ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಎಂ.ಮಹೇಶ್‌ ಕಳಲೆ ಅವರು ಕಿನ್ನರ ರೆಕ್ಕೆ- ಎಚ್ಚೆಸ್ವಿ ಮಕ್ಕಳ ಸಾಹಿತ್ಯ ವಿವೇಚನೆ ಎಂಬು ಕೃತಿಯನ್ನು ಹೊರತಂದಿದ್ದಾರೆ. ಇದು ಅವರ ಎಂ.ಫಿಲ್‌ ಸಂಶೋಧನಾ ಪ್ರಬಂಧದ ಸಂಕ್ಷಿಪ್ತ ರೂಪ.

ಆರಂಭದಲ್ಲಿ ಅವರು ಎಚ್ಚೆಸ್ವಿ ಅವರ ಬದುಕು- ಬರೆಹ- ಸಾಧನೆಯನ್ನು ದಾಖಲಿಸಿದ್ದಾರೆ. ಅದರಲ್ಲಿ ಬಾಲ್ಯ, ಶಿಕ್ಷಣ, ಕೃತಿಗಳು, ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಪ್ರಶಸ್ತಿ ಪುರಸ್ಕಾರಗಳ ವಿವರಗಳಿವೆ.

ನಂತರ ಅಳಿಲು ರಾಮಾಯಣ, ಹೂವಿ, ಕಂಸಾಯಣ, ಸುಣ್ಣದ ಸುತ್ತು, ಕುಣಿಕುಣಿ ನವಿಲೆ- ಈ ಮಕ್ಕಳ ನಾಟಕಗಳ ವಸ್ತು, ಪಾತ್ರಗಳು, ನಾಟಕದ ರಚನಾ ಶೈಲಿ, ತಂತ್ರ ಮತ್ತು ಆಶಯ ಕುರಿತು ವ್ಯಾಖ್ಯಾನಿಸಿದ್ದಾರೆ. ಮಕ್ಕಳ ಮನಸ್ಸು, ಭಾವನೆ, ಭಾಷೆ, ಅಭಿರುಚಿಗಳನ್ನು ಅರಿತು, ಅದಕ್ಕೆ ತಕ್ಕಂತೆ ಈ ನಾಟಕಗಳಿವೆ, ಇವು ಯಶಸ್ವಿ ರಂಗಪ್ರಯೋಗಳಾಗಿ, ಮಕ್ಕಳ ಮನಸೂರೆಗೊಂಡಿವೆ. ಅಷ್ಟರ ಮಟ್ಟಿಗೆ ಎಚ್ಚೆಸ್ವಿ ಅವರು ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ಮಕ್ಕಳ ನಾಟಕಗಳು ಮತ್ತು ಮಾನವೀಯ ಸಂಬಂಧಗಳ ಕುರಿತ ಲೇಖನದಲ್ಲಿ ಪ್ರಕೃತಿ, ಪ್ರಾಣಿ, ಸಮಾಜ, ಕರುಳಬಳ್ಳಿಯ , ಸಂಬಂಧಗಳನ್ನು ವಿಮರ್ಶಿಸಿದ್ದಾರೆ.


ಅಗ್ನಿಮುಖಿ, ಕದಿರನಕೋಟೆ, ಅಮಾನುಷರು- ಮಕ್ಕಳ ಕಥೆಗಳು, ದೇಶ- ಭಾಷೆ- ಪ್ರೇಮ ಹಾಗೂ ಭಾವೈಕ್ಯತೆ ಕವಿತೆಗಳು, ಸಾಮಾಜಿಕ ಕವಿತೆಗಳು, ನೀತಿ ಬೋಧಕ ಕವಿತೆಗಳು, ಪ್ರಕೃತಿ ಕವಿತೆಗಳು, ಸಂಕೀರ್ಣ ಕವಿತೆಗಳ ಅಧ್ಯಯನ ನಡೆಸಿದ್ದಾರೆ. ಕುತೂಹಲ, ಆಶ್ಚರ್ಯ, ವಿನೋದ, ಬೆರದು, ಭಯ, ಉತ್ಸಾಹ, ಮನರಂಜೆ, ಛಲ, ಹಟ, ಆವೇಶ, ಚಾಕಚಕ್ಯತೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ಡಾ.ಮಹೇಶ ಅವರು ಕೇವಲ ಎಚ್ಚೆಸ್ವಿ ಅವರಲ್ಲದೇ ಮಕ್ಕಳ ನಾಟಕ, ಕಥೆ, ಕವಿತೆ ಮೊದಲಾದ ಸಾಹಿತ್ಯ ರಚಿಸಿರುವ ಪಂಜೆ ಮಂಗೇಶರಾಯರು, ತೋನ್ಸೆ, ಹೊಯ್ಸಳ, ಶಿವರಾಮ ಕಾರಂತರು, ಡಿವಿಜಿ, ಕುವೆಂಪು, ಎ.ಎನ್‌. ಮೂರ್ತಿರಾಯರು, ಸಿದ್ದಯ್ಯ ಪುರಾಣಿಕ, ಕಾವ್ಯಾನಂದ, ಕರ್ಕಿ, ನಾ. ಕಸ್ತೂರಿ, ಎಂ. ಗೋಪಾಲಕೃಷ್ಣ ಅಡಿಗ, ನಾ.ಡಿಸೋಜ, ಎಲ್, ಗುಂಡಪ್ಪ, ಜಿ.ಪಿ. ರಾಜರತ್ನಂ, ಆನಂಂದ, ಡಿ.ವಿ. ಶೇಷಗಿರಿರಾಯರು, ದಿನಕರ ದೇಸಾಯಿ, ನಿರುಪಮಾ, ಬೆಳಗಲಿ, ರಾಮಕೃಷ್ಣ ಶಾಸ್ತ್ರಿ, ಪಂಡಿತ ಕವಲಿ, ಗೌರೀಶ, ದಾಮೋದರ ಬಾಳಿಗ, ಭಾರತೀಸುತ, ಶಂಕರ ಭಟ್ಟ, ಮೇವುಂಡಿ ಮಲ್ಲಾರಿ, ವಿಶ್ವಾಮಿತ್ರ, ಪಾಂಡುರಂಗರಾಯರು, ಜಯವಂತ ಕಾಡದೇವರ, ಚ. ವಾಸುದೇವಯ್ಯ, ವೆಂಕಟರಂಗೋಕಟ್ಟಿ, ಡೆಪ್ಯೂಟಿ ಚನ್ನಬಸಪ್ಪ, ಶಂಭುಲಿಂಗಪ್ಪ, ಶಿವರುದ್ರಪ್ಪ ಕುಲಕರ್ಣಿ, ಶ್ರೀನಿವಾಸರಾವ್‌, ಎಸ್.ಜಿ. ನರಸಿಂಹಚಾರ್ಯ, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ, ಬೊಳುವಾರು, ರಾಘವ, ಎಂ.ಎಸ್. ರಾಮರಾವ್‌, ಮತಿಘಟ್ಟ ಕೃಷ್ಣಮೂರ್ತಿ, ಕೃಷ್ಣಮೂರ್ತಿ ಬಿಳಿಗೆರೆ, ಗವಿಸಿದ್ದಯ್ಯ, ಈಶ್ವರ ಕಮ್ಮಾರ ಸಿಸು ಸಂಗಮೇಶ, ಪಳಕಳ ಸೀತಾರಾಮ ಭಟ್ಟ, ಕಂಚ್ಯಾಣಿ ಶರಣಪ್ಪ, ಶಂ.ಗು. ಬಿರಾದಾರ, ಎ.ಕೆ. ರಾಮೇಶ್ವರ, ವಾಸುದೇವ ವರ್ಣ- ಹೀಗೆ ಮಕ್ಕಳ ನಾಟಕ, ಕಥೆ, ಕವಿತೆಗಳಿಗೆ ಕೊಡುಗೆ ನೀಡಿರುವ ಎಲ್ಲಾ ಹಿರಿಯ- ಕಿರಿಯರ ಬಗ್ಗೆ ತೌಲನಿಕವಾಗಿ ವಿಮರ್ಶಿಸುತ್ತಾ, ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಮಕ್ಕಳ ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರಲ್ಲಾ ಓದಬಹುದಾದ ಕೃತಿ ಇದಾಗಿದೆ.

ಈ ಕೃತಿಯನ್ನು ವಿಭ ಪ್ರಕಾಶನ ಪ್ರಕಟಿಸಿದ್ದು, ಸಾಹಿತಿ ಡಾ.ಮಹೇಂದ್ರಮೂರ್ತಿ ದೇವನೂರು ಅವರ ಮುನ್ನುಡಿ, ವಿದ್ಯಾವಿಕಾಸ ಶಿಕ್ಷಣ ಮಹಾವಿದ್ಯಾಲಯ ಉಪ ಪ್ರಾಂಶುಪಾಲ ಡಾ.ಎಂ.ಎನ್. ದಿನೇಶ್‌ ಅವರ ಬೆನ್ನುಡಿ ಇದೆ. ಆಸಕ್ತರು ಡಾ.ಎಂ. ಮಹೇಶ, ಮೊ. 99025 85336 ಸಂಪರ್ಕಿಸಬಹುದು.