ಕನ್ನಡಪ್ರಭ ವಾರ್ತೆ ಬೆಳಗಾವಿ
ನಕಲಿ ಪಿಎಚ್‌ಡಿ ಪದವಿ ಪಡೆದು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಿಲ್ಲಾ ಘಟಕದಿಂದ ಗುರುವಾರ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಚನ್ನಮ್ಮ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಿ ಅನುದಾನಿತ ವಿವಿಧ ಕಾಲೇಜುಗಳಲ್ಲಿ ನಕಲಿ ಪಿಎಚ್‌ಡಿ ಪದವಿ ಹೊಂದಿದ ಕೆಲವರು ಅತಿಥಿ ಉಪನ್ಯಾಸಕರಾಗಿ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದ, ಪ್ರಾಮಾಣಿಕವಾಗಿ ಅಧ್ಯಯನ ಮಾಡಿ ಪಿಎಚ್‌ಡಿ ಪಡೆದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೇ, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೂ ಹಾನಿಯಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ ನಕಲಿ ಪದವಿ ಹೊಂದಿದ ಕೆಲ ಉಪನ್ಯಾಸಕರು ರಾಜೀನಾಮೆ ನೀಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಆದರೂ, ರಾಜ್ಯ ಸರ್ಕಾರ ಇದುವರೆಗೂ ಯಾವುದೇ ದೃಢ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ರಾಜ್ಯ ಮತ್ತು ಹೊರರಾಜ್ಯಗಳಿಂದ ನಕಲಿ ಪಿಎಚ್‌ಡಿ ಪದವಿ ನೀಡುತ್ತಿರುವ ಜಾಲವನ್ನು ಪತ್ತೆಹಚ್ಚಬೇಕು. ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಉಪನ್ಯಾಸಕರ ದಾಖಲಾತಿಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ನಕಲಿ ದಾಖಲೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ, ರಾಜ್ಯದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಅಧ್ಯಾಪಕರ ಮತ್ತು ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಪ್ರಥಮಗೌಡ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು.