ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸರ್ಕಾರಿ ಸೇವೆಗಳನ್ನು ಜನಸ್ನೇಹಿಯಾಗಿ, ಪಾರದರ್ಶಕವಾಗಿ ಹಾಗೂ ಸಮಯೋಚಿತವಾಗಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ಜಾರಿಗೆ ತಂದಿರುವ ಕರ್ತವ್ಯ ಮೊಬೈಲ್ ಆ್ಯಪ್ ಬಳಕೆಯಿಂದ ಹುಕ್ಕೇರಿ ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ದೈನಂದಿನ ಕಾರ್ಯಚಟುವಟಿಕೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕ ಸೇವೆಗಳ ಮೇಲ್ವಿಚಾರಣೆಯನ್ನೂ ಈ ಯೋಜನೆ ಬಲಪಡಿಸಿದೆ. ಪರಿಣಾಮವಾಗಿ ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಸೇವಾ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುತ್ತಿದೆ.ಈ ಆ್ಯಪ್ ಮೂಲಕ ಸರ್ಕಾರಿ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆಯ ವಿವರಗಳನ್ನು, ಕ್ಷೇತ್ರ ಭೇಟಿ, ಸಾರ್ವಜನಿಕ ಸಮಸ್ಯೆಗಳ ಪರಿಶೀಲನೆ, ಯೋಜನೆಗಳ ಅನುಷ್ಠಾನ, ಸಭೆಗಳ ಮಾಹಿತಿ ಹಾಗೂ ಇತರೆ ಅಧಿಕೃತ ಕಾರ್ಯಗಳ ದಾಖಲೆಗಳನ್ನು ನೈಜ ಸಮಯದಲ್ಲೇ ಅಪಲೋಡ್ ಮಾಡಬಹುದು. ಇದರಿಂದ ಅಧಿಕಾರಿಗಳ ಕಾರ್ಯನಿರ್ವಹಣೆ ಪಾರದರ್ಶಕವಾಗುವುದರ ಜೊತೆಗೆ ಮೇಲಾಧಿಕಾರಿಗಳಿಗೆ ನೇರವಾಗಿ ಮೇಲ್ವಿಚಾರಣೆ ನಡೆಸಲು ಅನುಕೂಲವಾಗುತ್ತಿದೆ.ಬಳಕೆಯಿಂದ ಪ್ರಯೋಜನ :


ಈ ಆ್ಯಪ್‌ನ ಬಳಕೆಯಿಂದ ಸರ್ಕಾರಿ ಸಿಬ್ಬಂದಿಯರ ಕಾರ್ಯ ಚಟುವಟಿಕೆಗಳ ಡಿಜಿಟಲ್ ದಾಖಲೆ, ಕ್ಷೇತ್ರ ಮಟ್ಟದ ಕಾರ್ಯಗಳ ಜಿಯೋ-ಟ್ಯಾಗ್ ಹಾಗೂ ಸಮಯದ ಆಧಾರದ ದಾಖಲೀಕರಣ, ಸಾರ್ವಜನಿಕ ಸೇವೆಗಳಲ್ಲಿ ವಿಳಂಬ ಕಡಿಮೆ ಮಾಡಿ ಜವಾಬ್ದಾರಿ ಹೆಚ್ಚಳ, ಮೇಲಾಧಿಕಾರಿಗಳಿಗೆ ತ್ವರಿತ ಪರಿಶೀಲನೆ ಹಾಗೂ ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಅವಕಾಶ, ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ನೈಜ ಸಮಯದಲ್ಲಿ ಗಮನಿಸುವ ವ್ಯವಸ್ಥೆ, ಕಚೇರಿ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಹೆಚ್ಚಳ, ಕಾಗದದ ದಾಖಲೆಗಳ ಅವಲಂಬನೆ ಕಡಿಮೆಯಾಗುವುದರಿಂದ ಸಮಯ ಮತ್ತು ವೆಚ್ಚ ಉಳಿತಾಯವಾಗಲಿದೆ.ಸಾರ್ವಜನಿಕರಿಗೆ ಅನುಕೂಲ:

ಕರ್ತವ್ಯ ಆ್ಯಪ್‌ನಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಸೇವೆಗಳ ವಿತರಣೆ ಮತ್ತಷ್ಟು ಚುರುಕುಗೊಳ್ಳುತ್ತಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಭೇಟಿ ನೀಡಿ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿದೆ. ಯೋಜನೆಗಳ ಅನುಷ್ಠಾನ ವೇಗ ಪಡೆಯುವುದರ ಜೊತೆಗೆ ಅಧಿಕಾರಿಗಳ ಜವಾಬ್ದಾರಿತನವೂ ಹೆಚ್ಚುತ್ತಿದೆ. ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ಸುಲಭವಾಗಿದ್ದು ಸರ್ಕಾರದ ಸೇವೆಗಳು ಜನರಿಗೆ ಸಮಯಕ್ಕೆ ಸರಿಯಾಗಿ ತಲುಪಲು ನೆರವಾಗುತ್ತಿದೆ.ಬಳಕೆಯಲ್ಲಿ ಶಿಕ್ಷಣ ಇಲಾಖೆ ಮುಂದು:

