ಸಾರಾಂಶ
ಪಹಲ್ಗಾಂ ನರಮೇಧ ನೆರೆಯ ಪಾಕಿಸ್ತಾನದಲ್ಲಿ ಅಕ್ಷರಶಃ ಯುದ್ಧ ಭೀತಿ ಸೃಷ್ಟಿಸಿದಂತೆ ಕಂಡುಬರುತ್ತಿದೆ.
ಮುಜಾಫರಾಬಾದ್: ಪಹಲ್ಗಾಂ ನರಮೇಧ ನೆರೆಯ ಪಾಕಿಸ್ತಾನದಲ್ಲಿ ಅಕ್ಷರಶಃ ಯುದ್ಧ ಭೀತಿ ಸೃಷ್ಟಿಸಿದಂತೆ ಕಂಡುಬರುತ್ತಿದೆ.
ಒಂದೆಡೆ ಭಾರತದ ಸಂಭವನೀಯ ದಾಳಿ ನಡೆಯಲು ಅಮೆರಿಕಕ್ಕೆ ಮೊರೆ ಇಟ್ಟಿರುವ ಪಾಕಿಸ್ತಾನ ಇನ್ನೊಂದೆಡೆ ಇದೀಗ ತಾನು ಅಕ್ರಮಿಸಿಕೊಂಡಿರುವ ಕಾಶ್ಮೀರದ ಗಡಿ ಭಾಗದ ಜನರಿಗೆ 2 ತಿಂಗಳಿಗೆ ಆಗುವಷ್ಟು ಆಹಾರ ಸಂಗ್ರಹ ಮಾಡಿಕೊಳ್ಳುವಂತೆ ಸೂಚಿಸಿದೆ.
ಈ ಕುರಿತು ಸ್ಥಳೀಯ ಅಸೆಂಬ್ಲಿಗೆ ಶುಕ್ರವಾರ ಮಾಹಿತಿ ನೀಡಿರುವ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಚೌಧರಿ ಅನ್ವರ್ ಉಲ್ ಹಕ್, ‘ವಾಸ್ತವ ಗಡಿನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಇರುವ 13 ಕ್ಷೇತ್ರಗಳ ಜನರಿಗೆ 2 ತಿಂಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಸೂಚಿಸಲಾಗಿದೆ. ಇದರ ಜೊತೆಗೆ 13 ಕ್ಷೇತ್ರಗಳಿಗೆ ಆಹಾರ, ಔಷಧಿಗಳು ಮತ್ತು ಇತರ ಎಲ್ಲಾ ಮೂಲಭೂತ ಆವಶ್ಯಕತೆಗಳ ಪೂರೈಕೆಗಾಗಿ ಸರ್ಕಾರವು 100 ಕೋಟಿ ರು.ಗಳ ತುರ್ತು ನಿಧಿಯನ್ನು ಸಹ ರಚಿಸಿದೆ’ ಎಂದು ತಿಳಿಸಿದ್ದಾರೆ.
ರಸ್ತೆ ದುರಸ್ತಿ:
ಈ ನಡುವೆ ಭಾರತ ದಾಳಿ ನಡೆಸಿದರೆ ಅದು ಪ್ರಮುಖವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೇ ಆಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಪಿಒಕೆ ಸರ್ಕಾರವು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಬಳಸಿಕೊಂಡು ಗಡಿಪ್ರದೇಶಗಳಲ್ಲಿನ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಲು ಮುಂದಾಗಿದೆ.
ಶಾಲೆ ಬಂದ್:
ಮತ್ತೊಂದೆಡೆ ಪಿಒಕೆಯ 1000ಕ್ಕೂ ಹೆಚ್ಚು ಧಾರ್ಮಿಕ ಶಾಲೆಗಳನ್ನು ಗುರುವಾರದಿಂದ ಜಾರಿಗೆ ಬರುವಂತೆ 10 ದಿನಗಳ ಕಾಲ ಮುಚ್ಚಲು ಸರ್ಕಾರ ಆದೇಶಿಸಿವೆ.
ಇವೆಲ್ಲವೂ, ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ದಾಳಿ ನಡೆಸಿಯೇ ತೀರುತ್ತದೆ ಎಂಬ ಆತಂಕದಲ್ಲಿ ಪಾಕಿಸ್ತಾನ ಮತ್ತು ಪಿಒಕೆ ಸರ್ಕಾರ ಇದೆ ಎಂಬುದರ ಸುಳಿವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಹಲವು ಸಚಿವರು, ಪಹಲ್ಗಾಂ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ದಾಳಿ ಬಹುತೇಕ ಖಚಿತ. ಅದನ್ನು ತಡೆಯುವುದು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸಲು ನಾವು ಎಲ್ಲಾ ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆ ಸಂಭವಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚಾಯ್ತು ಯುದ್ಧ ಭೀತಿ
ಜನರಿಗೆ ಅಗತ್ಯ ಆಹಾರ ಸಂಗ್ರಹಕ್ಕೆ ಸರ್ಕಾರ ಸೂಚನೆ
ಗಡಿ ಪ್ರದೇಶಗಳ ತುರ್ತು ರಸ್ತೆ ದುರಸ್ತಿಗೆ ಸರ್ಕಾರ ಕ್ರಮ
1000 ಧಾರ್ಮಿಕ ಶಾಲೆಗಳಿಗೆ 10 ದಿನ ರಜೆ ಘೋಷಣೆ
ಆಹಾರ, ಔಷಧ ಖರೀದಿಗೆ 100 ಕೋಟಿ ತುರ್ತು ನಿಧಿ