ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು, ಮಂತ್ರಿಗಳು, ಶಾಸಕರ ಹತ್ತಿರದಲ್ಲೇ ಇರುವವರು ಡ್ರಗ್ಸ್‌ ದಂಧೆಯಲ್ಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗಂಭೀರವಾಗಿ ಆಪಾದಿಸಿದ್ದಾರೆ.

ಬೆಂಗಳೂರು : ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು, ಮಂತ್ರಿಗಳು, ಶಾಸಕರ ಹತ್ತಿರದಲ್ಲೇ ಇರುವವರು ಡ್ರಗ್ಸ್‌ ದಂಧೆಯಲ್ಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗಂಭೀರವಾಗಿ ಆಪಾದಿಸಿದ್ದಾರೆ.

ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರ ಪೋಷಣೆ, ಆಶೀರ್ವಾದದ ನೆರಳಲ್ಲೇ ಈ ಡ್ರಗ್ಸ್‌ ದಂಧೆ ನಡೆಯುತ್ತಿದೆ. ಡ್ರಗ್ಸ್ ದಂಧೆ ನಿಯಂತ್ರಿಸಲು ಸಾಧ್ಯವಾಗದಿದ್ದರೆ ಆತ್ಮಾವಲೋಕನ ಮಾಡಿಕೊಂಡು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಯೋಗ್ಯ ವ್ಯಕ್ತಿಗಳಿಗೆ ಅಧಿಕಾರ ಕೊಟ್ಟು ಹೊರಡಿ ಎಂದು ತೀಕ್ಷ್ಣವಾಗಿ ಹೇಳಿದರು.

ಕಾನೂನು ಬಾಯಲ್ಲಿ ಹೇಳಲು ಮಾತ್ರ ಸೀಮಿತವಾಗಿದೆ. ಕಾರ್ಯ ರೂಪಕ್ಕೆ ತರುವಲ್ಲಿ ಈ ಸರ್ಕಾರ ವಿಫಲವಾಗಿದೆ. ಫ್ಯಾಕ್ಟರಿ ತೆರೆದು ಕೋಟ್ಯಂತರ ರು. ಮೌಲ್ಯದ ಡ್ರಗ್ಸ್‌ ತಯಾರಿಸಲಾಗುತ್ತಿದೆ. ಗೃಹ ಇಲಾಖೆ ಏನು ಮಾಡುತ್ತಿದೆ? ಗುಪ್ತಚರ, ನಾರ್ಕೊಟಿಕ್‌ ವಿಭಾಗ ಏನು ಮಾಡುತ್ತಿದೆ? ಪೊಲೀಸ್‌ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಬೇಕೆಂದಲ್ಲಿ ಡ್ರಗ್ಸ್‌ ಸಿಗುತ್ತಿದೆ. ನೆಪಮಾತ್ರಕ್ಕೆ ಪೊಲೀಸರು ದಾಳಿ ಮಾಡುತ್ತಾರೆ. ಮಹಾರಾಷ್ಟ್ರ ಪೊಲೀಸರು ಕಲಬುರಗಿ, ಮೈಸೂರು, ಬೆಂಗಳೂರಿನ ಡ್ರಗ್ಸ್‌ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡಿದ್ದಾರೆ. ಸ್ಥಳೀಯ ಪೊಲೀಸರಿಗೆ ಗೊತ್ತಾಗದೇ ಇರುವುದು ಮಹಾರಾಷ್ಟ್ರ ಪೊಲೀಸರಿಗೆ ಹೇಗೆ ಗೊತ್ತಾಯಿತು? ಗೃಹ ಇಲಾಖೆ ಏನು ಕಾರ್ಯ ನಿರ್ವಹಿಸುತ್ತಿದೆ? ಗೃಹ ಸಚಿವರಿಗೆ ತಮ್ಮ ಇಲಾಖೆ ಏನು ಕೆಲಸ ಮಾಡುತ್ತಿದೆ ಎಂಬುದು ಗೊತ್ತಿಲ್ಲ. ಪೊಲೀಸ್‌ ಇಲಾಖೆ ಮುಖ್ಯಸ್ಥರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಹಾಗೂ ಸರ್ಕಾರ ಬಹಳ ಬಿಜಿ ಇದೆ. ಪೊಲೀಸ್‌ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಐಪಿಎಸ್‌ ಅಧಿಕಾರಿಗಳು, ಕಮಿಷನರ್‌ ಹುದ್ದೆಗಳು ಸೇರಿದಂತೆ ಎಲ್ಲ ಹುದ್ದೆಗಳ ವರ್ಗಾವಣೆಗೆ ಕೋಟ್ಯಂತರ ರು. ನಿಗದಿಗೊಳಿಸಲಾಗಿದೆ. ವರ್ಗಾವಣೆಗೆ ದರ ಪಟ್ಟಿಯೇ ನಿಗದಿಯಾಗಿದೆ. ಈ ಸರ್ಕಾರದಿಂದ ನಾವು ಬೇರೇನು ಬಯಸಲು ಸಾಧ್ಯ? 40-50 ವರ್ಷಗಳ ಆಡಳಿತದ ಅನುಭವ ಇರುವವರು ಕಳಪೆ ಆಡಳಿತ ನೀಡುತ್ತಿದ್ದಾರೆ. ಮಾದಕವಸ್ತು ನಿಯಂತ್ರಿಸದೆ ರಾಜ್ಯದಲ್ಲಿ ಯುವಕರಿಗೆ ಭವಿಷ್ಯದ ಭರವಸೆಯೇ ಇಲ್ಲದಂತಾಗಿದೆ. ಮುಂದೆ ಡ್ರಗ್ಸ್‌ ದಂಧೆಯಲ್ಲಿ ಹಣ ಮಾಡುವವರೇ ಅಧಿಕಾರಕ್ಕೆ ಬಂದರೂ ಬರಬಹುದು ಎಂದು ಅಶ್ವತ್ಥನಾರಾಯಣ ಆತಂಕ ವ್ಯಕ್ತಪಡಿಸಿದರು.

ಕೇರಳ ಚುನಾವಣೆಗೆ ಮುಸ್ಲಿಂ ಮತ ಓಲೈಸಲು ಕೈ-ಪಿಣರಾಯಿ ಪೈಪೋಟಿ 

ಯಲಹಂಕ ಬಳಿಯ ಕೋಗಿಲು ಗ್ರಾಮದಲ್ಲಿ ಒತ್ತುವರಿ ಮನೆ ತೆರವು ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಮತ್ತು ಕೇರಳ ಸರ್ಕಾರ ಮುಸ್ಲಿಂ ಮತಕ್ಕಾಗಿ ಪೈಪೋಟಿಗೆ ಬಿದ್ದು ಓಲೈಕೆಯಲ್ಲಿ ತೊಡಗಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಟೀಕಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಗಿಲು ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 200 ಮನೆಗಳನ್ನು ಕಾನೂನು ಪ್ರಕಾರ ತೆರವುಗೊಳಿಸಲಾಗಿದೆ. ಈ ಕುಟುಂಬಗಳು ಮುಸ್ಲಿಂ ಎಂಬ ಕಾರಣಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ರಾಜ್ಯ ಸರ್ಕಾರವನ್ನು ಬುಲ್ಡೋಜರ್‌ ಸರ್ಕಾರ ಎಂದು ಟೀಕಿಸಿದ್ದಾರೆ. ವಿಜಯನ್ ಹಿರಿಯ ರಾಜಕಾರಣಿ. ಧರ್ಮ ಬಳಕೆ ಮಾಡಿಕೊಂಡಿರುವ ಅವರು ಯಾವ ಕಮ್ಯುನಿಸ್ಟ್‌ ನಾಯಕರೋ ಗೊತ್ತಿಲ್ಲ ಎಂದರು.

ಕಾಂಗ್ರೆಸ್ ನಾಯಕರ ದನಿ ಅಡಗಿದೆ:

ವಿಜಯನ್‌ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಪ್ರತಿಕ್ರಿಯಿಸಿದ್ದಾರೆ. ಆದರೆ, ಸಂಸದ ಕೆ.ಸಿ.ವೇಣುಗೋಪಾಲ್‌ ಇದೇ ವಿಚಾರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಕರೆ ಮಾಡಿದ್ದು, ಆ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಾದ ಬಳಿಕ ರಾಜ್ಯ ಕಾಂಗ್ರೆಸ್‌ ನಾಯಕ ದನಿ ಅಡಗಿದೆ. ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮರ್ಯಾದೆ ಕಳೆಯುತ್ತಿದ್ದರೂ ಸುಮ್ಮನಿದ್ದಾರೆ ಎಂದು ಕಿಡಿಕಾರಿದರು.

