ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಪಾರಂಪರಿಕ ಸೀರೆ ವೈಭವವನ್ನು ಸಾರುವ ಮತ್ತು ಸಮಕಾಲೀನ ಅವಶ್ಯಕತೆಗಳಿಗೆ ಪೂರಕವಾಗಿ ನೇಕಾರರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಕಳೆದ 2 ದಿನಗಳಿಂದ ನಡೆಯುತ್ತಿರುವ ಸೀರೆ ಸಂತೆಗೆ ಇಂದು ತೆರೆ ಬೀಳಲಿದೆ.
ಸೀರೆ ಸಂತೆಯಲ್ಲಿ ದೊಡ್ಡಬಳ್ಳಾಪುರದ ನೇಕಾರಿಕೆಯ ವೈವಿಧ್ಯತೆ ಅನಾವರಣಗೊಂಡಿದ್ದು, ಸೀರೆಯಲ್ಲಿ ರೂಪಿಸಲಾಗಿರುವ ಗಣ್ಯರ ಭಾವಚಿತ್ರಗಳು, ರಾಷ್ಟ್ರ ನಾಯಕರ ಭಾವಚಿತ್ರಗಳು ಗಮನ ಸೆಳೆಯುತ್ತಿವೆ. 200 ರುಪಾಯಿ ಸೀರೆಯಿಂದ ಹಿಡಿದು, 15 ರಿಂದ 20 ಸಾವಿರ ರುಪಾಯಿ ಬೆಲೆ ಬಾಳುವ ಸೀರೆಗಳವರೆಗೆ ತರಾವರಿ ಸೀರೆಗಳು ಮಾರಾಟಕ್ಕಿವೆ. ಸುಮಾರು 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸ್ಥಳೀಯ ನೇಕಾರರು ನೇಯ್ದ ಸೀರೆಗಳ ಮಾರಾಟ ನಡೆಯುತ್ತಿದೆ. ಕೆಲ ಮಳಿಗೆಗಳಲ್ಲಿ ದೊಡ್ಡಬಳ್ಳಾಪುರದಲ್ಲದ ಫ್ಯಾನ್ಸಿ ಸೀರೆಗಳೂ ಲಭ್ಯವಿದೆ.ಮೊದಲ ದಿನ ಸಂಜೆ ಗಮನ ಸೆಳೆದ ಗಿಲ್ಲಿ ನಟ:
ಸೀರೆ ಸಂತೆಯ ಮೊದಲ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಪ್ರಸಕ್ತ ವರ್ಷದ ಬಿಗ್‌ಬಾಸ್ ರಿಯಾಲಿಟಿ ಶೋ ವಿಜೇತ ಗಿಲ್ಲಿ ನಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗಿಲ್ಲಿನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನೆರೆದಿದ್ದರು.ಕಾರ್ಯಕ್ರಮ ಉದ್ದೇಶಿಸಿ ಗಿಲ್ಲಿನಟ, ದೊಡ್ಡಬಳ್ಳಾಪುರದ ಜನ ಏನೇ ಮಾಡಿದರೂ ದೊಡ್ಡದಾಗೇ ಮಾಡ್ತಾರೆ ಎಂಬುದಕ್ಕೆ ಸೀರೆ ಸಂತೆ ಸಾಕ್ಷಿಯಾಗಿದೆ. ಇಲ್ಲಿನ ಅಭಿಮಾನ, ಜನಸಮೂಹ ನೋಡಿ ತಮ್ಮ ಉತ್ಸಾಹ ಇಮ್ಮಡಿಗೊಂಡಿದೆ ಎಂದರು.
ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಪಾರಂಪರಿಕವಾಗಿ ನೇಕಾರ ಸಮುದಾಯ ಸೀರೆ ನೇಯುವ ಕಾಯಕವನ್ನು ಮಾಡುತ್ತಾ ಬರುತ್ತಿದೆ. ಸ್ಥಳೀಯ ನೇಕಾರರ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸೀರೆ ಸಂತೆ ಪ್ರಯೋಗ ಅತ್ಯಂತ ಶ್ಲಾಘನೀಯ. ರಾಜ್ಯದಲ್ಲಿ ಇಂತಹ ಮಾದರಿ ವ್ಯವಸ್ಥೆ ರೂಪಿಸಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಸೀರೆ ಸಂತೆ ಆಯೋಜಕ, ಸ್ಥಳೀಯ ಶಾಸಕ ಧೀರಜ್ ಮುನಿರಾಜ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಸೀರೆ ಸಂತೆ ಆಯೋಜನಾ ಸಮಿತಿಯ ಎಂ.ಜಿ.ಶ್ರೀನಿವಾಸ್, ಪಿ.ಸಿ.ವೆಂಕಟೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.21ಕೆಡಿಬಿಪಿ3-
ದೊಡ್ಡಬಳ್ಳಾಪುರ ಸೀರೆ ಸಂತೆ ವೇದಿಕೆಯಲ್ಲಿ ಬಿಗ್‌ಬಾಸ್ ವಿಜೇತ ಗಿಲ್ಲಿನಟನಿಗೆ ಅಭಿನಂದನೆ.--
21ಕೆಡಿಬಿಪಿ4-ದೊಡ್ಡಬಳ್ಳಾಪುರ ಸೀರೆ ಸಂತೆಯಲ್ಲಿ ಶನಿವಾರ ಕಂಡು ಬಂದ ಜನಸಾಗರ.