ಇಂದಿನ ರಾಜಕೀಯದಲ್ಲಿ ವೈಯಕ್ತಿಕ ನಿಂದನೆ ಮತ್ತು ದ್ವೇಷ ಭಾಷಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ ಹೊಸ ದ್ವೇಷ ಭಾಷಣ ವಿರೋಧಿ ಕಾನೂನಿನ ಅಗತ್ಯತೆ, ಉದ್ದೇಶ ಮತ್ತು ಸಾರ್ವಜನಿಕ ಜೀವನದಲ್ಲಿ ಘನತೆಯನ್ನು ಮರುಸ್ಥಾಪಿಸುವ ಅದರ ಪಾತ್ರವನ್ನು ಈ ಲೇಖನ ವಿಮರ್ಶಿಸುತ್ತದೆ.
ಬಿ.ಎಲ್. ಶಂಕರ್. ವಿಧಾನ ಪರಿಷತ್ ಮಾಜಿ ಸಭಾಪತಿ
ಭಾರತವು ಸಹಸ್ರಾರು ವರ್ಷಗಳಿಂದ ಸಂವಾದ, ಚರ್ಚೆ, ವಿಚಾರ ವಿಮರ್ಶೆಗಳನ್ನು ಮೈಗೂಡಿಸಿಕೊಂಡಿರುವ ದೇಶವಾಗಿದೆ. ಜನಸಾಮಾನ್ಯರಿಗೂ ಅಭಿಪ್ರಾಯ ವ್ಯಕ್ತಪಡಿಸುವ, ಪ್ರಶ್ನಿಸುವ ಅವಕಾಶವನ್ನು ನಿರಂತರವಾಗಿ ಕೊಟ್ಟಿರುವ ದೇಶ ನಮ್ಮದು. ಗೌತಮ ಬುದ್ಧನ ಕಾಲದಲ್ಲೂ ಸಾಮಾಜಿಕ ಭೇದ-ಭಾವ ಇಲ್ಲದೆ ಸಭೆಗಳಲ್ಲಿ ಆಡಳಿತಗಾರರನ್ನು ಪ್ರಶ್ನಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಬಸವಣ್ಣನವರ ಕಾಲದಲ್ಲಂತೂ ಅಲ್ಲಮಪ್ರಭು ನೇತೃತ್ವದಲ್ಲಿ ಸಂಸತ್ತು, ಶಾಸನಸಭೆ ರೂಪದಲ್ಲಿದ್ದ ಅನುಭವ ಮಂಟಪದಲ್ಲಿ ಚರ್ಚೆಗಳು, ಸಂವಾದಗಳು, ಪ್ರಶ್ನೋತ್ತರಗಳು ನಡೆಯುತ್ತಿದ್ದವು. ಹೆಣ್ಣು-ಗಂಡಿನ ಭೇದ- ಭಾವ ಇಲ್ಲದೆ, ಜಾತಿ ತಾರತಮ್ಯ ಇಲ್ಲದೇ, ಧೈರ್ಯವಾಗಿ ಪ್ರಶ್ನಿಸುವ ಅಧಿಕಾರವನ್ನು ಪ್ರತಿಯೊಬ್ಬರೂ ಚಲಾಯಿಸುತ್ತಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ತಡೆಯಲು ದ್ವೇಷ ಭಾಷಣ ಕಾಯ್ದೆ ಅಗತ್ಯ: ರಮೇಶ್ ಬಾಬು ಲೇಖನ
ಇಂತಹ ಪರಂಪರೆಯ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ರಚಿಸುವ ಸಂದರ್ಭದಲ್ಲಿ, ಸಂವಿಧಾನ ರಚನಾ ಸಭೆಯಲ್ಲಿದ್ದ ದಿಗ್ಗಜರು ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪಿಸಲು ಸಾಕಷ್ಟು ಚರ್ಚೆ, ಸಂವಾದಗಳನ್ನು ನಡೆಸಿದರು. ಅಂತಿಮವಾಗಿ ಅಧ್ಯಕ್ಷೀಯ ಪ್ರಭುತ್ವಕ್ಕಿಂತ ಸಂಸದೀಯ ಪ್ರಜಾಪ್ರಭುತ್ವ ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛಾಚಾರ ಅಲ್ಲ
