ಸಾರಾಂಶ
ಜಲ್ನಾ: ಪಹಲ್ಗಾಂ ದಾಳಿಯ ಒಂದು ದಿನ ಮೊದಲು ಶಂಕಿತ ಉಗ್ರನೊಬ್ಬ ತನ್ನೊಂದಿಗೆ ಮಾತಾಡಿದ್ದ ಎಂದು ಕಾಶ್ಮೀರದಿಂದ ಹಿಂದಿರುಗಿದ ಮಹಾರಾಷ್ಟ್ರದ ಜಲ್ನಾ ನಗರದ ಆದರ್ಶ್ ರಾವತ್ ಹೇಳಿದ್ದಾರೆ.
‘ಏ.21ರಂದು ಪಹಲ್ಗಾಂನಲ್ಲಿ ಕುದುರೆ ಸವಾರಿಗೆ ಹೋಗಿದ್ದ ವೇಳೆ ರಸ್ತೆ ಬದಿ ಆಹಾರ ಮಳಿಗೆ ಬಳಿ ನಿಂತಿದ್ದೆವು. ಆಗ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ನೀವು ಹಿಂದೂಗಳೇ? ನೀವು ಕಾಶ್ಮೀರದವರಂತೆ ಕಾಣುತ್ತಿಲ್ಲ ಎಂದು ಕೇಳಿದ್ದ. ನಂತರ ಆತ ತನ್ನ ಸಹಚರನ ಕಡೆಗೆ ತಿರುಗಿ, ಇಂದು ಜನಸಂದಣಿ ಕಡಿಮೆಯಾಗಿದೆ ಎಂದು ಹೇಳಿದ್ದ. ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿರುವ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳಲ್ಲಿ, ಒಬ್ಬ ತನ್ನೊಂದಿಗೆ ಮಾತನಾಡಿದ ವ್ಯಕ್ತಿಗೆ ಹೊಂದಿಕೆಯಾಗುತ್ತಾನೆ’ ಎಂದು ಆದರ್ಶ್ ರಾವತ್ ಹೇಳಿದ್ದಾರೆ.
‘ಕಾಶ್ಮೀರದಲ್ಲಿ ನನ್ನ ಅನುಭವದ ವಿವರಗಳನ್ನು ಎನ್‌ಐಎಗೆ ಇಮೇಲ್ ಮಾಡಿದ್ದೇನೆ. ಆದರೆ ನನ್ನ ಇಮೇಲ್‌ಗೆ ಎನ್‌ಐಎಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ನನ್ನನ್ನು ಸಂಪರ್ಕಿಸಿದರೆ ನಾನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅವರೊಂದಿಗೆ ಸಹಕರಿಸುತ್ತೇನೆ’ ಎಂದಿದ್ದಾರೆ.