಸಬೇಕಾದರೆ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ವ್ಯವಸ್ಥೆ ಬಲವರ್ಧನೆಗೊಳಿಸಬೇಕು. ಸಾರ್ವಜನಿಕವಾಗಿ ಜಾಗೃತಿ ಅಭಿಯಾನಗಳನ್ನು ಅನುಷ್ಠಾನಗೊಳಿಸಬೇಕು. ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಬೇಕು. ಅಲ್ಲದೆ, ಹೊರೆಗೆ ದುಡಿಯವ ಅಸಂಘಟಿತ ಕಾರ್ಮಿಕ ವಲಯವನ್ನು ಇದರಿಂದ ಸಂರಕ್ಷಿಸಲು ಅವರು ಕೆಲಸ ಮಾಡುವ ಅವಧಿಯನ್ನು ಸರಿ ಹೊಂದಿಸಬೇಕು. ಶಾಖ ಸಂಬಂಧಿತ ಕಾಯಿಲೆಗಳನ್ನು ನಿರ್ವಹಿಸಲು ಅಂತರ ಇಲಾಖೆಗಳು ಒಟ್ಟಾಗಿ ಸೇರಿ ಕಾರ್ಯಕ್ರಮ ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ. ಸುರೇಶ್, ಸ್ಕೋಪ್ ಸಂಸ್ಥೆಯ ಅಧ್ಯಕ್ಷ ಡಾ. ಜಾನ್ ಸಂಸೆಥ್, ಉಪಾಧ್ಯಕ್ಷ ಡಾ. ನೆವಿಲ್ಲೇ ಸ್ವೀಜ್ಡ್, ಎನ್ ಎಎಂ ಎಸ್ ಟಿ ಮಹಾ ನಿರ್ದೇಶಕ ಅಮಿತವ್ ಬಂಡೋಪಾಧ್ಯಾಯ, ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಕುಲಸಚಿವ ಪ್ರೊ.ಎಸ್.ಎ. ಧನರಾಜ್, ಪ್ರಾಂಶುಪಾಲ ಪ್ರೊ.ಸಿ. ನಟರಾಜು, ಡೀನ್ ಗಳಾದ ಪ್ರೊ.ವಿ.ಎನ್. ಮಂಜುನಾಥ್ ಆರಾಧ್ಯ, ಪ್ರೊ.ಎಸ್. ಸೂರ್ಯನಾರಾಯಣನ್ ಇದ್ದರು.)
;Resize=(128,128))
;Resize=(128,128))
;Resize=(128,128))