ದ್ವೇಷ ಭಾಷಣ ಕಾಯಿದೆ ಜಾರಿ ವಿರೋಧಿಸಿ ಪಟ್ಟಣದ ತಹಸೀಲ್ದಾರ್‌ ಕಚೇರಿಯ ಎದುರು ಲಕ್ಷ್ಮೇಶ್ವರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಲಕ್ಷ್ಮೇಶ್ವರ: ಬಾಯಿ ತೆರೆದರೆ ಸಂವಿಧಾನ ರಕ್ಷಣೆಯ ವಾರಸುದಾರರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ದ್ವೇಷ ಭಾಷಣ ಕಾಯಿದೆ ಜಾರಿಗೆ ತರುವ ಮೂಲಕ ಸಂವಿಧಾನದ ಆಶಯಗಳಿಗೆ ಮಣ್ಣು ತೂರುವ ಕಾರ್ಯ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಬುಧವಾರ ಪಟ್ಟಣದ ತಹಸೀಲ್ದಾರ್‌ ಕಚೇರಿಯ ಎದುರು ದ್ವೇಷ ಭಾಷಣ ಕಾಯಿದೆ ಜಾರಿಯ ವಿರುದ್ಧ ರಾಜ್ಯಪಾಲರಿಗೆ ಬರೆದಿರುವ ಮನವಿ ಪತ್ರವನ್ನು ಗ್ರೇಡ್ -2 ತಹಸೀಲ್ದಾರ್‌ ಮಂಜುನಾಥ ಅಮಾಸಿ ಅವರಿಗೆ ಸಲ್ಲಿಸಿ ಅವರು ಮಾತನಾಡಿದರು.

ದ್ವೇಷ ಭಾಷಣ ಕಾಯಿದೆ ಜಾರಿಗೆ ತರಲು ಹೊರಟಿರುವ ಕಾಂಗ್ರೆಸ್ ಪ್ರತಿಪಕ್ಷಗಳ ಹಾಗೂ ಪತ್ರಿಕೆಗಳ ಬಾಯಿ ಮುಚ್ಚಿಸಲು ಹೊರಟಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿರುವ ಕಾಂಗ್ರೆಸ್ ತನ್ನ ತಪ್ಪು ಮುಚ್ಚಿಕೊಳ್ಳುವ ಸಲುವಾಗಿ ವಿರೋಧಿಗಳ ಕಟ್ಟಿಹಾಕುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ವಿರೋಧ ಪಕ್ಷಗಳು ಆಡಳಿತ ಪಕ್ಷದ ತಪ್ಪುಗಳನ್ನು ಜನರಿಗೆ ತೋರಿಸಲು ಯತ್ನಿಸಿದರೆ ದ್ವೇಷ ಭಾಷಣ ಎಂಬ ಹೆಸರಿನಲ್ಲಿ ಬಂಧಿಸಬಹುದು. ಇಂತಹ ಕಾಯಿದೆ ನಮಗೆ ಬೇಡ. ದ್ವೇಷದ ಭಾಷಣದ ಕಾಯಿದೆ ಅಡಿಯಲ್ಲಿ ಸುಖಾಸುಮ್ಮನೆ ಪ್ರಕರಣ ದಾಖಲಿಸಿ ವಿರೋಧಿಗಳ ಬಾಯಿ ಮುಚ್ಚಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಸಂವಿಧಾನ ವಿರೋಧಿ ಕ್ರಮವಾಗಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯಗಳಿಗೆ ಈ ಕಾಯಿದೆ ವಿರೋಧಿಯಾಗಿದೆ ಎಂದು ಹೇಳಿದರು.

ಈ ವೇಳೆ ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ವೀರೇಶ ಸಾಸಲವಾಡ, ನವೀನ ಹಿರೇಮಠ ಮಾತನಾಡಿದರು. ಚಂಬಣ್ಣ ಬಾಳಿಕಾಯಿ, ಮಹಾದೇವಪ್ಪ ಅಣ್ಣಿಗೇರಿ, ಜಾನು ಲಮಾಣಿ, ಶಿವಣ್ಣ ಲಮಾಣಿ, ಪುಂಡಲೀಕ ಲಮಾಣಿ, ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಎಂ.ಆರ್. ಪಾಟೀಲ, ಸಿದ್ದನಗೌಡ ಬೊಳ್ಳೊಳ್ಳಿ, ಪ್ರವೀಣ್ ಬೊಮಲೆ, ರಮೇಶ್ ಹಾಳು ತೋಟದ, ರಮೇಶ್ ಲಮಾಣಿ, ಶಕ್ತಿ ಕತ್ತಿ, ರಾಜಶೇಖರ ಶಿರಹಟ್ಟಿ , ವಿಶಾಲ ಬಟಗುರ್ಕಿ, ಸಂತೋಷ ಜಾವೂರ, ಜಾಹಿರ್ ಮೋಮಿನ್, ನೀಲಪ್ಪ ಕರ್ಜಕ್ಕಣ್ಣವರ, ಹನುಮಂತ ಜಾಲಿಮರದ, ಭೀಮಣ್ಣ ಯಂಗಾಡಿ, ಅಶೋಕ ಶಿರಹಟ್ಟಿ, ನಾಗಯ್ಯ ಮಠಪತಿ ಇದ್ದರು.