ಸಂಸತ್ತಿನ ಮೂಲಭೂತ ಲಕ್ಷಣವೇ ಅಭಿವ್ಯಕ್ತಿ ಸ್ವಾತಂತ್ರ್ಯ. ಇದನ್ನು ಮೂಲಭೂತ ಹಕ್ಕಾಗಿ ಸಂವಿಧಾನ ನಮಗೆ ನೀಡಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ, ಇನ್ನೊಬ್ಬರ ಸಾಂವಿಧಾನಿಕ ಹಕ್ಕುಗಳು, ಗೌರವಕ್ಕೆ ಧಕ್ಕೆ ತರುವಂತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರ ಆಗಬಾರದು ಎನ್ನುವ ಕಳಕಳಿ, ಕಾಳಜಿಯು ಸಂವಿಧಾನ ಕರ್ತೃಗಳಿಗೆ ಈ ಸಂದರ್ಭದಲ್ಲಿ ಸ್ಪಷ್ಟವಾಗಿತ್ತು.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ದೇಶದಲ್ಲಿ ಶತಮಾನಗಳಿಂದಲೂ ಸ್ಥಾನಮಾನ ನೀಡಲಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಸಂಸತ್ತು, ಶಾಸನಸಭೆಯ ಮೂಲಭೂತ ಲಕ್ಷಣವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೂ ಸಂವಿಧಾನ ನೀಡಿರುವ ಹಕ್ಕು ಆಗಿದೆ. ಹಾಗೆಂದ ಮಾತ್ರಕ್ಕೆ ಬೇರೆಯವರನ್ನು ಬಾಯಿಗೆ ಬಂದಂತೆ ಮಾತನಾಡಿ ನಿಂದಿಸಬಾರದು. ಅವರ ಗೌರವಕ್ಕೆ ಧಕ್ಕೆ ಉಂಟಾಗುವಂತೆ ನಡೆದುಕೊಳ್ಳಬಾರದು.
ಚರ್ಚೆ, ಸಂವಾದಕ್ಕೆ ಇದೆ ಪರಂಪರೆ
ಈ ದೇಶದ ಸುದೀರ್ಘ ಪರಂಪರೆಯನ್ನು ಗಮನಿಸಿರುವ ನಮಗೆ ಚರ್ಚೆಗಳು, ಸಂವಾದಗಳು, ಪ್ರಶ್ನೋತ್ತರಗಳು ಸಜ್ಜನಿಕೆಯ ಒಂದು ಗಡಿಯನ್ನು ಮೀರುತ್ತಿರಲಿಲ್ಲ. ತನ್ನ ಎದುರಾಳಿಗಳಿಗೂ ಗೌರವವನ್ನು ನೀಡುವ ಮತ್ತು ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡುವ ಒಂದು ಆರೋಗ್ಯಕರ ಪರಂಪರೆ ನಮ್ಮ ದೇಶದ್ದಾಗಿದೆ. ಸ್ವಾತಂತ್ರ್ಯಾ ನಂತರದ ಹಲವು ದಶಕಗಳವರೆಗೆ ಶಾಸನ ಸಭೆ, ಸಂಸತ್ತು ಮತ್ತು ಸಾರ್ವಜನಿಕ ಬದುಕಿನಲ್ಲಿರುವವರ ಮಾತುಗಳು ಅತ್ಯಂತ ಘನತೆ ಮತ್ತು ಗಾಂಭೀರ್ಯವನ್ನು ಹೊಂದಿರುವ ರೂಪದಲ್ಲಿ ಇರುವುದನ್ನು ಗಮನಿಸುತ್ತಾ ಬಂದಿದ್ದೇವೆ.
ಸಂಸದೀಯ ನಡವಳಿಕೆಗಳು ಯಾವ ರೀತಿ ಇರಬೇಕು ಎನ್ನುವುದಕ್ಕೆ ಇತಿಹಾಸದ ಪುಟಗಳನ್ನು ಗಮನಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್, ಪಂಡಿತ್ ಜವಾಹರ್ ಲಾಲ್ ನೆಹರು, ಆಚಾರ್ಯ ಕೃಪಲಾನಿ, ರಾಮ್ ಮನೋಹರ್ ಲೋಹಿಯಾ, ಮಾಜಿ ಪ್ರಧಾನಿ ಚಂದ್ರಶೇಖರ್, ಅಟಲ್ ಬಿಹಾರಿ ವಾಜಪೇಯಿ ಅವರ ಚರ್ಚೆ, ಸಂವಾದಗಳು ಇಂದಿಗೂ ಮಾದರಿಯಾಗಿವೆ.
ಅದೇ ರೀತಿ ಕರ್ನಾಟಕದಲ್ಲೂ ಎಸ್. ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಅವರು ಪರಸ್ಪರ ವಿರೋಧ ಪಕ್ಷದಲ್ಲಿದ್ದಾಗ ನಡೆದಿರುವ ಚರ್ಚೆ, ಸಂವಾದಗಳು ಇಂದಿನ ಪೀಳಿಗೆಯವರಿಗೆ ಮಾರ್ಗದರ್ಶನ ನೀಡುತ್ತವೆ. ಅದರ ಬಗ್ಗೆ ಓದಿ ತಿಳಿದುಕೊಂಡು ಮೈಗೂಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರೆ ಸಾಕು, ಶಾಸನಸಭೆಗಳ ಗೌರವ ಮತ್ತು ಘನತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ರಾಜಕೀಯ ಎದುರಾಳಿಗಳು ಶತ್ರುಗಳಲ್ಲ
ಕೆಲವು ದಶಕಗಳ ಕಾಲ ಸಾರ್ವಜನಿಕ ಸಂವಾದಗಳು, ಪರಸ್ಪರ ಗೌರವದ ಇತಿಮಿತಿಯನ್ನು ದಾಟಿರಲಿಲ್ಲ. ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಿಗೆ ಸೇರಿದವರು ರಾಜಕೀಯ ಎದುರಾಳಿಗಳಾಗಿದ್ದರೇ ಹೊರತು ಅವರನ್ನು ಶತ್ರುಗಳ ರೂಪದಲ್ಲಿ ನೋಡುತ್ತಿರಲಿಲ್ಲ. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಜಕೀಯ ಎದುರಾಳಿಗಳು ಪರಸ್ಪರ ಶತ್ರುಗಳಂತೆ ವರ್ತಿಸುತ್ತಿದ್ದಾರೆ. ಪ್ರಯೋಗವಾಗುತ್ತಿರುವ ಪದಗಳು ವೈಯಕ್ತಿಕ ಖಾಸಗಿ ಬದುಕನ್ನೂ ಬಿಡುತ್ತಿಲ್ಲ. ಪರಸ್ಪರರ ವಿರುದ್ಧ ಅವಾಚ್ಯ ಶಬ್ದ ಬಳಸುವ ಮಟ್ಟಿಗೆ ತಲುಪಿರುವುದನ್ನು ನಾವು ಕಾಣುತ್ತಿದ್ದೇವೆ. ಅದರಲ್ಲಿ ಕೆಲವು ಕಡೆ ಅಪವಾದ ಇರಬಹುದು. ಆದರೂ ಬಹುತೇಕ ಮಾಧ್ಯಮ, ಸದನದ ಚರ್ಚೆಗಳಲ್ಲಿ ಈ ರೀತಿಯ ನಡವಳಿಕೆ ಸರ್ವೇ ಸಾಮಾನ್ಯ ಎನ್ನುವ ಹಂತವನ್ನು ತಲುಪಿದೆ.
ಮಾಧ್ಯಮಗಳಲ್ಲಿ ಅದಕ್ಕೆ ಹೆಚ್ಚಿನ ಪ್ರಚಾರ ದೊರಕುತ್ತಿದೆ. ದೇಶದಲ್ಲಿನ ಕಾನೂನುಗಳು ಮಾನಹಾನಿಯ ಸಂದರ್ಭದಲ್ಲಿ ಪ್ರಯೋಗಿಸಬಹುದಾದ ಕಾನೂನನ್ನು ಹೊಂದಿದ್ದರೂ ಸುದೀರ್ಘವಾದಂತಹ ಕಾನೂನಿನ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ನ್ಯಾಯ ಸಿಗಲು ದಶಕಗಳ ಕಾಲ ಕಾಯುವ ಸ್ಥಿತಿ ಇರುವುದು ವಾಸ್ತವದ ಸಂಗತಿಯಾಗಿದೆ.