ಡಿಕೆಶಿ ಪರಾಕ್ರಮ ಅಡ್ರೆಸ್‌ ಇಲ್ಲ: ಅಕ್ರಮ ಒತ್ತುವರಿಯನ್ನು ಕಾನೂನು ಪ್ರಕಾರ ತೆರವುಗೊಳಿಸಲಾಗಿದೆ. ಕೇರಳ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ಓಲೈಸಲು ಮಾತನಾಡುತ್ತಿರುವ ವಿಜಯನ್‌, ಕೆ.ಸಿ.ವೇಣುಗೋಪಾಲ್‌ಗೆ ಸರಿಯಾದ ತಿರುಗೇಟು ನೀಡದೆ ಹಿಂದೇಟು ಹಾಕಿದ್ದಾರೆ. ಎಲ್ಲಿ ಹೋಯಿತು ಸಿದ್ಧರಾಮಯ್ಯ ಅವರ ಗಡಸು ದನಿ? ಡಿ.ಕೆ.ಶಿವಕಮಾರ್‌ ಅವರ ಪರಾಕ್ರಮ ಅಡ್ರೆಸ್‌ಗೆ ಇಲ್ಲದಂತಾಗಿದೆ. ಈ ಸರ್ಕಾರಕ್ಕೆ ಸ್ವಾಭಿಮಾನವೇ ಇಲ್ಲ ಎಂದು ಟೀಕಿಸಿದರು.

ಕಂದಾಯ ಸಚಿವರ ಹುಡುಕಿ ಕೊಡಿ

ರಾಜ್ಯದಲ್ಲಿ ವಸತಿ ಇಲ್ಲದ ಲಕ್ಷಾಂತರ ಕುಟುಂಬಗಳು ಇವೆ. ಅವರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಕಾಂಗ್ರೆಸ್‌ ವರಿಷ್ಠರು ಮುಸ್ಲಿಂ ಕುಟುಂಬಗಳು ಎಂಬ ಕಾರಣಕ್ಕೆ ಕೇರಳ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಪೈಪೋಟಿಗೆ ಬಿದ್ದಿದ್ದಾರೆ. ನಾವು ಮುಸ್ಲಿಂ ಚಾಂಪಿಯನ್‌ ಎಂದು ತೋರಿಸಲು ಮುಂದಾಗಿದ್ದಾರೆ. ಬೇರೆ ಕಡೆ ಅಕ್ರಮ ತೆರವು ಮಾಡಿದಾಗ ಇವರು ಸುದ್ದಿಯಲ್ಲೇ ಇರಲಿಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡರ ಕ್ಷೇತ್ರದಲ್ಲೇ ಈ ತೆರವು ನಡೆದಿದೆ. ಇದಕ್ಕೆ ಅವರು ಏನು ಉತ್ತರ ಕೊಡುತ್ತಾರೆ? ಈ ವಿಚಾರವಾಗಿ ಎಲ್ಲೂ ಅವರ ಸದ್ದಿಲ್ಲ. ಧ್ವನಿ ಅಡಗಿದೆ. ಅವರನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ನೀಡಲಾಗುವುದು. ಈ ಸರ್ಕಾರಕ್ಕೆ ಆತ್ಮಸಾಕ್ಷಿ, ಗೌರವ ಇಲ್ಲ. ಎಲ್ಲವನ್ನೂ ಮಾರಿಕೊಂಡಿದ್ದಾರೆ ಎಂದು ಹರಿಹಾಯ್ದರು.

ತುಷ್ಠೀಕರಣದ ಪರಮಾವಧಿ: ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲು ಹಾತೊರೆಯುತ್ತಿದೆ. ವಿಜಯನ್‌ ಮತ್ತೊಮ್ಮೆ ಅಧಿಕ್ಕಾರಕ್ಕೇರಲು ಪ್ರಯತ್ನಿಸುತ್ತಿದ್ದಾರೆ. ಈ ಅಕ್ರಮ ತೆರವು ವಿಚಾರದಲ್ಲಿ ಮುಸ್ಲಿಂ ಓಲೈಸಲು ಪ್ರಯತ್ನಿಸಲಾಗುತ್ತಿದೆ. ಇದು ತುಷ್ಠೀಕರಣದ ಪರಮಾವಧಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.