ಕನ್ನಡಪ್ರಭ ವಾರ್ತೆ ವಿಜಯಪುರ
ಸ್ವಾತಂತ್ರ್ಯ ಬಂದಾಗಿನಿಂದ ಇಂಡಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ಸಂಪುಟದಲ್ಲಿ ಅವಕಾಶ ಕೇಳಿದ್ದೆ. ಇದಕ್ಕೆ ಹೈಕಮಾಂಡ್‌ನವರೂ ಒಪ್ಪಿಕೊಂಡು, ಕೊನೆಯ ಕ್ಷಣದಲ್ಲಿ ನನ್ನನ್ನು ಕೈ ಬಿಡಲಾಗಿತ್ತು. ಯಾಕೆ ನನಗೆ ಅವಕಾಶ ನೀಡಿಲ್ಲ ಎಂಬುದಕ್ಕೆ ಕಾರಣವೇ ಸಿಗದಿದ್ದರಿಂದ ಮನಸಿಗೆ ನೋವಾಗಿ ರಾಜೀನಾಮೆ ನೀಡಿದ್ದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ನಗರದಲ್ಲಿನ ನೂತನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಟ್ಟಾ ಕಾಂಗ್ರೆಸ್ಸಿಗನಾಗಿದ್ದು, ಆ ಕ್ಷಣದಲ್ಲಿ ಆವೇಶಕ್ಕೆ ಒಳಗಾಗಿ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೆ. ನಾನು ರಾಜೀನಾಮೆ ನೀಡಿದ ಕೇವಲ 3 ಗಂಟೆಯಲ್ಲಿ ಕರ್ನಾಟಕದ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಸೇರಿ ಅನೇಕ ನಾಯಕರು ನಮ್ಮ ಮನೆಗೆ ಭೇಟಿ ನೀಡಿ, ಪಕ್ಷದಲ್ಲಿನ ಘಟನಾವಳಿಗಳು ಹಾಗೂ ಆಂತರಿಕ ಬೆಳವಣಿಗೆಗಳ ಬಗ್ಗೆ ವಿವರಿಸಿದರು ಎಂದರು.ನಾನು ಕೂಡ ಕ್ಷೇತ್ರದ ಕಾರ್ಯಕರ್ತರ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೆ. ಅನೇಕ ಮಠಾಧೀಶರು, ಹಿತೈಷಿಗಳು, ರಾಜಕೀಯ ಹಿರಿಯ ಮುಖಂಡರು, ಕಾರ್ಯಕರ್ತರು ಎಲ್ಲರೂ ದುಡುಕಿ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಿದರು. ಇದಕ್ಕಾಗಿ ನಾನು ರಾಜೀನಾಮೆ ಹಿಂಪಡೆದಿದ್ದೇನೆ. ಹಾಗಂತ ನಾನು ಕಾಂಗ್ರೆಸ್ ಬಿಟ್ಟು ಹೋಗುತ್ತಿರಲಿಲ್ಲ. ನಮ್ಮ ತಂದೆಯ ಕಾಲದಿಂದಲೂ ನಾವು ಕಾಂಗ್ರೆಸ್‌ನಲ್ಲಿದ್ದು ನನ್ನ ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ ಬಿಡಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ ಎಂದು ಹೇಳಿದರು.
ಇಂಡಿ ಕ್ಷೇತ್ರದ ದುರ್ದೈವವೋ ಏನೋ ಇದುವರೆಗೆ ಸಚಿವ ಸ್ಥಾನ ಸಿಗದ ಈ ಕ್ಷೇತ್ರಕ್ಕೆ ಈ ಬಾರಿಯೂ ಅನ್ಯಾಯವಾಗಿದೆ. ಇಂಡಿ ಹಣೆಬರಹದಲ್ಲಿ ಸಚಿವ ಸ್ಥಾನದ ಅದೃಷ್ಟವೇ ಬರೆದಂತಿಲ್ಲ. ಮುಂದೆ ಕ್ಷೇತ್ರ ವಿಂಗಡಣೆಯಾಗಿ ಅಥವಾ ಹೆಸರು ಬದಲಾವಣೆಯಾದ ಮೇಲೆಯಾದರೂ ಸಿಗಬಹುದೇನೋ ಎಂದು ಆಶಯ ವ್ಯಕ್ತಪಡಿಸಿದ ಅವರು, ಇನ್ಮುಂದೆ ರಾಜಕಾರಣದಲ್ಲಿ ಯಾವುದೇ ಸ್ಥಾನಮಾನ ಅಥವಾ ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಬಾರದು ಎಂದು ನಿರ್ಧರಿಸಿದ್ದೇನೆ. ಯಾರ ಬಳಿಯೂ ನನ್ನ ಅಧಿಕಾರಕ್ಕಾಗಿ ನಿವೇದನೆ ಸಲ್ಲಿಸುವುದಿಲ್ಲ. ಏಕೆಂದರೆ ನಾಯಕರು ನನಗೆ ಕೊಟ್ಟ ಮಾತು ಉಳಿಸಿಕೊಳ್ಳದಿರುವುದು ನೋವಾಗಿದೆ. 2028ಕ್ಕೆ ಯುದ್ಧ ಸಾರುವ ಮಾತನಾಡಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 2028 ಇನ್ನೂ ದೂರವಿದೆ, ಮುಂದೆ 2028 ಬಂದಾಗ ನೋಡೋಣ ಎಂದರು.ನಾನು ಶಾಸಕನಾಗಿದ್ದರೂ ಸಹ ಇಂಡಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ, ನೀರಾವರಿ ಮಾಡಿದ್ದೇನೆ, ಕೆರೆಗಳಿಗೆ ನೀರು ಹರಿಸಿದ್ದೇನೆ, ಐಐಟಿ ಕಾಲೇಜು, ಲಿಂಬೆಗೆ ಜಿಐ ಟ್ಯಾಗ್, ರಸ್ತೆ ಸೇರಿ ಅನೇಕ ಯೋಜನೆ ತಂದಿದ್ದೇನೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಇಂಡಿ ತಾಲೂಕನ್ನು ಬರದಿಂದ ಬಳಲದಂತೆ ಮಾಡಿ, ಟ್ಯಾಂಕರ್ ಮುಕ್ತ ಮಾಡಿದ್ದೇನೆ. ಜನರ ಮೂಲ ಸಮಸ್ಯೆ ನಿರ್ಮೂಲನೆ ಮಾಡಿದ ತೃಪ್ತಿ ನನಗಿದೆ. ಇದೀಗ ರಾಜ್ಯದಲ್ಲಿ ಬರವಿರುವುದರಿಂದ ಕ್ಷೇತ್ರದ ರೈತರು ಹಾಗೂ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಯತ್ನಾಳ ಪದಬಳಕೆ ಹಿಡಿತದಲ್ಲಿರಬೇಕು: ಶಾಸಕ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾಯಿತ ಪ್ರತಿನಿಧಿಗಳಾದವರು ಕೀಳು ಪದ ಬಳಕೆ ಮಾಡಬಾರದು. ಈ ರೀತಿ ಮಾತನಾಡಿಯೇ ಅವರು ಇಲ್ಲಿಗೆ ಮುಟ್ಟಿದ್ದಾರೆ. ಪಕ್ಷದಿಂದ ಹೊರಹಾಕಲು ಅವರು ಮಾಡಿಕೊಂಡ ಸ್ವಯಂಕೃತ ಅಪರಾಧಗಳೇ ಕಾರಣ. ಇನ್ಮುಂದೆ ಆದರೂ ಅವರು ಬದಲಾಗಬೇಕಿದೆ. ಇಂತಹ ಹತ್ತು ಬಸನಗೌಡರನ್ನು ನಾನು ನೋಡುತ್ತೇನೆ, ಸುಸಂಸ್ಕೃತನಾದ ನಾನು ನಿಮ್ಮಂತಹವರಿಂದ ಪಾಠ ಕಲಿಯುವ ಅವಶ್ಯಕತೆಯಿಲ್ಲ. ನಿಮಗೆ ಪಕ್ಷ ನಿಷ್ಠೆಯಿಲ್ಲ, ನನಗೆ ಪಕ್ಷ ನಿಷ್ಠೆಯಿದೆ. ಯಾರ ಡಿಎನ್‌ಎ ಏನಿದೆ?, ಯಾರ ಕಮಿಟ್ಮೆಂಟ್ ಏನಿದೆ ಎಂಬುದು ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವವನು ನಾನಲ್ಲ. ನಾನು ಕಾಂಗ್ರೆಸ್‌ನಲ್ಲಿ ಹುಟ್ಟಿ, ಕಾಂಗ್ರೆಸ್‌ನಲ್ಲೇ ಸಾಯುತ್ತೇನೆ. ಬಸನಗೌಡನಿಗೆ ಆ ತಾಕತ್ತು ಇದ್ದರೆ ಹೇಳಲಿ ನೊಡೋಣ ಎಂದು ಶಾಸಕ ಯತ್ನಾಳಗೆ ಸವಾಲು ಹಾಕಿದರು.
ನನ್ನಂತೆ ಯಾರಿಗೂ ಅನ್ಯಾಯ ಮಾಡಬೇಡಿ: ಸಿಎಂ ಸಿದ್ದರಾಮಯ್ಯನವರ ಮೂರು ವರ್ಷದ ಅತ್ಯುತ್ತಮ ಆಡಳಿತದ ಬಳಿಕ ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿದ್ದು, ಅವರ ಸಂಪುಟದಲ್ಲಿ ಮೊದಲಿಗೆ 14 ಸ್ಥಾನ ಮಾತ್ರ ಭರ್ತಿ ಮಾಡಲಾಗಿತ್ತು. ಇನ್ನುಳಿದ ಸಚಿವ ಸ್ಥಾನಗಳಿಗೆ ಒಂದೇ ವಾರದಲ್ಲಿ ನೇಮಕ ಮಾಡಿದ್ದರೆ ಇಷ್ಟೊಂದು ನಿರಾಸೆ ಆಗುತ್ತಿರಲಿಲ್ಲ. ಆದರೆ ಎರಡು ತಿಂಗಳವರೆಗೆ ಮುಂದೂಡಿ ಸಭೆಗಳ ಮೇಲೆ ಸಭೆ ಮಾಡಿ, ಒಂದು ಸಭೆಯಲ್ಲಿ ಸಚಿವ ಸ್ಥಾನಕ್ಕೆ ಆಯ್ಕೆ ಮಾಡುವುದು, ಮತ್ತೊಂದು ಸಭೆಯಲ್ಲಿ ಪಟ್ಟಿಯಿಂದ ಕೈಬಿಡುವುದು ಮಾಡಲಾಗಿದೆ. ಒಮ್ಮೆ ಭರವಸೆ ನೀಡುವುದು, ಮತ್ತೊಮ್ಮೆ ನಿರಾಸೆ ಮಾಡುವುದರಿಂದ ಬಹಳಷ್ಟು ನೋವಾಗುತ್ತದೆ. ನನ್ನಂತೆ ಯಾರಿಗೂ ನೋವು ಕೊಡಬಾರದು ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.