ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ಆಡಳಿತ ಕ್ಷೇತ್ರಗಳಲ್ಲಿ ಅತ್ಯಾಧುನಿಕವಾದ ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಅಳವಡಿಸಲು ವಿವಿಧ ಓಪನ್‌ಎಐ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು, ಜಾಗತಿಕ ಉದ್ಯೋಗ ಮಾರುಕಟ್ಟೆಯ ಇಂದಿನ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನು ಎಐ ಕೌಶಲದೊಂದಿಗೆ ಸಜ್ಜುಗೊಳಿಸಲು ಹಾಗೂ ಎಐ ತಂತ್ರಜ್ಞಾನದ ನೈತಿಕ ಬಳಕೆಯನ್ನು ಉತ್ತೇಜಿಸಲು ಮಾಹೆ ತನ್ನ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಎಐ ಚಾಲಿತ ಪರಿಕರಗಳನ್ನು ಅಳವಡಿಸಲಿದೆ. ಇದಲ್ಲದೆ, ಪಠ್ಯಕ್ರಮ ವಿನ್ಯಾಸ, ಸಂಶೋಧನೆ ಮತ್ತು ನಾವೀನ್ಯತೆಗಾಗಿ ಅಧ್ಯಾಪಕರಿಗೂ ಸಹ ಅತ್ಯಾಧುನಿಕ ಎಐ ಸಾಧನಗಳ ಸೌಲಭ್ಯ ದೊರೆಯಲಿದೆ.

ಈ ಸಂದರ್ಭದಲ್ಲಿ ಮಾಹೆ ಕುಲಪತಿ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್, ಬೋಧನೆ, ಸಂಶೋಧನೆ ಮತ್ತು ಆಡಳಿತದಲ್ಲಿ ಎಐ ತಂತ್ರಜ್ಞಾನವನ್ನು ಒಂದು ಪರಿವರ್ತಕ ಶಕ್ತಿಯನ್ನಾಗಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಓಪನ್‌ಎಐ ಜೊತೆಗಿನ ನಮ್ಮ ಈ ಸಹಭಾಗಿತ್ವವು ಒಂದು ಮಹತ್ವದ ಹೆಜ್ಜೆಯಾಗಿದೆ. ಜವಾಬ್ದಾರಿಯುತವಾಗಿ ಎಐ ಸಾಧನಗಳನ್ನು ಬಳಸುವ ಮೂಲಕ ಕಲಿಕೆಯನ್ನು ಉತ್ತಮಪಡಿಸುವುದು, ಸಂಶೋಧನೆಯ ವೇಗ ಹೆಚ್ಚಿಸುವುದು ಮತ್ತು ಎಐ ಚಾಲಿತ ಜಗತ್ತಿನಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿ ರೂಪಿಸುವುದು ನಮ್ಮ ಆಶಯವಾಗಿದೆ. ಅಲ್ಲದೇ ಎಐ ಅನ್ನು ಜವಾಬ್ದಾರಿಯುತವಾಗಿ, ನೈತಿಕವಾಗಿ ಮತ್ತು ಪಾರದರ್ಶಕವಾಗಿ ಬಳಸಲು ಮಾಹೆ ಸುಸಜ್ಜಿತ ಎಐ ಆಡಳಿತ ಮಾರ್ಗಸೂಚಿಗಳನ್ನು ಜಾರಿಗೆ ತರಲಿದೆ ಎಂದು ಹೇಳಿದರು.