ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಫೆಬ್ರವರಿ 20 ರಿಂದ 22 ರವರೆಗೆ ಮೂರು ದಿನಗಳ ಕಾಲ 33ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.ತೋಟಗಾರಿಕೆ ಕಚೇರಿ ಆವರಣದಲ್ಲಿ ಗುರುವಾರ ಸುದ್ದಿಗೋಷ್ಢಿಯಲ್ಲಿ ಮಾಹಿತಿ ನೀಡಿ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಹೊರಮಠ, ಒಳಮಠ ದೃಶ್ಯ ಹಾಗೂ ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿ, ಸಾಹಿತಿ ಬಿ.ಎಲ್. ವೇಣು, ಜಾನೂರ್ ಕಲಾಕೃತಿಗಳು, ಐತಿಹಾಸಿಕ ಕೋಟೆ, ಒಂಟಿಕಲ್ಲು ಬಸವಣ್ಣ ಹಾಗೂ ವೀರವನಿತೆ ಒನಕೆ ಓಬವ್ವರ ಮರಳು ಕಲೆ ಪ್ರದರ್ಶನ, ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ, ಸಾಲುಮರದ ತಿಮ್ಮಕ್ಕ ಕಲಾಕೃತಿಗಳು 33ನೇ ಫಲ-ಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷ ಆಕರ್ಷಣೆ ಆಗಲಿದೆ ಎಂದರು.
ಫಲ ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನೂ ಸಹ ಹಮ್ಮಿಕೊಳ್ಳಲಾಗುವುದು. ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಭೋದಿಸಿ ಹಿರೇಕೆರೆ, ಚಿಕ್ಕಕೆರೆ ಮೊದಲಾದ ಐದು ಕೆರೆಗಳನ್ನು ಕಟ್ಟಿಸಿ ರೈತರ ಪಾಲಿನ ಭಗೀರಥ ಎನ್ನಿಸಿಕೊಂಡರು. ಹಿಂದೂ-ಮುಸ್ಲಿಂ ಭಾವೈಕ್ಯತೆ ಶಕ್ತಿ ಕೇಂದ್ರವಾಗಿರುವ ಹೊರಮಠ, ಒಳಮಠದ ದೃಶ್ಯವನ್ನು ಹಾಗೂ ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿಗಳನ್ನು ಫಲ ಪುಷ್ಪ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ ಎಂದರು.ಕಥೆಗಾರರಾಗಿ ಮತ್ತು ಚಲನಚಿತ್ರ ಸಂಭಾಷಣೆಕಾರರಾಗಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿರುವ ಬಿ.ಎಲ್.ವೇಣು ಒಟ್ಟು 74 ಸಾಹಿತ್ಯ ಕೃತಿ ರಚಿಸಿದ್ದಾರೆ. ಇವರ 19 ಕಾದಂಬರಿಗಳು ಚಲನಚಿತ್ರಗಳಾಗಿವೆ. ಚಿತ್ರದುರ್ಗದವರೇ ಆದ ಡಾ.ಬಿ.ಎಲ್ ವೇಣುರವರಿಗೆ ಸಂಭ್ರಮದ ಗೌರವ ಸಮರ್ಪಣೆಯ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.
ಸಾಲುಮರದ ತಿಮ್ಮಕ್ಕ ಕರ್ನಾಟಕದ ಮಹಾನ್ ಪರಿಸರ ಪ್ರೇಮಿಯಾಗಿದ್ದು, ಅವರ ಅದಮ್ಯ ಪರಿಸರ ಪ್ರೇಮ ಮತ್ತು ಸೇವೆ ಸ್ಮರಿಸಲು ಕಲಾಕೃತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು. ಚಿತ್ರದುರ್ಗ ಕೋಟೆಯ ಆಕರ್ಷಣೆಗಳಲ್ಲಿ ಒಂದಾದ ಉಯ್ಯಾಲೆ ಕಂಬ, ಕ್ರಿಕೆಟ್ ಪ್ರಿಯರಿಗೆ ಮನರಂಜನೆಗೋಸ್ಕರ ಪ್ರಸ್ತುತ ನಡೆಯುತ್ತಿರುವ ಟಿ-20 ವರ್ಲ್ವ್ ಕಪ್‍ನಲ್ಲಿ ಆಡುತ್ತಿರುವ ಭಾರತ ತಂಡಕ್ಕೆ ಗೆಲುವು ಸಾಧಿಸಲು ಶುಭಾಶಯ ಕೋರುವ ಪರಿಕಲ್ಪನೆಯ ತಂಡದ ಸದಸ್ಯರ ಮುಖಗಳ ಕಲಾಕೃತಿಗಳನ್ನು ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು. ಸುಮಾರು 500ಕ್ಕೂ ಹೆಚ್ಚು ವಿವಿಧ ಜಾತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿದೆ ಎಂದರು.
ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ, ರಾಜ್ಯವಲಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ.ತೋಟಯ್ಯ, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಕಾರ್ಯದರ್ಶಿ ಗಿರೀಶ್, ಖಜಾಂಚಿ ನಾಗರಾಜ್ ಬೇದ್ರೆ, ಹಿರಿಯ ಸಲಹೆಗಾರ ಜಿ.ಎಸ್.ಉಜ್ಜೀನಪ್ಪ, ನಿರ್ದೇಶಕರಾದ ಸುಮನಾ ಅಂಗಡಿ, ಸತ್ಯನಾರಾಯಣ ನಾಯ್ಡು, ಶ್ವೇತಾ ವಿಶ್ವನಾಥ್, ರೀನಾ ವೀರಭದ್ರಪ್ಪ ಇದ್ದರು.
ಜಾನೂರು ಕಲೆ ಕಲಾಕೃತಿಗಳ ಪ್ರದರ್ಶನಜಾನೂರು ಕಲೆ ಇಂಡೊನೇಷ್ಯಾದಲ್ಲಿ ಜಾನೂರು ಕೂನಿಂಗ್ ಎಂದು ಪರಿಚಿತವಾಗಿರುತ್ತದೆ. ಜಾನೂರು ಎಂದರೆ ತೆಂಗಿನ ಗರಿ, ಕೂನಿಂಗ್ ಎಂದರೆ ಹಳದಿ ಇಂಡೊನೇಷ್ಯಾದ ಜಾವನೀಸ್ ಸಂಸ್ಕೃತಿ ಪದ. ಈ ಕಲೆಯು ತೆಂಗಿನ ಎಲೆಗಳನ್ನು ಬಳಸಿ ಮಾಡುವ ಸಾಂಪ್ರದಾಯಿಕ ಕಲೆಯಾಗಿದೆ. ವಿಶೇಷವಾಗಿ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಹಸಿರು ಮತ್ತು ಹಳದಿ ಎಲೆ ಬಣ್ಣಗಳನ್ನು ಬಳಸಿ ವಿಶಿಷ್ಟ ವಿನ್ಯಾಸಗಳನ್ನು ರೂಪಿಸಲಾಗುತ್ತದೆ. ಈ ಕಲೆಯನ್ನು ಪರಿಚಯಿಸುವ ವಿವಿಧ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ಆಕಾಶ್ ಹೇಳಿದರು.