ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದರೆ, ಪುಸ್ತಕೋದ್ಯಮ ಸಂಪಾದನೆಗೆ ಸಂಬಂಧಿಸಿದ್ದು. ಸಂವೇದನೆ ಮತ್ತು ಸಂಪಾದನೆಯನ್ನು ಒಂದುಗೂಡಿಸುವ ಚಾಕಚಕ್ಯತೆ ಕೆಲವರಿಗೆ ಮಾತ್ರ ಇರಲು ಸಾಧ್ಯ. ಆ ಚಾತುರ್ಯ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ದಂಪತಿಗೆ ಇದೆ ಎಂದು ಚಿಂತಕ ಬರಗೂರು ರಾಮಚಂದ್ರ ಹೇಳಿದ್ದಾರೆ.

 ಬೆಂಗಳೂರು : ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದರೆ, ಪುಸ್ತಕೋದ್ಯಮ ಸಂಪಾದನೆಗೆ ಸಂಬಂಧಿಸಿದ್ದು. ಸಂವೇದನೆ ಮತ್ತು ಸಂಪಾದನೆಯನ್ನು ಒಂದುಗೂಡಿಸುವ ಚಾಕಚಕ್ಯತೆ ಕೆಲವರಿಗೆ ಮಾತ್ರ ಇರಲು ಸಾಧ್ಯ. ಆ ಚಾತುರ್ಯ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ದಂಪತಿಗೆ ಇದೆ ಎಂದು ಚಿಂತಕ ಬರಗೂರು ರಾಮಚಂದ್ರ ಹೇಳಿದ್ದಾರೆ.

ಭಾನುವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನದ 30ನೇ ವಾರ್ಷಿಕೋತ್ಸವ, 1000ನೇ ಕೃತಿಯಾಗಿರುವ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರ ‘ದಕ್ಷಿಣಾಯನ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಉದ್ಯಮ ಶೀಲತೆ ಮತ್ತು ಸಂವೇದನಾಶೀಲತೆಯ ಸಮಚಿತ್ತವನ್ನು ಸಾಧಿಸುವ ಕ್ರಮಗಳು ಯಾವುವು? ಎನ್ನುವುದರ ಸವಾಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕು ಎನ್ನುವುದೇ ಇಂದಿನ ಸಮಸ್ಯೆ. ಏಕೆಂದರೆ, ಪುಸ್ತಕ ಪ್ರಕಟಿಸಿ, ಉದ್ಯಮ ಮಾಡಿ ಲಾಭವೇ ಬಾರದಿದ್ದರೆ ಪ್ರಯೋಜನ ಆಗುವುದಿಲ್ಲ. ಪುಸ್ತಕದಲ್ಲಿ ಉದ್ಯಮ ಇರುತ್ತದೆ. ಆದರೆ, ಅದೇ ಉದ್ಯಮ ಆದರೆ ಏನಾಗಬಹುದು? ಪುಸ್ತಕಗಳ ಅಭಿರುಚಿ ಹಾಳಾಗಬಹುದು. ಸದಾಭಿರುಚಿಗೆ ಅವಕಾಶ ಸಿಗದಿರಬಹುದು. ಲಾಭವೇ ಮುಖ್ಯವಾದರೆ ನಮ್ಮ ಮನೋಧರ್ಮ ಬೇರೆ ಆಗುತ್ತದೆ ಎಂದು ರಾಮಚಂದ್ರಪ್ಪ ನುಡಿದರು.

ಮಾಧ್ಯಮಗಳಾದ ಚಲನಚಿತ್ರ, ಪತ್ರಿಕೆ, ಪುಸ್ತಕ ಎಲ್ಲವೂ ಉದ್ಯಮವಾಗಿವೆ. ವಿವಿಧ ಮಾಧ್ಯಮಗಳು ಉದ್ಯಮಗಳಾದಾಗ ಪುಸ್ತಕ ಸಂಸ್ಕೃತಿಯನ್ನು ಕಟ್ಟುವುದಾದರು ಹೇಗೆ?

ಕೈಗಾರಿಕೀಕರಣ ಮತ್ತು ಜಾಗತೀಕರಣ ಸಂದರ್ಭಗಳು ಬೇರೆ ಬೇರೆ ಆಗಿವೆ. ಮಿಶ್ರ ಆರ್ಥಿಕ ಪದ್ಧತಿಯಾಗಿದ್ದ ಕೈಗಾರಿಕೀಕರಣ ಮತ್ತು ಮುಕ್ತ ಆರ್ಥಿಕ ಪದ್ಧತಿಯಾಗಿದ್ದ ಜಾಗತೀಕರಣದ ಮನೋಧರ್ಮ ಬೇರೆಯಾಗಿದೆ. ಕೈಗಾರಿಕೀಕರಣ ಸಂದರ್ಭದಲ್ಲಿ ಸರ್ಕಾರಗಳಿಂದ ಕೈಗಾರಿಕೆಗಳ ನಿಯಂತ್ರಣ ಆಗುತ್ತಿತ್ತು. ಮುಕ್ತ ವ್ಯಾಪಾರ ನೀತಿ ಬಂದಾಗ ಖಾಸಗಿಯವರೇ ನಮ್ಮನ್ನು ನಿಯಂತ್ರಿಸುವಂತಾಗಿದೆ ಎಂದು ರಾಮಚಂದ್ರಪ್ಪ ತಿಳಿಸಿದರು.

