ಕಾಶ್ಮೀರ ವಿವಾದ ಇತ್ಯರ್ಥ ಪಡಿಸಿ : ಅಮೆರಿಕಕ್ಕೆ ಪಾಕ್‌ ಮೊರೆ

| N/A | Published : May 02 2025, 12:08 AM IST / Updated: May 02 2025, 04:36 AM IST

Pakistan Prime Minister Shehbaz Sharif

ಸಾರಾಂಶ

ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಭಾರತ ನಡೆಸಲು ಉದ್ದೇಶಿಸಿರುವ ದಾಳಿಗೆ ಪಾಕಿಸ್ತಾನ ಆಗಲೇ ಬೆಚ್ಚಿಬಿದ್ದಿದೆಯೇ?

ನವದೆಹಲಿ : ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಭಾರತ ನಡೆಸಲು ಉದ್ದೇಶಿಸಿರುವ ದಾಳಿಗೆ ಪಾಕಿಸ್ತಾನ ಆಗಲೇ ಬೆಚ್ಚಿಬಿದ್ದಿದೆಯೇ?.ಇಂಥದ್ದೊಂದು ಅನುಮಾನಕ್ಕೆ ಕಾರಣವಾಗುವ ಬೆಳವಣಿಗೆಯೊಂದು ನಡೆದಿದೆ. 

ಉಭಯ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ನಡುವೆಯೇ ‘ಕಾಶ್ಮೀರ ವಿವಾದ ಇತ್ಯರ್ಥಪಡಿಸಿ’ ಎಂದು ಅಮೆರಿಕದಲ್ಲಿರುವ ಪಾಕ್‌ ರಾಯಭಾರಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬಳಿ ಮೊರೆ ಇಟ್ಟಿದ್ದಾರೆ. ಇಲ್ಲದೇ ಹೋದಲ್ಲಿ ಪರಮಾಣು ದಾಳಿ ನಡೆಯುವ ಸಾಧ್ಯತೆಯೂ ಇದೆ ಎಂದು ಹೇಳಿಕೊಂಡಿದ್ದಾರೆ.

ಇದು ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಧ್ಯಪ್ರವೇಶದ ಮೂಲಕ ಯುದ್ಧವನ್ನು ತಡೆಯಲು ಪಾಕಿಸ್ತಾನ ನಡೆಸಿದ ದಯನೀಯ ಯತ್ನ ಎಂದೇ ಬಣ್ಣಿಸಲಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರಾಯಭಾರಿ ರಿಜ್ವಾನ್ ಸಯೀದ್ ಶೇಖ್, ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಕೇಂದ್ರಬಿಂದು ಕಾಶ್ಮೀರ ಸಮಸ್ಯೆ. ಉಳಿದವೆಲ್ಲ ಸಣ್ಣಪುಟ್ಟ ತೊಂದರೆಗಳು. ನಮಗೆ ದೊಡ್ಡ ದೇಶಗಳೊಂದಿಗೆ ಯುದ್ಧ ಬೇಕಿಲ್ಲ. ನಮಗೆ ಬೇಕಿರುವುದು ಶಾಂತಿ. ಅದು ನಮ್ಮ ರಾಷ್ಟ್ರೀಯತೆ ಮತ್ತು ಉದ್ದೇಶಕ್ಕೆ ಸೂಕ್ತ. ಇದಕ್ಕಾಗಿ ಅಮೆರಿಕದಂತಹ ರಾಷ್ಟ್ರಗಳು ಮಧ್ಯಪ್ರವೇಶಿಸಬೇಕು. ಯುರೋಪ್‌ ದೇಶಗಳ ಬಿಕ್ಕಟ್ಟು ಇತ್ಯರ್ಥಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಯತ್ನಿಸಿದಂತೆ ಈ ವಿಷಯ ಇತ್ಯರ್ಥಕ್ಕೂ ಮುಂದಾಗಬೇಕು’ ಎಂದು ಕೇಳಿಕೊಂಡಿದ್ದಾರೆ, ಇದೇ ವೇಳೆ, ಉಭಯ ದೇಶಗಳ ನಡುವಿನ ಪರಿಸ್ಥಿತಿ ತಿಳಿಯಾಗದಿದ್ದಲ್ಲಿ ಪರಮಾಣು ದಾಳಿ ನಡೆಯುವ ಸಾಧ್ಯತೆಯೂ ಇರುವ ಬಗ್ಗೆ ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಜೊತೆಗೆ ನಾವು ಆ ವಲಯದಲ್ಲಿನ ಕೇವಲ ಎರಡು ಪರಮಾಣು ಶಕ್ತಿ ದೇಶಗಳ ಬಗ್ಗೆ ಮಾತನಾಡುತ್ತಿಲ್ಲ. ಅಲ್ಲಿ ಇನ್ನೂ ಹಲವು ಇಂಥ ದೇಶಗಳಿವೆ ಎನ್ನುವ ಮೂಲಕ ಅಗತ್ಯಬಿದ್ದಲ್ಲಿ ಚೀನಾ ತನ್ನ ನೆರವಿಗೆ ಬರಲಿದೆ ಎಂಬ ಪರೋಕ್ಷ ಸುಳಿವನ್ನೂ ರಿಜ್ವಾನ್‌ ನೀಡಿದ್ದಾರೆ ಎನ್ನಲಾಗಿದೆ.

ಸತತ 7ನೇ ದಿನವೂ ಪಾಕ್‌ ಕದನ ವಿರಾಮ ಉಲ್ಲಂಘನೆ

ಜಮ್ಮು: ಭಾರತ ಮತ್ತು ಪಾಕಿಸ್ತಾನ ಡಿಜಿಎಂಒಗಳು ಮಾತುಕತೆಯಲ್ಲಿ ಭಾರತ ಎಚ್ಚರಿಕೆಯನ್ನು ನೀಡಿದ್ದರೂ ಕೂಡ , ಪಾಕಿಸ್ತಾನ ಮತ್ತೆ ಕ್ಯಾತೆ ತೆಗೆದಿದ್ದು, ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಸತತ ಏಳನೇ ದಿನವೂ ಕದನ ವಿರಾಮ ಉಲ್ಲಂಘಿಸಿದೆ. ಜಮ್ಮು ಕಾಶ್ಮೀರದ ಮೂರು ಗಡಿ ಜಿಲ್ಲೆಗಳಾದ್ಯಂತ ಹಲವಾರು ವಲಯಗಳಲ್ಲಿ ಪಾಕಿಸ್ತಾನಿ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳಿಂದ ಅಪ್ರಚೋದಿತ ಗುಂಂಡಿನ ಚಕಮಕಿ ನಡೆಸಿವೆ. ಪ್ರಮುಖವಾಗಿ ಕುಪ್ವಾರಾ, ಉರಿ ಮತ್ತು ಅಖ್ನೂರ್‌ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘನೆಯಾಗಿದ್ದು, ಇದಕ್ಕೆ ಭಾರತದ ಸೇನೆ ತ್ವರಿತವಾಗಿ ತಿರುಗೇಟು ನೀಡಿದೆ.

