ನರಸಿಂಹರಾಜಪುರ ಕಾಂಗ್ರೆಸ್ ಪಕ್ಷ ದ್ವೇಷ ಭಾಷಣ ವಿಧೇಯಕ ಬಿಲ್ಲು ಪಾಸ್ ಮಾಡುವ ಮೂಲಕ ಹಿಂದೂ ಧರ್ಮವನ್ನು, ಹಿಂದೂ ನಾಯಕರನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣ್‌ಕುಮಾರ್ ಆರೋಪಿಸಿದರು.

- ಬಿಜೆಪಿ ಯಿಂದ ವಾಜಪೈಯಿ ಜನ್ಮ ದಿನಾಚರಣೆ । ದ್ವೇಷ ಭಾಷಣ ವಿಧೇಯಕ ವಿರೋಧಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಾಂಗ್ರೆಸ್ ಪಕ್ಷ ದ್ವೇಷ ಭಾಷಣ ವಿಧೇಯಕ ಬಿಲ್ಲು ಪಾಸ್ ಮಾಡುವ ಮೂಲಕ ಹಿಂದೂ ಧರ್ಮವನ್ನು, ಹಿಂದೂ ನಾಯಕರನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣ್‌ಕುಮಾರ್ ಆರೋಪಿಸಿದರು.

ಗುರುವಾರ ಪಟ್ಟಣದ ವಾಟರ್ ಟ್ಯಾಂಕ್ ವೃತ್ತದಲ್ಲಿ ತಾಲೂಕು ಬಿಜೆಪಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಹಾಗೂ ದ್ವೇಷ ಭಾಷಣ ವಿಧೇಯಕ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ಧರ್ಮದ ಪರವಾಗಿ ಮಾತನಾಡಿದರೆ, ಧ್ವನಿ ಎತ್ತಿದರೆ, ಭಾರತ ಮಾತೆ ವಿರುದ್ಧ ಮಾಡುವ ಅಪಮಾನ ಖಂಡಿಸಿದರೆ, ಪ್ರತಿಭಟಿಸಿದರೆ ಕಾಂಗ್ರೆಸ್ ಪಕ್ಷದವರಿಗೆ ದ್ವೇಷ ಭಾಷಣವಾಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಹಿಂದೂ ಕಾರ್ಯಕರ್ತರ, ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟರ್‌ಗಳನ್ನು ಹಾಕಿದರೂ ನಡೆಯುತ್ತದೆ.

ಆದರೆ, ಹಿಂದೂ ನಾಯಕರು, ಕಾರ್ಯಕರ್ತರು ತಮ್ಮ ಮೇಲಾಗುವ ದಬ್ಬಾಳಿಕೆ ಪ್ರಶ್ನಿಸಿದರೆ ದ್ವೇಷವಾಗುತ್ತದೆ. ದ್ವೇಷ ಭಾಷಣ ವಿಧೇಯಕ ಬಿಲ್ಲನ್ನು ಬಿಜೆಪಿ ಸಂಪೂರ್ಣವಾಗಿ ಖಂಡಿಸುತ್ತದೆ. ಅದರ ವಿರುದ್ಧ ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೀದಿ ನಾಯಿಗಳ ಬಿರ್ಯಾನಿಗೆ ಲಕ್ಷಾಂತರ ರು. ಖರ್ಚು ಮಾಡುತ್ತದೆ. ಆದರೆ, ಜನರಿಗೆ ಯಾವ ಬೆಲೆಯೂ ಇಲ್ಲದಂತಾಗಿದೆ. ಅಧಿಕಾರ ಎಂದಿಗೂ ಶಾಶ್ವತವಲ್ಲ. ದ್ವೇಷ ಭಾಷಣದ ವಿಧೇಯಕ ಬಿಲ್ಲಿನ ಸಾರಾಂಶ ವನ್ನು ಮೊದಲು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಪಕ್ಷದ ನಾಯಕರಿಗೊಂದು ನ್ಯಾಯ, ಬಿಜೆಪಿ ನಾಯಕರಿಗೊಂದು ನ್ಯಾಯ ಸರಿಯಲ್ಲ ಎಂದರು.ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದವರ ಚರ್ಚೆಗೂ ಅವಕಾಶ ನೀಡದೆ ದ್ವೇಷ ಭಾಷಣ ವಿಧೇಯಕ ಮಂಡನೆ ಮಾಡಿದೆ. ವಿರೋಧ ಪಕ್ಷವನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿದೆ. ಸಂವಿಧಾನದಲ್ಲಿ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಈ ಬಿಲ್ಲಿನ ಮೂಲಕ ಕಸಿದುಕೊಂಡು ಸಂವಿಧಾನಕ್ಕೆ ಅಪಮಾನ ವೆಸಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಬಾರದೆಂದು ಅಭಿವ್ಯಕ್ತಿ ಸ್ವಾತಂತ್ರ ಕಿತ್ತು ಹಾಕಲು ಮುಂದಾಗಿದೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡ ವೈ.ಎಸ್.ರವಿ ಮಾತನಾಡಿದರು.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸೈಯದ್‌ ಪರ್ವೀಜ್, ನಗರ ಘಟಕದ ಅಧ್ಯಕ್ಷ ಸುರಭಿರಾಜೇಂದ್ರ, ಯುವ ಮೋರ್ಚಾ ಅಧ್ಯಕ್ಷ ಪ್ರೀತಂ, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿದಯಾನಂದ್, ತಾಲೂಕು ವಕ್ತಾರ ಎನ್.ಎಂ.ಕಾಂತರಾಜ್, ಮುಖಂಡರಾದ ಬಿ.ಎಸ್. ಆಶೀಶ್‌ ಕುಮಾರ್, ಕೆಸವಿ ಮಂಜುನಾಥ್, ದ್ವಾರಮಕ್ಕಿಅಶ್ವನ್, ಡಿ.ಆರ್.ಶ್ರೀನಾಥ್, ಎನ್.ಡಿ.ಪ್ರಸಾದ್,ಮಂಜುನಾಥ್‌ಲಾಡ್, ಎ.ಬಿ.ಮಂಜುನಾಥ್, ಎಚ್‌.ಡಿ.ಲೋಕೇಶ್,ಟಿ.ಆರ್.ಜಯರಾಂ,ಹೆಮ್ಮೂರು ಸಂದೀಪ್, ಶೇಖರ, ಮನೋಜ್‌ಕುಮಾರ್, ಮದನ್‌ಗೌಡ, ಮುರುಳಿ, ಪ್ರವೀಣ್ ಮತ್ತಿತರರಿದ್ದರು.