ನಾಚಿಕೆಯ ಎಲ್ಲೆ ಮೀರಿದ ಮಾತುಗಳು
ಇಂದು ರಾಜಕಾರಣಿಗಳು, ಭಾಷಣಕಾರರ ಬಾಯಿಯಿಂದ ಬರುವ ಮಾತುಗಳು ಘನತೆ, ಗಾಂಭೀರ್ಯ, ಗೌರವದ ಗಡಿಯನ್ನು ಮೀರಿವೆ. ದೊಡ್ಡ ದೊಡ್ಡವರ ಮಾತುಗಳನ್ನು ಜನ ಸಾಮಾನ್ಯರು ಕೇಳಿಸಿಕೊಂಡಾಗ ಅಂತಹ ‘ದೊಡ್ಡ ವ್ಯಕ್ತಿಯ ಬಾಯಲ್ಲಿ ಎಂತಹ ಸಣ್ಣ ಮಾತು ನೋಡಿ’ ಎಂದು ಆಡಿಕೊಳ್ಳುವಂತಾಗಿದೆ. ನಾಚಿಕೆಯ ಎಲ್ಲೆ ಮೀರಿದ ಮಾತುಗಳನ್ನು ಕೇಳಿದರೆ ದೊಡ್ಡವರು ಬಿಡಿ, ಸಣ್ಣವರು ಕೂಡ ನಾಚಿಕೆ ಪಟ್ಟುಕೊಳ್ಳುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ದ್ವೇಷ ಭಾಷಣ ನಿಯಂತ್ರಣ ಕಾನೂನಿನ ಅಗತ್ಯವಿದೆ ಎನ್ನುವ ಅಭಿಪ್ರಾಯವಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇತ್ತೀಚೆಗೆ ತಂದಿರುವ ದ್ವೇಷ ಭಾಷಣ ವಿರೋಧಿ ಕಾನೂನನ್ನು ನಾವು ಪರಾಮರ್ಶಿಸಬೇಕಾಗಿದೆ. ಒಂದು ಕಾಲದಲ್ಲಿ ಸ್ವಪ್ರೇರಣೆಯಿಂದ ಮತ್ತು ಈ ದೇಶದ ಪರಂಪರೆಗೆ ಬದ್ಧವಾಗಿ ಸ್ವನಿಯಂತ್ರಣ ಹಾಕಿಕೊಳ್ಳುತ್ತಿದ್ದಂತಹ ಸಾರ್ವಜನಿಕ ಕ್ಷೇತ್ರದ ಮುಖಂಡರು ಇಂದು ಕಾನೂನಿನಲ್ಲಿರುವ ಲೋಪ, ಕೊರತೆಗಳನ್ನು ಬಳಸಿಕೊಂಡು ಎಗ್ಗಿಲ್ಲದೇ ನಿಂದನಾತ್ಮಕ ಭಾಷಾ ಪ್ರಯೋಗ ನಡೆಸುತ್ತಿದ್ದಾರೆ. ಸ್ವಪ್ರೇರಣೆಯಿಂದ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅಂತಹುದನ್ನು ಕಾನೂನಿನ ಮುಖಾಂತರವಾದರೂ ನಿಯಂತ್ರಿಸುವ ಒಂದು ಪ್ರಯತ್ನವೇ ಈ ಕಾನೂನು.
ದಮನಕಾರಿ ಉದ್ದೇಶದ ಕಾನೂನಲ್ಲ
ಈ ಕಾನೂನಿನ ಬಗ್ಗೆ ಕೆಲವು ಆತಂಕಗಳು ಇರುವುದು ನಿಜವಾದರೂ, ಪೊಲೀಸರಿಗೆ ಅಪರಿಮಿತಿವಾದ ಅಧಿಕಾರ ದೊರೆಯುತ್ತದೆ ಎನ್ನುವಂತಹ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ, ಇಂತಹ ಕಾನೂನು ಬರುವ ಸ್ಥಿತಿಯನ್ನು ನಿರ್ಮಿಸಿಕೊಂಡವರು ಸಾರ್ವಜನಿಕ ಬದುಕಿನಲ್ಲಿರುವ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದ ಮುಖಂಡರು ಮತ್ತು ಜನಪ್ರತಿನಿಧಿಗಳೇ ಆಗಿದ್ದಾರೆ.