ಭಾರತದ ಸೇನಾ ದುಸ್ಸಾಹಸಕ್ಕೆ ದಿಟ್ಟ ಉತ್ತರ: ಪಾಕ್ ಸೇನಾ ಮುಖ್ಯಸ್ಥ

ಇಸ್ಲಾಮಬಾದ್‌: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭೀತಿ ಹೆಚ್ಚುತ್ತಿರುವ ನಡುವೆಯೇ ‘ಭಾರತದ ಮಿಲಿಟರಿ ಪಡೆಗಳ ದುಸ್ಸಾಹಸಕ್ಕೆ ಪಾಕಿಸ್ತಾನವು ತ್ವರಿತ, ದೃಢ ಮತ್ತು ತೀಕ್ಷ್ಣವಾದ ಪ್ರತಿಕ್ರಿಯ ನೀಡಲಿದೆ’ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ ಹೇಳಿದ್ದಾರೆ. ಸಶಸ್ತ್ರ ಪಡೆಗಳ ತರಬೇತಿ ರೇಂಜ್‌ಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ‘ಯಾವುದೇ ಅಸ್ಪಷ್ಟತೆ ಬೇಡ. ಭಾರತದ ಸೇನೆಯು ಯಾವುದೇ ದುಸ್ಸಾಹಸವನ್ನು ಮಾಡಿದರೂ ತ್ವರಿತ, ದೃಢ ಮತ್ತು ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನಾವು ನೀಡಲಿದ್ದೇವೆ. ಪಾಕಿಸ್ತಾನ ಪ್ರಾದೇಶಿಕ ಶಾಂತಿಗೆ ಬದ್ಧವಾಗಿದ್ದರೂ , ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ನಮ್ಮ ಸಂಕಲ್ಪ ಸಂಪೂರ್ಣವಾಗಿದೆ’ ಎಂದರು.

ಪಹಲ್ಗಾಂ ದಾಳಿ ವಿರುದ್ಧ ಹೋರಾಟಕ್ಕೆ ಅಮೆರಿಕ ಬೆಂಬಲ: ಸಚಿವ ಹೆಗ್ಸೆತ್‌

ನವದೆಹಲಿ: ಪಹಲ್ಗಾಂ ದಾಳಿಯ ವಿರುದ್ಧ ಹೋರಾಟದಲ್ಲಿ ಅಮೆರಿಕ ಭಾರತದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ಬೆಂಬಲ ಸೂಚಿಸಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಗುರುವಾರ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೊಂದಿಗೆ ಅಮೆರಿಕ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ದೂರವಾಣಿ ಮಾತುಕತೆ ನಡೆಸಿದರು. ಈ ವೇಳೆ ಸಚಿವ ರಾಜನಾಥ್‌ ಸಿಂಗ್‌ ಅವರು, ಪಾಕಿಸ್ತಾನ ಉಗ್ರವಾದವನ್ನು ಹೇಗೆ ಪೋಷಿಸುತ್ತಿದೆ ಎಂಬುದನ್ನು ವಿವರಿಸಿದರು. ಜೊತೆಗೆ ಜಗತ್ತು ಪಾಕಿಸ್ತಾನದ ಭಯೋತ್ಪಾದನೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಚಿವ ಹೆಗ್ಸೆತ್‌ ಅವರು, ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲು ಅಮೆರಿಕ ಬೆಂಬಲ ಇರಲಿದೆ ಎಂದು ಘೋಷಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಭಾರತ - ಪಾಕ್‌ ಯುದ್ಧಕ್ಕೆ ಸಿದ್ಧಗೊಳ್ಳುತ್ತಿವೆ: ಮಾಜಿ ಸಿಎಂ ಫಾರೂಖ್‌ ಅಬ್ದುಲ್ಲಾ

ಶ್ರೀನಗರ: ಪಹಲ್ಗಾಂ ನರಮೇಧ ಘಟನೆ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಸಿದ್ಧಗೊಳ್ಳುತ್ತಿವೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಖ್‌ ಅಬ್ದುಲ್ಲಾ ಹೇಳಿದ್ದಾರೆ. ಗುರುವಾರ ಮಾತನಾಡಿದ ಅವರು, ನಾಳೆಯ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಇಂದು ಎರಡೂ ಕಡೆಯವರು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಯುದ್ಧ ನಡೆಯದಂತೆ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಉಗ್ರರು ಮತ್ತು ಅವರ ಹಿಂದಿನ ಶಕ್ತಿಗಳನ್ನು ಸೆರೆ ಹಿಡಿಯಲು ಬೇರೆ ಮಾರ್ಗಗಳನ್ನು ಅರಸಬಹುದು’ ಎಂದು ಹೇಳಿದರು.