ಪ್ರಮೋದ ಗಡಕರ
ಕನ್ನಡಪ್ರಭ ವಾರ್ತೆ ಬೆಳಗಾವಿಜೂನ್ ತಿಂಗಳಲ್ಲಿ ಶೇ.29ರಷ್ಟು ಮಳೆ ಕೊರತೆಯಿಂದ ಆತಂಕದಲ್ಲಿದ್ದ ಬೆಳಗಾವಿ ಜಿಲ್ಲೆಗೆ ಜುಲೈ ತಿಂಗಳಲ್ಲಿ ವರುಣ ಕೃಪೆ ತೋರಿದ್ದಾನೆ. ವಾಡಿಕೆಗಿಂತ ಶೇ.12ರಷ್ಟು ಅಧಿಕ ಮಳೆ ಸುರಿದ ಪರಿಣಾಮ ಜಿಲ್ಲೆಯ ಸಪ್ತನದಿಗಳು, ಪ್ರಮುಖ ಜಲಾಶಯಗಳು ಹಾಗೂ ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಮಳೆ ಕೊರತೆಯ ನಡುವೆ ಬಿತ್ತನೆ ಮಾಡಿದ್ದ ರೈತರ ಬೆಳೆಗಳಿಗೆ ಹೊಸ ಜೀವ ಬಂದಿದೆ.ಈ ಬಾರಿ ಸೂಪರ್ ಎಲ್ ನಿನೋ ಪರಿಣಾಮ ಮಳೆ ಆಗುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಲಿದೆ. ಕುಡಿಯುವ ನೀರಿಗೂ ತೀವ್ರ ಸಂಕಷ್ಟ ಉಂಟಾಗಲಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ಕೂಡ ನೀಡಿದ್ದರು. ಅದರಂತೆ ಮುಂಗಾರು ತಡವಾಗಿ ಪ್ರವೇಶಿಸಿದ್ದರಿಂದ ಜೂನ್‌ನಲ್ಲಿ ಜಿಲ್ಲೆಯ ನದಿಗಳು, ಜಲಾಶಯಗಳು ನೀರಿಲ್ಲದೆ ಒಣಗಿದ್ದವು. ಜೂನ್‌ನಲ್ಲಿ ವಾಡಿಕೆಯಂತೆ 146 ಮಿ.ಮೀ ಮಳೆ ಆಗಬೇಕಿತ್ತು. ಆಗಿದ್ದು ಕೇವಲ 104 ಮಿ.ಮೀ ಮಳೆ. ಶೇ.29ರಷ್ಟು ಕೊರತೆ ದಾಖಲಾಗಿತ್ತು. ಆದರೆ, ಜುಲೈನಲ್ಲಿ ಮಳೆ ಚುರುಕಾಗಿ ವಾಡಿಕೆಯ 191 ಮಿ.ಮೀ ಗೆ ಬದಲಾಗಿ 213 ಮಿ.ಮೀ ಮಳೆ ಸುರಿದಿದೆ. ಇದರಿಂದ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳಿಗೆ ವೇಗ ಸಿಕ್ಕಿದ್ದು, ರೈತರಲ್ಲಿ ಆಶಾಭಾವನೆ ಮೂಡಿದೆ.ಆದಾಗ್ಯೂ ಜೂನ್ 1ರಿಂದ ಆ.1ರವರೆಗಿನ ಮುಂಗಾರು ಅವಧಿಯನ್ನು ಪರಿಗಣಿಸಿದರೆ ಜಿಲ್ಲೆಯಲ್ಲಿ ಇನ್ನೂ ಶೇ.5ರಷ್ಟು ಮಳೆ ಕೊರತೆ ಇದೆ. ಈ ಅವಧಿಯಲ್ಲಿ ವಾಡಿಕೆಯಂತೆ 343 ಮಿ.ಮೀ ಮಳೆ ಆಗಬೇಕಿದ್ದರೆ 325 ಮಿ.ಮೀ ಮಳೆಯಾಗಿದೆ. ಆದರೆ, ಜನವರಿ 1ರಿಂದ ಆಗಸ್ಟ್ 1ರವರೆಗಿನ ಒಟ್ಟು ಮಳೆ ಪ್ರಮಾಣವನ್ನು ಗಮನಿಸಿದರೆ ವಾಡಿಕೆಯ 438 ಮಿ.ಮೀ ಮಳೆಯಷ್ಟೇ ಈ ವರ್ಷವೂ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ವಾಡಿಕೆಯ 5.8 ಮಿಮೀಗೆ ಹೋಲಿಸಿದರೆ 7.6 ಮಿ.ಮೀ. ಮಳೆ ಸುರಿದಿದೆ.5 ತಾಲೂಕುಗಳಲ್ಲಿ ಇನ್ನೂ ಮಳೆ ಕೊರತೆ:
ಜುಲೈ ತಿಂಗಳಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ವಾಡಿಕೆಯಷ್ಟು ಮಳೆ ದಾಖಲಾಗಿಲ್ಲ. ಬೆಳಗಾವಿ (ಶೇ.14 ಕೊರತೆ), ಬೈಲಹೊಂಗಲ (ಶೇ.29 ಕೊರತೆ), ಕಿತ್ತೂರು (ಶೇ.28 ಕೊರತೆ), ಸವದತ್ತಿ (ಶೇ.12 ಕೊರತೆ) ಹಾಗೂ ಮೂಡಲಗಿ (ಶೇ.5 ಕೊರತೆ) ತಾಲೂಕುಗಳಲ್ಲಿ ಮಳೆ ಕೊರತೆ ಮುಂದುವರಿದಿದೆ. ಇದಕ್ಕೆ ವಿರುದ್ಧವಾಗಿ ಅಥಣಿ (ಶೇ.68 ಅಧಿಕ), ಹುಕ್ಕೇರಿ (ಶೇ.65 ಅಧಿಕ) ಹಾಗೂ ಕಾಗವಾಡ (ಶೇ.64 ಅಧಿಕ) ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ನಿಪ್ಪಾಣಿ, ಚಿಕ್ಕೋಡಿ, ಗೋಕಾಕ, ರಾಯಬಾಗ, ಖಾನಾಪುರ ಸೇರಿದಂತೆ ಉಳಿದ ತಾಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ.ಬೆಳಗಾವಿ, ಬೈಲಹೊಂಗಲ, ಕಿತ್ತೂರು, ಸವದತ್ತಿ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಜುಲೈ ತಿಂಗಳಲ್ಲೂ ವಾಡಿಕೆಯಷ್ಟು ಮಳೆ ದಾಖಲಾಗಿಲ್ಲ. ಮತ್ತೊಂದೆಡೆ ಅಥಣಿ, ಹುಕ್ಕೇರಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ಶೇ.60ಕ್ಕೂ ಅಧಿಕ ಮಳೆಯಾಗಿದ್ದು, ಉತ್ತಮ ಮುಂಗಾರು ದಾಖಲಾಗಿದೆ. ಉಳಿದ ತಾಲೂಕುಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಕೃಷಿ ಹಾಗೂ ಕುಡಿಯುವ ನೀರಿನ ದೃಷ್ಟಿಯಿಂದ ಆಗಸ್ಟ್ ತಿಂಗಳಲ್ಲೂ ಉತ್ತಮ ಮಳೆಯಾಗಬೇಕಿದೆ ಎಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿ ಇದೆ.ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಳ:ಉತ್ತಮ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲೂ ನೀರಿನ ಸಂಗ್ರಹ ಹೆಚ್ಚಳವಾಗಿದೆ. 51 ಟಿಎಂಸಿ ಸಾಮರ್ಥ್ಯದ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಆ.4ಕ್ಕೆ 36.404 ಟಿಎಂಸಿ ನೀರು ಸಂಗ್ರಹವಾಗಿತ್ತು. 20782 ಕ್ಯೂಸೆಕ್ ಒಳಹರಿವು ಹಾಗೂ 1765 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.37.73 ಟಿಎಂಸಿ ಸಾಮರ್ಥ್ಯದ ಮುನವಳ್ಳಿಯ ನವಿಲುತೀರ್ಥ ಜಲಾಶಯದಲ್ಲಿ 17.78 ಟಿಎಂಸಿ ನೀರು ಸಂಗ್ರಹವಾಗಿದೆ. 11703 ಕ್ಯೂಸೆಕ್ ಒಳಹರಿವು ಮತ್ತು 1,194 ಕ್ಯೂಸೆಕ್ ಹೊರಹರಿವು ಇದೆ.ಜುಲೈ ತಿಂಗಳ ತಾಲ್ಲೂಕುವಾರು ಮಳೆ ಪ್ರಮಾಣ:ಯಾವ ತಾಲ್ಲೂಕಿನಲ್ಲಿ ಎಷ್ಟುಮಳೆ...?