ಹೊಸ ಕಾನೂನು ನನ್ನ ದೃಷ್ಟಿಯಲ್ಲಿ ನಿಯಂತ್ರಣದ ಉದ್ದೇಶವನ್ನು ಹೊಂದಿದೆಯೇ ಹೊರತು, ರಾಜಕೀಯ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ದಮನ ಮಾಡುವ ಉದ್ದೇಶದಿಂದ ತಂದಿರುವ ಕಾನೂನು ಅಲ್ಲ. ಆಡಳಿತದಲ್ಲಿ ಇರುವವರನ್ನು ಟೀಕಿಸಬಾರದು, ವಿಮರ್ಶೆಗೆ ಒಳಪಡಿಸಬಾರದು ಎನ್ನುವ ಉದ್ದೇಶ ಹೊಂದಿಲ್ಲ.
ಸಾರ್ವಜನಿಕ ಬದುಕಿನಲ್ಲಿ ಇರುವವರು, ವಿಶೇಷವಾಗಿ ಅಧಿಕಾರ ಸ್ಥಾನದಲ್ಲಿರುವವರು ಎಲ್ಲರಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಇತರರಿಗೆ ಮಾದರಿಯಾಗಿರಬೇಕಾಗುತ್ತದೆ. ಈ ಕಾನೂನು ಆಡಳಿತ- ಪ್ರತಿಪಕ್ಷ ಅಥವಾ ಜನಸಾಮಾನ್ಯ-ಪ್ರಭಾವಶಾಲಿ ಎನ್ನುವ ತಾರತಮ್ಯ ಇಲ್ಲದೇ ಅಸಂಸದೀಯವಾದ ಮಾನಹಾನಿಕಾರಕ, ಆಧಾರರಹಿತವಾದ, ಶಿಕ್ಷಾರ್ಹವಾದ ಭಾಷೆ ಮತ್ತು ಮಾತನ್ನು ಯಾರೇ ಪ್ರಯೋಗಿಸಿದರೂ ಅವರಿಗೆ ಅನ್ವಯವಾಗುವ ಕಾನೂನು ಆಗಿದೆ.
ಈ ಕಾನೂನನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆ ವಿಶೇಷವಾಗಿ ಆಡಳಿತಾರೂಢ ಪಕ್ಷದವರ ಮೇಲೆ ಶಾಸಕ, ಸಚಿವರ ಮೇಲೆ ವಿಶೇಷವಾದ ಜವಾಬ್ದಾರಿ ಇರುತ್ತದೆ. ಸುಮಾರು ಏಳು ದಶಕಗಳ ಕಾಲ ನಮ್ಮ ಸಂಸದೀಯ ಪ್ರಜಾಪ್ರಭುತ್ವ ಅನುಭವದ ಹಿನ್ನೆಲೆಯಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಜನಗಳಿಗೆ ಅನುಮಾನ ಮತ್ತು ಆಕ್ರೋಶ ಇದೆ. ಈ ಸಂದರ್ಭದಲ್ಲಿ ವ್ಯಕ್ತಿಗತ ಬದುಕು, ಸಾರ್ವಜನಿಕ ಬದುಕಿನಲ್ಲೂ ನಮ್ಮ ನಡವಳಿಕೆಯನ್ನು ಜನ ಸಾಮಾನ್ಯರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರಿಗೆ ಇಷ್ಟವಾಗದ ನಡವಳಿಕೆ ಆಗಿದ್ದರೆ, ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥರನ್ನು ದಂಡಿಸುತ್ತಾರೆ ಎನ್ನುವ ಒಳ ಎಚ್ಚರಿಕೆ ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಇರಬೇಕಾದದ್ದು ಅತ್ಯಂತ ಅವಶ್ಯಕ.
