ಕನ್ನಡಪ್ರಭ ವಾರ್ತೆ ಮೈಸೂರು

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮರಳಿ ತರಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸಹಯೋಗದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ನಜರ್ ಬಾದ್ ನಲ್ಲಿರುವ ತಾಲೂಕು ಕಚೇರಿಯವರೆಗೆ ಗುರುವಾರ ಪಾದಯಾತ್ರೆ ಹಮ್ಮಿಕೊಂಡಿದ್ದರು.

ಈ ವೇಳೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರವು ನರೇಗಾ ಕಾಯ್ದೆಯ ಆಶಯಗಳನ್ನು ಬದಲಾಯಿಸಿ, ವಿಬಿ ಜಿ ರಾಮ್‌ ಎಂಬ ಅಪರಿಚಿತ ಹೆಸರು ಇಟ್ಟು ಸ್ವರೂಪ ಬದಲಾಯಿಸಲಾಗಿದೆ. ನರೇಗಾ ಯೋಜನೆ ಜಾರಿಯಾಗಿ 20 ವರ್ಷವಾಗಿದ್ದು, ರಾಜ್ಯದಲ್ಲಿ 180 ಕೋಟಿ ಕೂಲಿ ದಿನ ನಿರ್ಮಾಣ ಮಾಡಿದ್ದೇವೆ. 80 ಸಾವಿರ ಕೋಟಿ ಹಣ ಉಪಯೋಗಿಸಿದ್ದು, ಆ ಮೂಲಕ ಹಳ್ಳಿಗಳಲ್ಲಿ ಕೆರೆ– ಕಟ್ಟೆಗೆ ಬದು ನಿರ್ಮಾಣ, ಚೆಕ್‌ ಡ್ಯಾಂ, ಕಾಳುವೆ ನಿರ್ಮಾಣವು ಸುಸೂತ್ರವಾಗಿ ನಡೆದಿದೆ. ಜನಪರ ಕಾಯ್ದೆಯೊಂದನ್ನು ದುರ್ಬಲಗೊಳಿಸುವ ಪ್ರಯತ್ನ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಭದ್ರತೆ ಕಾನೂನು ಅನ್ವಯ ಭಾರತೀಯನಿಗೆ ನಿರಂತರ ಉದ್ಯೋಗ ಹಾಗೂ ವೇತನ ದೊರೆಯಲು ನರೇಗಾ ಯೋಜನೆ ಜಾರಿಗೊಳಿಸಲಾಯಿತು. ಕಾಂಗ್ರೆಸ್‌ ಗಾಂಧಿ, ಅಂಬೇಡ್ಕರ್‌ ಹೆಸರಿನಲ್ಲಿ ಅವರ ಸಿದ್ಧಾಂತದ ಅನ್ವಯ ದೇಶ ಮುಂದುವರೆಸುತ್ತಿದೆ. ಗಾಂಧಿ ಸಿದ್ಧಾಂತವನ್ನು ಬದಲಾಯಿಸಿದರೆ ಕಾಂಗ್ರೆಸ್‌ ಇಲ್ಲದಂತಾಗುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಕಾಯ್ದೆಯ ಸ್ವರೂಪ ಬದಲಾಯಿಸಿದೆ. ಆದರೆ, ಕಾಂಗ್ರೆಸ್‌ ಎಂದಿಗೂ ಅಂಬೇಡ್ಕರ್‌ ಹಾಗೂ ಗಾಂಧಿ ಸಿದ್ಧಾಂತ ಬಿಟ್ಟು ಕೆಲಸ ಮಾಡುವುದಿಲ್ಲ. ಅದನ್ನು ವಿರೋಧಿಸಿದರೆ ಕಾಂಗ್ರೆಸ್‌ ವಿರುದ್ಧವಾಗಿರುವ ಯಾವ ರಾಜಕೀಯ ಪಕ್ಷಗಳೂ ಉಳಿಯುವುದಿಲ್ಲ ಎಂದು ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರವು ಅಮೇರಿಕಾ ಜೊತೆ 40 ಲಕ್ಷ ಕೋಟಿ ವ್ಯವಹಾರದ ಒಪ್ಪಂದ ಮಾಡಿದ್ದು, ಅಲ್ಲಿನ ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ನೀಡುವ ಯೋಜನೆ ರೂಪಿಸಲಾಗಿದೆ. ಧವಸ ಧಾನ್ಯ ಅಮೇರಿಕಾದಿಂದ ಬಂದರೆ ನಮ್ಮ ರೈತರ ಎದೆಗೆ ಮಣ್ಣು ಹಾಕಿದಂತೆ. ಬಿಜೆಪಿಯು ಜನರು ಹಳೆ ಪದ್ಧತಿಗೆ ಹೋಗಿ, ಬಡವರು, ದೀನ ದಲಿತರು ತಮ್ಮ ಮುಂದೆ ಕೈಕಟ್ಟಿ ನಿಲ್ಲುವಂತೆ ಮಾಡುವ ವ್ಯವಸ್ಥೆ ರೂಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅರುಣ್ ಕುಮಾರ್, ಇಲವಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕುಮಾರ್, ಮಾಜಿ ಮೇಯರ್ ಗಳಾದ ಟಿ.ಬಿ. ಚಿಕ್ಕಣ್ಣ, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಎಂ. ಮಹದೇವು, ಶಿವಪ್ರಸಾದ್, ಲೋಕೇಶ್ ಕುಮಾರ್, ಉತ್ತನಹಳ್ಳಿ ಶಿವಣ್ಣ, ಮೋಹನ್ ಮೊದಲಾದವರು ಇದ್ದರು.

----

ಬಾಕ್ಸ್...

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ತಯಾರಿಸಿ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗಿನಿಂದಲೇ ಕಾಂಗ್ರೆಸ್‌ ಅಭ್ಯರ್ಥಿ ತಯಾರು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

ಕಾಂಗ್ರೆಸ್‌ ಶಾಸಕರಿಲ್ಲದೆ ಚಾಮುಂಡೇಶ್ವರಿ ಕ್ಷೇತ್ರ ಅನಾಥವಾಗಿದೆ. ಅಲ್ಲಿನ ಕಾರ್ಯಕರ್ತರ ಸಮಸ್ಯೆ ಕೇಳುವವರು ಇಲ್ಲದಾಗಿದೆ. ಅಲ್ಲಿನ ಶಾಸಕರು 4ನೇ ಬಾರಿ ಗೆಲ್ಲಲು ತಯಾರಿ ನಡೆಸುತ್ತಿದ್ದು, ಕಾಂಗ್ರೆಸ್‌ ಮುಖಂಡರು ಬೆಳೆಯಲು ಅವಕಾಶವೇ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆತ್ಮಿಯರಂತೆ ಬಿಂಬಿಸಿ, ಕಾಂಗ್ರೆಸ್‌ ಗೆ ಬರುತ್ತೇನೆ ಎನ್ನುತ್ತಾ ಕೊನೆಗೆ ಈಗಿರುವ ಪಕ್ಷದಲ್ಲೇ ಚುನಾವಣೆಗೆ ನಿಲ್ಲುವ ನಾಟಕ ಆಡುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಅಭ್ಯರ್ಥಿ ತಯಾರು ಮಾಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪಕ್ಷದ ಅಧ್ಯಕ್ಷರು ತಿಳಿಸಬೇಕು ಎಂದರು.