ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿಯವರ ನೇತೃತ್ವದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಸಮಿತಿಯನ್ನು ಪುನರ್‌ ರಚನೆ ಮಾಡಿ ಸರ್ಕಾರ ರಾಜ್ಯಪತ್ರವನ್ನು ಹೊರಡಿಸಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಸಮಿತಿಯ ಪರಿಷ್ಕೃತ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದನಿಮಿತ್ತ ಅಧ್ಯಕ್ಷರಾಗಿ, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉಪಾಧ್ಯಕ್ಷರಾಗಿ ಇರಲಿದ್ದು, ಉಳಿದ 84 ಮಂದಿ ಪದನಿಮಿತ್ತ ಸದಸ್ಯರು ಇರಲಿದ್ದಾರೆ. ಇದಕ್ಕೂ ಮುನ್ನ ಒಟ್ಟು 75 ಮಂದಿ ಸದಸ್ಯರಿದ್ದರು.

ಬೆಳಗಾವಿ ಅಧಿವೇಶನದಲ್ಲಿ ಜಿಬಿಎ ಆಡಳಿತ ಕಾಯ್ದೆ ತಿದ್ದುಪಡಿಸಿ ಮಸೂದೆ ಮಂಡಿಸಿ ಅಂಗೀಕರಿಸಲಾಗಿತ್ತು. ತಿದ್ದುಪಡಿ ಮಸೂದೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಚಿಕ್ಕಬಳ್ಳಾಪುರದ ಸಂಸದರು ಸೇರಿದಂತೆ ಇತರರನ್ನು ಸೇರಿಸಲು ನಿಯಮ ರೂಪಿಸಲಾಗಿತ್ತು. ಇದೀಗ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಚಿಕ್ಕಬಳ್ಳಾಪುರ ಸಂಸದ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮತ್ತಿತರರು ಜಿಬಿಎಯ ಪದನಿಮಿತ್ತ ಸದಸ್ಯರಾಗಿದ್ದಾರೆ.

ಹೊಸದಾಗಿ ಸೇರ್ಪಡೆಯಾದವರು: ಜಿಬಿಎ ಸಮಿತಿಯ ತಿದ್ದುಪಡಿ ದೇಶದ ಪ್ರಕಾರ ಚಿಕ್ಕಬಳ್ಳಾಪುರ ಸಂಸದ (ಡಾ.ಕೆ.ಸುಧಾಕರ್‌), ನಾಮನಿರ್ದೇಶಿತ ಸಂಸದರು (ಸುಧಾಮೂರ್ತಿ) ಹಾಗೂ ನಾಮ ನಿರ್ದೇಶಿತ ವಿಧಾನಪರಿಷತ್ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ (ಡಾ.ಶಾಲಿನಿ ರಜನೀಶ್), ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ- ನಗರಾಭಿವೃದ್ದಿ ಇಲಾಖೆ(ತುಷಾರ್ ಗಿರಿ ನಾಥ್), ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ-ಅರ್ಥಿಕ ಇಲಾಖೆ (ರಿತೇಶ್ ಕುಮಾರ್ ಸಿಂಗ್) ಅವರುಗಳನ್ನು ಜಿಬಿಎ ಸಮಿತಿಗೆ ಸೇರಿಸಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.


ಉಳಿದಂತೆ ಮೊದಲಿನ ಆದೇಶದಂತೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಜಿಬಿಎಯ ಪದನಿಮಿತ್ತ ಅಧ್ಯಕ್ಷರಾಗಿ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಪದನಿಮಿತ್ತ ಉಪಾಧ್ಯಕ್ಷರಾಗಿ ಇರುತ್ತಾರೆ. ಅದಲ್ಲದೆ ಸಮಿತಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು, ನಾಮನಿರ್ದೇಶಿತ ವಿಧಾನ ಪರಿಷತ್ತಿನ ಸದಸ್ಯರು, ಬೆಂಗಳೂರು ಶಿಕ್ಷಣ ಕ್ಷೇತ್ರ ಮತ್ತು ಬೆಂಗಳೂರು ಸ್ಥಳೀಯ ಸಂಸ್ಥೆಯಿಂದ ಚುನಾಯಿತರಾದ ವಿಧಾನ ಪರಿಷತ್ತಿನ ಸದಸ್ಯರು, ಸಂಸದರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು, ಐದು ವಿವಿಧ ಪ್ರಾಧಿಕಾರಿಗಳ ಆಯುಕ್ತರು, ಐದು ಪಾಲಿಕೆಗಳ ಮೇಯರ್‌ಗಳು ಸಮಿತಿಯ ಸದಸ್ಯರಾಗಿರಲಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಜಿಬಿಎ ಮುಖ್ಯ ಅಭಿಯಂತರರು, ಮಹಾನಗರ ಪ್ರದೇಶಾಭಿವೃದ್ಧಿ ಆಯುಕ್ತರು, ನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯಕಾರ್ಯನಿರ್ವಹಣಾಧಿಕಾರಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಸಮಿತಿಯಲ್ಲಿದ್ದಾರೆ.