ಕನ್ನಡಪ್ರಭ ವಾರ್ತೆ ವಿಜಯಪುರ

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿನ ಪವಾಡ ಬಸವೇಶ್ವರ ದೇವಸ್ಥಾನದ ಬಾಗಿಲು ಮುರಿದು ಗರ್ಭಗುಡಿಯ ಗದ್ದುಗೆ ಮೇಲಿದ್ದ ₹51.20 ಲಕ್ಷ ಮೌಲ್ಯದ 32 ಕೇಜಿ ತೂಕದ ಬೆಳ್ಳಿಯ ದೇವರ ಮೂರ್ತಿ ಕಳವು ಮಾಡಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ತಿಳಿಸಿದರು.ನಗರದ ಪೊಲೀಸ್ ಸಮುದಾಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026 ಜು.5ರಂದು ನಡೆದಿದ್ದ ದೇವಸ್ಥಾನ ಕಳ್ಳತನ ಕುರಿತು ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಕರನಂದೆಪ್ಪ ಬಿರಾದಾರ ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಗುಜರಾತನ ಅಹ್ಮದಾಬಾದ ಆರೋಪಿ ಸುರೇಶಕುಮಾರ ಸೋನಿ, ಗುಜರಾತನ ಕುಂಬಾರಿಯಾ ನಿವಾಸಿಗಳಾದ ಬ್ರಹ್ಮಾರ ನೇಟ್‌ ಹಾಗೂ ಇಂದ್ರಜೀತ ನೇಟ್‌ರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ಕೆಜಿ ತೂಕದ ಬಸವೇಶ್ವರ ಮೂರ್ತಿಯ ತುಂಡರಿಸಿದ ತುಣುಕುಗಳು, ಒಟ್ಟು 23 ಕೇಜಿ ತೂಕವುಳ್ಳ ಕರಗಿಸಿದ ಬೆಳ್ಳಿಯ ಗಟ್ಟಿ ತುಣುಕುಗಳು, ಎರಡು ಮೊಬೈಲ್‌ ಫೋನ್‌, ಕೃತ್ಯಕ್ಕೆ ಬಳಸಿದ ಜಿಜೆ-01 ಕೆಎಸ್‌-4317 ನಂಬರ್‌ ಕಾರು, ಕೃತ್ಯಕ್ಕೆ ಬಳಸಿದ ಆರು ಕಬ್ಬಿಣದ ರಾಡ್‌ಗಳು ಸೇರಿ ಒಟ್ಟು ₹52.70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳ ಜೊತೆಗೆ ಇನ್ನೂ ಕೆಲವು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಇದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದರು.

ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ದೇವಸ್ಥಾನ ಕಳ್ಳತನದ ತನಿಖೆಗಾಗಿ ಬಸವನ ಬಾಗೇವಾಡಿ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮಹಮ್ಮದ ಫಸಿಯುದ್ದೀನ್‌, ಪಿಎಸ್‌ಐಗಳಾದ ಸಂಜಯ ತಿಪ್ಪರೆಡ್ಡಿ, ಆರ್‌.‌ಎಸ್.‌ಭಂಗಿ ಹಾಗೂ ಸಿಬ್ಬಂದಿಯನ್ನು ಒಳಗೊಂಡು ಒಟ್ಟು 4 ತನಿಖಾ ತಂಡಗಳನ್ನು ರಚಿಸಿ, ಪತ್ತೆ ಕಾರ್ಯವನ್ನು ವಹಿಸಲಾಗಿತ್ತು.

ತನಿಖೆ ವೇಳೆ ಜು.5ರಂದು ನಡೆಸಿದ ಕಳ್ಳತನಕ್ಕೂ ಮೊದಲೇ ಆರೋಪಿತರು ಜೂನ್‌ 20ರಂದು ಬಸರಕೋಡ ಗ್ರಾಮಕ್ಕೆ ಬಂದು ದೇವಸ್ಥಾನಕ್ಕೆ ಭೇಟಿ ನೀಡಿ ಕಳ್ಳತನ ಯೋಜನೆ ರೂಪಿಸಿದ್ದರು. ಬಳಿಕ ಜುಲೈ 5ರ ರಾತ್ರಿ ಕೃತ್ಯ ಎಸಗಿ ಕಳ್ಳತನ ಮಾಡಿದ ಬಸವೇಶ್ವರ ಮೂರ್ತಿ ಪೈಕಿ ಮೂರ್ತಿಯ ಪ್ರಮುಖ ಭಾಗವನ್ನು 4 ಭಾಗಗಳಾಗಿ ತುಂಡರಿಸಿ, ಇನ್ನುಳಿದ ಭಾಗವನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಿ ಮಾರಾಟ ಮಾಡಿರುವುದು ತಿಳಿದು ಬಂದಿದೆ.

ಪ್ರಕರಣ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಅವಿರತವಾಗಿ ತನಿಖೆ ಕೈಕೊಂಡು ತನಿಖಾ ಕೌಶಲ್ಯಗಳನ್ನು ಬಳಸಿ, ವಿವಿಧ ತಾಂತ್ರಿಕ ನೈಪುಣ್ಯತೆಯಿಂದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ತಂಡದ ಕರ್ತವ್ಯವನ್ನು ಶ್ಲಾಘಿಸಿ, ಉತ್ತರ ವಲಯ ಐಜಿಪಿ ಅವರು ತನಿಖಾ ತಂಡದ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರತ್ಯೇಕ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ ಎಂದು ತಿಳಿಸಿದರು.