ಎಷ್ಟೇ ಹೊಸ ತಂತ್ರಜ್ಞಾನಗಳು ಬಂದರೂ, ಕೇಳುವ, ಡಿಜಿಟಲ್ ಪುಸ್ತಕಗಕಳು ಬಂದರೂ ಪ್ರತಿ ವರ್ಷ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತಿವೆ. ಏಕೆಂದರೆ, ಪುಸ್ತಕಗಳಿಗೆ ಸಾವಿಲ್ಲ. ತಂತ್ರಜ್ಞಾನಕ್ಕಿಂತ ಮನುಷ್ಯ ಜ್ಞಾನ ಮುಖ್ಯವಾದದ್ದು. ಮನುಷ್ಯ ಜ್ಞಾನವೇ ತಂತ್ರಜ್ಞಾನವನ್ನು ಸೃಷ್ಟಿಸಲಾಗಿದೆ. ಯಾವುದಕ್ಕೆ ಎಷ್ಟು ಬೇಕು ಅಷ್ಟಕ್ಕೆ ಸೀಮಿತಗೊಳಿಸಬೇಕು. ದಾಸರಾಗಬಾರದು ಎಂದು ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.

ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, ಕೆಲವು ವರ್ಷಗಳ ಕಾಲ ವಿದೇಶಗಳಿಗೆ ಹೋಗಿ ಭಾರತಕ್ಕೆ ಮರಳಿದವರು ಮಾತನಾಡುವಾಗ ದೇವಸ್ಥಾನಗಳಿಗೆ ಹೋಗಿದ್ದೆ ಎನ್ನುತ್ತಾರೆ. ಅವರು ದೇವಸ್ಥಾನಗಳಲ್ಲಿ ಟೈಲ್ಸ್, ಮಾರ್ಬಲ್ಸ್ ಹಾಕಿಸುವ ಬದಲು ಶಾಲೆಗಳಿಗೆ ಭೇಟಿ ನೀಡಬೇಕು. ಶಾಲೆಗಳ ಸ್ಥಿತಿ ಹೇಗಿದೆ ಎಂಬುದನ್ನು ನೋಡಿ ಅಲ್ಲಿ ಪ್ರಯೋಗಾಲಯ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಅಂಕಿತ ಪ್ರಕಾಶನದೊಂದಿಗಿನ ತಮ್ಮ ಧೀರ್ಘ ಒಡನಾಟವನ್ನು ಲೇಖಕ ಜೋಗಿ ನೆನೆದು ಧನ್ಯವಾದ ಹೇಳಿದರು. ಕಾರ್ಯಕ್ರಮದಲ್ಲಿ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ದಂಪತಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ಹರೀಶ್ ಕೇರ ಮಾತನಾಡಿದರು.

ತೋಚಿದ್ದು ಬರೆಯುತ್ತೇನೆ ಎನ್ನುವುದು ಸಾಹಿತ್ಯವಲ್ಲ

ಬೆಂಗಳೂರು : ತೋಚಿದ್ದು ಬರೆಯುತ್ತೇನೆ ಎನ್ನುವುದು ಸಾಹಿತ್ಯವಲ್ಲ. ಜನ ಸಾಮಾನ್ಯರ ಬದುಕನ್ನು ಅರಿಯುವುದು, ತಿಳಿಯುವುದು, ಸಂವಾದಗಳು ಸಾಹಿತ್ಯ ಎನಿಸಿಕೊಳ್ಳುತ್ತದೆ ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದ್ದಾರೆ.

ಭಾನುವಾರ ನಗರದ ವಾಡಿಯಾ ಸಭಾಂಗಣದಲ್ಲಿ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರ ಪುಸ್ತಕ ‘ದಕ್ಷಿಣಾಯನ’ ಬಿಡುಗಡೆ ಮಾಡಿ ಮಾತನಾಡಿದ ಅವರು, ಹೊಸ ಬರಹಗಾರರಿಗೆ ಸಾಹಿತ್ಯ ಎನ್ನುವುದು ಡೈರಿ ಎನ್ನುವಂತಾಗಿದೆ. ಆದರೆ, ಸಾಹಿತ್ಯ ಎನ್ನುವುದು ಬರೀ ಡೈರಿ ಅಲ್ಲ. ಅದು ಒಂದು ಸಂವಾದ. ನಾನು ಏಕೆ ಬರೆಯುತ್ತೇನೆ ಎನ್ನುವುದನ್ನು ಬರಹಗಾರರು ತಮ್ಮನ್ನು ತಾವೇ ಕೇಳಿಕೊಳ್ಳಬೇಕು ಎಂದರು.

ಕನ್ನಡದಲ್ಲಿ ಓದುಗರಿಗಿಂತ ಜಾಸ್ತಿ ಲೇಖಕರು ಹೆಚ್ಚಾಗಿದ್ದು, ಲೇಖಕರಿಗಿಂತ ಪ್ರಶಸ್ತಿಗಳು ಜಾಸ್ತಿ

ಕನ್ನಡದಲ್ಲಿ ಓದುಗರಿಗಿಂತ ಜಾಸ್ತಿ ಲೇಖಕರು ಹೆಚ್ಚಾಗಿದ್ದು, ಲೇಖಕರಿಗಿಂತ ಪ್ರಶಸ್ತಿಗಳು ಜಾಸ್ತಿ ಆಗಿವೆ. ಈ ಅನುಪಾತ ಅಸಹಜವಾಗಿದ್ದು ದಾರಿ ತಪ್ಪಿಸುವಂತಿದೆ. ಪ್ರಶಸ್ತಿಗಳೇ ಬರವಣಿಗೆಯ ಮುಖ್ಯ ಗುರಿ ಎನ್ನುವ ಒಂದು ತಪ್ಪು ಕಲ್ಪನೆ ಬಿತ್ತುವಂತಾಗಿದೆ. ಲೇಖಕ ತನಗೆ ಒಂದು ವರ್ಷದಲ್ಲಿ ಬಂದಿರುವ ಪ್ರಶಸ್ತಿಗಳ ಸಂಖ್ಯೆಯನ್ನು ಹೇಳಿ ಪರಿಚಯ ಮಾಡಿಕೊಳ್ಳುತ್ತಾನೆ. ಪ್ರಶಸ್ತಿಯು ಒಂದು ಮಾನದಂಡ. ಆದರೆ, ಸಾಹಿತ್ಯ ಬರೀ ಪ್ರಶಸ್ತಿ ಅಲ್ಲ. ಬದುಕನ್ನು ಅರಿಯುವ ಮಾರ್ಗ. ಹೀಗಾಗಿ, ಒಳ್ಳೆಯ ಸಾಹಿತ್ಯವನ್ನು ಬರಹಗಾರ ಆದವರು ಓದಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡ ಸಾಹಿತ್ಯದಲ್ಲಿ ಚಿತ್ರಗೀತೆಗಳ ಬಗ್ಗೆ ಒಂದು ಮಡಿವಂತಿಕೆ ಇದೆ. ನಾನು ಸಾಹಿತ್ಯವನ್ನು, ಕವಿತೆಗಳನ್ನು ಬರೆಯುತ್ತೇನೆ. ಆದರೆ, ಸಿನಿಮಾಕ್ಕೆ ಹಾಡುಗಳನ್ನು ಬರೆಯಲು ಆರಂಭಿಸಿದಾಗ ನನ್ನ ಸಾಹಿತ್ಯ ಪ್ರಪಂಚದವರಿಗೆ ನನ್ನ ಬಗ್ಗೆ ಶ್ರದ್ಧಾಂಜಲಿ ಆಯಿತು. ಇವನು ಹಾಳಾಗಿ ಹೋದ ಎಂದರು. ನನಗೆ ಸಿನಿಮಾ ಮತ್ತು ಸಾಹಿತ್ಯ ಬೇರೆ ಎನಿಸಲಿಲ್ಲ. ಮಲಯಾಳಂ, ಮರಾಠಿ, ತೆಲುಗು, ತಮಿಳು ಸೇರಿದಂತೆ ಬೇರೆ ಭಾಷೆಗಳಲ್ಲಿ ಸಾಹಿತಿಗಳು ಸಿನಿಮಾಗೆ ಹೋಗಿದ್ದಾರೆ. ನಮಗೆ ಈ ಎರಡೂ ಅ‍ವಿಭಾಜ್ಯ ಎಂದು ಜಯಂತ ಕಾಯ್ಕಿಣಿ ನುಡಿದರು.

ಒಮ್ಮೆ ಯುವ ಬರಹಗಾರರೊಂದಿಗೆ ಮಾತನಾಡುವಾಗ, ಭಾವನೆಗಳನ್ನು ಕಾರಿಕೊಳ್ಳುತ್ತೇನೆ ಎಂದು ಅವರು ಹೇಳಿದರು. ಆದರೆ, ಅದರಿಂದ ಕಾರಿಕೊಳ್ಳುವವರಿಗೆ ಒಳ್ಳೆಯದು. ಓದುಗರಿಗೆ ಏನು ಪ್ರಯೋಜನ ಎಂಬುದು ಕಾಯ್ಕಿಣಿ ಪ್ರಶ್ನಿಸಿದರು.