ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಎಐ ತಂತ್ರಜ್ಞಾನ ಬಳಕೆಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಪ್‌ಡೇಟ್ ಆಗಬೇಕಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಮಧು ಜಿ.ಮಾದೇಗೌಡ ಹೇಳಿದರು.

ನಗರದ ಎಸ್.ಬಿ. ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದಿಂದ ನಡೆದ ಶೈಕ್ಷಣಿಕ ಕಾರ್ಯಾಗಾರ, ಪ್ರಾಂಶುಪಾಲರಿಗೆ ಡೈರಿ ವಿತರಣೆ ಬ್ಯಾಗ್ ವಿತರಣೆ, ರಾಷ್ಟ್ರೀಯ ಕ್ರೀಡಾಪಟುಗಳಿಗೆ, ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ, ಪ್ರತಿಭಾನ್ವಿತ ಮತ್ತು ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿವಿಧ ಕ್ಷೇತ್ರಗಳ ಸಾಧಕ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಿನೇ ದಿನೇ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆಗಳು ನಾಗಾಲೋಟದಲ್ಲಿ ದಾಪುಗಾಲು ಹಾಕುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಎಐ ಬಳಕೆಯಾಗುತ್ತಾ ಯಶಸ್ಸಿನತ್ತ ಮುನ್ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲೂ ಬಳಕೆಯಾಗುತ್ತಿದೆ. ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಪ್‌ಡೇಟ್ ಆಗಬೇಕಿದೆ ಎಂದರು.

ವಿದ್ಯಾರ್ಥಿಗಳ ಉಜ್ವಲಭವಿಷ್ಯ, ದೇಶದ ಪ್ರಗತಿ ಶಿಕ್ಷಣದಲ್ಲಿದೆ, ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಶ್ರಮದಿಂದ ಎಲ್ಲವೂ ಸಾಧ್ಯವಿದೆ, ಉಪನ್ಯಾಸಕರು ತಂತ್ರಜ್ಞಾನವನ್ನು ಕಲಿತು ಪಾಠ ಮಾಡಬೇಕಿದೆ, ಎಲ್ಲಿ ಸೋಲು ಕಾಣುತ್ತಿದೆಯೋ ಅಲ್ಲಿ ಎಐ ತಂತ್ರಜ್ಞಾನ ಬಳಕೆಗೆ ಸಾಧ್ಯತೆ ಹೆಚ್ಚಿದೆ ಎಂದರು.


ಬಳಿಕ ಮಾತನಾಡಿದ ವಾಗ್ಮಿ ಎಂ.ಕೃಷ್ಣೇಗೌಡ, ನಮಗೆ ತುಂಬಾ ಕಾಡುವುದು ನಾವು ಮಾತನಾಡುವಾಗ ನಮ್ಮ ಮನಸ್ಸುಗಳು ಸ್ವಚ್ಛಂದವಾಗಿರಬೇಕು. ಇಲ್ಲದಿದ್ದರೆ ನಾನು ಎಷ್ಟೇ ಅದ್ಬುತ ಭಾಷಣ ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ. ಮನಸ್ಸು ಏಕಾಗ್ರತೆಯಿಂದ ಕೇಳಿಸಿಕೊಳ್ಳಬೇಕು ಎಂದರು.

ನಮ್ಮಲ್ಲಿ ಸರ್ಕಾರ ಬಹಳ ಮುಖ್ಯವಾಗಿ ನಡೆಸಬೇಕಿರುವ ಕ್ಷೇತ್ರಗಳು ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳು. ಜನರು ನೆಮ್ಮದಿಯಾಗಿರುವಂತೆ ನೋಡಿಕೊಡಿಕೊಳ್ಳಬೇಕು. ಈ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ. ಈ ವೈಫಲ್ಯದಿಂದಲೇ ಖಾಸಗೀಕರಣವಾಗುತ್ತಿದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಪದವಿ ಪೂರ್ವ ಶಿಕ್ಷಣ ಕಾಲೇಜಿನ ಉಪನಿರ್ದೇಶಕ ಸಿ. ಚೆಲುವಯ್ಯ, ಎಸ್.ಬಿ.ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಡಾ. ಮೀರಾ ಶಿವಲಿಂಗಯ್ಯ, ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ನಾಗೇಶ್, ಉಪಾಧ್ಯಕ್ಷ ಎಂ.ಎಲ್. ಕೃಷ್ಣೇಗೌಡ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಯು.ಎಸ್. ನಟರಾಜ್, ಪ್ರಧಾನ ಕಾರ್ಯದರ್ಶಿ ಪಿ.ಕಾಂತರಾಜು, ಕಾಂಗ್ರೆಸ್ ಮುಖಂಡ ಅಭಿಲಾಸ್, ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ ಇನ್ನಿತರರಿದ್ದರು.