ಖಾನಾಪುರ, 727 ಮಿ.ಮೀ., 762ಮಿ.ಮೀ., ಶೇ.5ರಷ್ಟು ಅಧಿಕ
ಬೆಳಗಾವಿ, 420ಮಿ.ಮೀ., 359ಮಿ.ಮೀ., ಶೇ.14ರಷ್ಟು ಕೊರತೆಅಥಣಿ, 54ಮಿ.ಮೀ., 91ಮಿ.ಮೀ., ಶೇ68ರಷ್ಟು ಅಧಿಕ
ಹುಕ್ಕೇರಿ, 118ಮಿ.ಮೀ., 195ಮಿ.ಮೀ., ಶೇ.65ರಷ್ಟು ಅಧಿಕಕಾಗವಾಡ, 69ಮಿ.ಮೀ., 112ಮಿ.ಮೀ., ಶೇ.64ರಷ್ಟು ಅಧಿಕ
ರಾಯಬಾಗ, 67ಮಿ.ಮೀ., 96ಮಿ.ಮೀ., ಶೇ.43ರಷ್ಟು ಅಧಿಕನಿಪ್ಪಾಣಿ, 202ಮಿ.ಮೀ., 271ಮಿ.ಮೀ., ಶೇ.34ರಷ್ಟು ಅಧಿಕ
ಮೂಡಲಗಿ, 67ಮಿ.ಮೀ., 64ಮಿ.ಮೀ., ಶೇ.5ರಷ್ಟು ಕೊರತೆಯರಗಟ್ಟಿ, 58ಮಿ.ಮೀ., 59ಮಿ.ಮೀ., ಶೇ.2ರಷ್ಟು ಅಧಿಕ
ಬೈಲಹೊಂಗಲ, 180ಮಿ.ಮೀ., 128ಮಿ.ಮೀ., ಶೇ.29ರಷ್ಟು ಕೊರತೆಚಿಕ್ಕೋಡಿ, 126ಮಿ.ಮೀ., 162ಮಿ.ಮೀ., ಶೇ.28ರಷ್ಟು ಅಧಿಕ
ಗೋಕಾಕ್, 63ಎಂಎಂ, 81ಎಂಎಂ, ಶೇ.29ರಷ್ಟು ಅಧಿಕರಾಮದುರ್ಗ, 58ಮಿ.ಮೀ., 60ಮಿ.ಮೀ., ಶೇ.3ರಷ್ಟು ಅಧಿಕ
ಸವದತ್ತಿ, 67ಮಿ.ಮೀ., 58ಮಿ.ಮೀ., ಶೇ.12ರಷ್ಟು ಕೊರತೆಕಿತ್ತೂರು, 270ಮಿ.ಮೀ., 196ಮಿ.ಮೀ., ಶೇ.28ರಷ್ಟು ಕೊರತೆಜೂನ್ ತಿಂಗಳ ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿತ್ತು. ಆದರೆ, ಜುಲೈನಲ್ಲಿ ಉತ್ತಮ ಮಳೆಯಾದ ಪರಿಣಾಮ ಸೋಯಾಬಿನ್, ಹೆಸರು, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಸ್ಥಿತಿ ಸುಧಾರಿಸಿದೆ. ಕೆಲವೆಡೆ ಕೀಟಬಾಧೆ ಕಂಡುಬಂದಿದ್ದು, ಔಷಧ ಸಿಂಪಡಣೆ ಕುರಿತು ರೈತರಿಗೆ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲೂ ಉತ್ತಮ ಮಳೆಯ ನಿರೀಕ್ಷೆಯಿದೆ.
- ಡಾ.ಎಚ್.ಡಿ.ಕೋಳೆಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು.