ಸರ್ಕಾರಿ ಇಲಾಖೆಗಳು ಬಳಸದಂತೆ ಆದೇಶ
ಸೇನೆಗೆ ಎಐ ಮುಕ್ತ ಬಳಕೆಗೆ ಆ್ಯಂಥ್ರೋಪಿಕ್ ನಕಾರಆದ್ದರಿಂದ ಕೋಪಗೊಂಡ ಟ್ರಂಪ್ ಮಹತ್ವದ ನಿರ್ಧಾರ
ವೆನಿಜುವೆಲಾ ದಾಳಿಗೆ ಸಹಕರಿಸಿದ್ದ ಕಂಪನಿ ವಿರುದ್ಧವೇ ಸಮರವಾಷಿಂಗ್ಟನ್: ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುುವ ಕೃತಕ ಬುದ್ಧಿಮತ್ತೆ (ಎಐ) ಸಂಸ್ಥೆ ಆ್ಯಂಥ್ರೋಪಿಕ್ ಟೆಕ್ನಾಲಜಿ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗರಂ ಆಗಿದ್ದಾರೆ. ಸಂಸ್ಥೆಯ ಎಐ ತಂತ್ರಜ್ಞಾನವನ್ನು ಸೇನೆಗೆ ಮುಕ್ತವಾಗಿ ಬಳಸಲು ಅವಕಾಶ ನೀಡದ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ಅಮೆರಿಕದ ರಕ್ಷಣಾ ಸಂಸ್ಥೆಗಳು ಆ್ಯಂಥ್ರೋಪಿಕ್ ಟೆಕ್ನಾಲಜಿ ಬಳಸದಂತೆ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ವೆನಿಜುವೆಲಾ ಮೇಲಿನ ದಾಳಿಗೆ ಅಮೆರಿಕ ಆ್ಯಂಥ್ರೋಪಿಕ್ ಎಐ ತಂತ್ರಜ್ಞಾನ ಬಳಸಿತ್ತು. ಇದೀಗ ಆ ಕಂಪನಿ ವಿರುದ್ಧವೇ ಟ್ರಂಪ್ ಸಮರ ಸಾರಿದ್ದು ಗಮನಾರ್ಹ.
‘ಆ್ಯಂಥ್ರೋಪಿಕ್‌ನ ಎಐ ತಂತ್ರಜ್ಞಾನವನ್ನು ಅಮೆರಿಕದ ಮಿಲಿಟರಿ ಉದ್ದೇಶಕ್ಕೆ ಅನಿಯಂತ್ರಿತವಾಗಿ ಬಳಕೆಗೆ ಅವಕಾಶ ನೀಡಬೇಕು. ಇಲ್ಲವೇ ಪರಿಣಾಮ ಎದುರಿಸಲು ಸಿದ್ಧವಾಗಬೇಕು’ ಎಂದು ಅಮೆರಿಕದ ರಕ್ಷಣಾ ಸಚಿವಾಲಯ 24 ಗಂಟೆಗಳ ಗಡುವು ನೀಡಿತ್ತು. ರಕ್ಷಣಾ ಸಚಿವಾಲಯದ ಬೇಡಿಕೆಯನ್ನು ಆ್ಯಂಥ್ರೋಪಿಕ್ ಸಂಸ್ಥೆ ಸಿಇಒ ಅಮೋಡೈ ತಿರಸ್ಕರಿಸಿ, ‘ನೈತಿಕವಾಗಿ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ’ ಎಂದಿದ್ದರು. ಈ ಗಡುವು ಮುಗಿದ ಬೆನ್ನಲ್ಲೇ ಟ್ರಂಪ್ ಸರ್ಕಾರ ನಿರ್ಬಂಧ ಆದೇಶ ಹೊರಡಿಸಿದೆ.
ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಟ್ರಂಪ್, ‘ಆ್ಯಂಥ್ರೋಪಿಕ್ ಎಡಪಂಥೀಯರ ಆಡೊಂಬಲವಾಗಿದೆ. ನಾವು ಇಂಥ ಕಂಪನಿ ಜತೆ ವ್ಯವಹಾರ ಮಾಡಲು ಬಯಸಲ್ಲ. ಎಲ್ಲ ಫೆಡರಲ್ ಏಜೆನ್ಸಿಗಳು ತಕ್ಷಣ ಈ ಕಂಪನಿಯ ಎಐ ಬಳಕೆ ನಿಲ್ಲಿಸಬೇಕು, ಮಿಲಿಟರಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಬಳಸಿರುವ ಸಂಸ್ಥೆಯ ತಂತ್ರಜ್ಞಾನಗಳನ್ನು 6 ತಿಂಗಳಲ್ಲಿ ತೆಗೆದುಹಾಕಬೇಕು’ ಎಂದು ಸೂಚಿಸಿದ್ದಾರೆ.ಓಪನ್ ಎಐ ಒಪ್ಪಂದ:
ಈ ನಡುವೆ, ಆ್ಯಂಥ್ರೋಪಿಕ್ ಕಂಪನಿಯು ತನ್ನ ತಂತ್ರಜ್ಞಾನದ ಮುಕ್ತ ಬಳಕೆಗೆ ಅಮೆರಿಕ ಸರ್ಕಾರಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ಯಾಮ್ ಆಲ್ಟ್‌ಮನ್ ಅವರ ‘ಓಪನ್ ಎಐ’ ಅಮೆರಿಕ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಘೋಷಿಸಿದೆ.