ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜ್ಯಕಾರಣಕ್ಕೆ ನಾನು ವಾಪಸಾಗುವುದು ಖಚಿತ. ಅಂತೆಯೇ 2028ಕ್ಕೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರಲಿದ್ದು, ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜ್ಯಕಾರಣಕ್ಕೆ ನಾನು ವಾಪಸಾಗುವುದು ಖಚಿತ. ಅಂತೆಯೇ 2028ಕ್ಕೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರಲಿದ್ದು, ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಇನ್ನೂ 20 ವರ್ಷ ಎನ್‌ಡಿಎ ಅಧಿಕಾರದಲ್ಲಿ ಇರಲಿದೆ. ಕಾಂಗ್ರೆಸ್ ಒಂದು ಪಕ್ಷವಾಗಿ ಎಲ್ಲಿರಲಿದೆ ಎಂದು ಆ ಪಕ್ಷದ ಮುಖಂಡರನ್ನೇ ಕೇಳಬೇಕು. 2028ಕ್ಕೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರಲಿದ್ದು, ನಮ್ಮ ಅವಧಿಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳನ್ನು ಸರ್ವಾಂಗೀಣ ಅಭಿವೃದ್ದಿಪಡಿಸಿ 22 ಸಾವಿರ ಮನೆಗಳನ್ನು ಕಟ್ಟಿ ಬಡವರಿಗೆ ನೀಡಲಿಲ್ಲ ಎಂದರೆ ನಾನು ರಾಜಕೀಯದಲ್ಲಿಯೇ ಇರುವುದಿಲ್ಲ, ನಿವೃತ್ತಿ ಆಗುವೆ ಎಂದರು.
ನಾನು ಸಚಿವನಾಗಿದ್ದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 22 ಸಾವಿರ ನಿವೇಶನಗಳನ್ನು ಬಡವರಿಗೆ ಹಂಚಲಾಗಿತ್ತು. ಇದು ರಾಜ್ಯದಲ್ಲಿಯೇ ಮಾದರಿಯಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಂತರ ಬಂದವರು ಇದನ್ನು ಮೂಲೆಗುಂಪು ಮಾಡಿದ್ದರು. ಈಗ ನಾವು ಮಾಡಿದ ಕೆಲಸವನ್ನು ತಮ್ಮ ಕೆಲಸವೆಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಎಸ್‌ಐಆರ್ ಮೂಲಕ ಕ್ಲಿನ್:ದೇಶದಲ್ಲಿ ವೋಟ್ ಚೋರಿ ಆಗಿದ್ದು, ಇದನ್ನು ಸರಿಪಡಿಸಿ ಎಂದು ಚುನಾವಣಾ ಆಯೋಗವನ್ನು ಮೊದಲಿಗೆ ಕಾಂಗ್ರೆಸ್ ಮುಖಂಡರೇ ಕೇಳಿದ್ದಾರೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಎಸ್‌ಐಆರ್ ಜಾರಿಗೆ ತಂದಿದೆ. ಇದನ್ನು ಸ್ವಾಗತಿಸುವ ಬದಲಿಗೆ ಈಗ ದೂರುತ್ತಿದ್ದಾರೆ. ಕೇಂದ್ರ ಸರ್ಕಾರ ನುಸುಳುಕೋರರು ಬರದಂತೆ ಬಾರ್ಡರ್ ಹಾಕಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಬಾಂಗ್ಲಾ ದೇಶದವರಿಗೆ ಗೇಟ್ ತೆಗೆಯುತ್ತಿದ್ದಾರೆ. ಅಕ್ರಮ ನುಸುಳುಕೋರರಿಗೆ ಬೋಗಸ್ ಆಧಾರ್, ರೇಷನ್, ಓಟರ್ ಕಾರ್ಡ್ ಮಾಡಿಸಿ, ಚುನಾವಣೆ ಗೆಲ್ಲುತ್ತಾ ಬಂದಿದ್ದಾರೆ. ಇಂತವನ್ನೆಲ್ಲಾ ಈಗ ಎಸ್‌ಐಆರ್ ಮೂಲಕ ಸರಿಪಡಿಸಲಾಗುತ್ತಿದೆ ಎಂದರು.