ತಾಲೂಕಿನಲ್ಲಿ ಕರ್ತವ್ಯ ಆ್ಯಪ್ ಬಳಕೆಯಲ್ಲಿ ಬೇರೆಲ್ಲ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆ ಮುಂದಿದೆ. ಈ ಆ್ಯಪ್ ಬಂದಾಗಿನಿಂದ ತಾಲೂಕಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೌಕರರ ಹಾಜರಾತಿಯೂ ಕೂಡ ಹೆಚ್ಚಾಗಿದೆ. ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಕಂದಾಯ ಇಲಾಖೆಯಲ್ಲೂ ಕರ್ತವ್ಯ ಆ್ಯಪ್ ಬಳಕೆ ಉತ್ತಮವಾಗಿದೆ. ಆದರೆ, ಪೊಲೀಸ್ ಇಲಾಖೆ ಸೇರಿದಂತೆ ಕೆಲ ಇಲಾಖೆಗಳಲ್ಲಿ ಮಾತ್ರ ಇದರ ಬಳಕೆ ಇಳಿಮುಖವಾಗಿದೆ. ಪೊಲೀಸರು ಬೆಳಗ್ಗೆ ನಿರ್ಧಿಷ್ಟ ಸಮಯದಲ್ಲಿ ಚೆಕ್ ಇನ್ ಮಾಡಬಹುದಾದರೂ ಚೆಕ್ ಔಟ್ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಅವರ ಕೆಲಸ ಎಷ್ಟು ಹೊತ್ತಿಗೆ ಮುಗಿಯುತ್ತದೆ ಎಂಬುದು ಸ್ವತಹಃ ಅವರಿಗೂ ತಿಳಿಯದ ಹಿನ್ನೆಲೆಯಲ್ಲಿ ಆರಕ್ಷಕರು ಕರ್ತವ್ಯ ಆ್ಯಪ್ ಅನ್ನು ಚೆಕ್ ಇನ್ ಮಾಡಲು ಮಾತ್ರ ಬಳಕೆ ಮಾಡುತ್ತಿದ್ದಾರೆ.ಆ್ಯಪ್‌ನಿಂದ ಹುಕ್ಕೇರಿ ತಾಲೂಕು ಪ್ರಗತಿ:

ಹುಕ್ಕೇರಿ ತಾಲೂಕಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ಆ್ಯಪ್‌ನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ನಾನಾ ಇಲಾಖೆಗಳಲ್ಲಿ ಆ್ಯಪ್ ಬಳಕೆಗೆ ಉತ್ತೇಜನ ನೀಡಲಾಗಿದ್ದು ಕ್ಷೇತ್ರ ಮಟ್ಟದ ಕಾರ್ಯಗಳ ದಾಖಲೀಕರಣ ಹೆಚ್ಚಾಗಿದೆ. ಸರಕಾರಿ ಯೋಜನೆಗಳ ಅನುಷ್ಠಾನ, ಗ್ರಾಮ ಭೇಟಿ, ಸಾರ್ವಜನಿಕ ಅಹವಾಲುಗಳ ಪರಿಶೀಲನೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ಆ್ಯಪ್ ಪರಿಣಾಮಕಾರಿ ಸಾಧನವಾಗಿ ಪರಿಣಮಿಸಿದೆ. ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.ಇ-ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಉಪಕ್ರಮಗಳಲ್ಲಿ ಕರ್ತವ್ಯ ಆ್ಯಪ್ ಕೂಡ ಒಂದಾಗಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸರ್ಕಾರಿ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಈ ಆ್ಯಪ್ ಪ್ರಮುಖ ಪಾತ್ರ ವಹಿಸುತ್ತಿದೆ.

-ಬಲರಾಮ ಕಟ್ಟಿಮನಿ,

ತಹಸೀಲ್ದಾರ್‌ರು ಹುಕ್ಕೇರಿ.

ರಾಜ್ಯ ಸರ್ಕಾರ ಡಿಜಿಟಲ್ ಆಡಳಿತದತ್ತ ಮಹತ್ವದ ಹೆಜ್ಜೆ ಇರಿಸುವ ನಿಟ್ಟಿನಲ್ಲಿ ಈ ಕ್ರಮ ವಹಿಸಿದೆ. ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದರ ಜೊತೆಗೆ ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಸಾಧನವಾಗಿಯೂ ಕರ್ತವ್ಯ ಆ್ಯಪ್ ರೂಪುಗೊಳ್ಳುತ್ತಿದೆ.

-ಟಿ.ಆರ್.ಮಲ್ಲಾಡದ,
ಇಒ ತಾಪಂ ಹುಕ್ಕೇರಿ.