ನೆಹರೂ ತಪ್ಪಿನಿಂದ ಸಿಂಧೂನದಿ ವಿವಾದ: ಶೆಟ್ಟರ

| Published : Apr 30 2025, 12:34 AM IST

ಸಾರಾಂಶ

ಸಿಂಧು ನದಿ ಒಪ್ಪಂದ ಜವಾಹರ್‌ ನೆಹರೂ ಕಾಲದಲ್ಲಿ ಆಗಿತ್ತು. ಅಂದಿನ ತಪ್ಪನ್ನು ಇಂದು ಮೋದಿ ಸರ್ಕಾರ ಸರಿ ಮಾಡುವ ಕೆಲಸ ಮಾಡುತ್ತಿದೆ.

ಹುಬ್ಬಳ್ಳಿ:

ಸಿಂಧೂ ನದಿ ವಿಚಾರವಾಗಿ ಮಾಜಿ ಪ್ರಧಾನಿ ದಿ. ಜವಾಹರ ಲಾಲ್‌ ನೆಹರೂ ಮಾಡಿದ ತಪ್ಪಿನಿಂದಾಗಿ ದೇಶ ಇಂದು ಅದರ ಪರಿಣಾಮ ಎದುರಿಸುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧು ನದಿ ಒಪ್ಪಂದ ಜವಾಹರ್‌ ನೆಹರೂ ಕಾಲದಲ್ಲಿ ಆಗಿತ್ತು. ಅಂದಿನ ತಪ್ಪನ್ನು ಇಂದು ಮೋದಿ ಸರ್ಕಾರ ಸರಿ ಮಾಡುವ ಕೆಲಸ ಮಾಡುತ್ತಿದೆ ಎಂದರು.

ಕಾಂಗ್ರೆಸ್‌ ನವರ ಜನಾಕ್ರೋಶ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲ ದಿನಗಳ ಹಿಂದೆ ಏರಿಸಿದ ಹಾಲು, ವಿದ್ಯುತ್‌, ಬಸ್‌ ದರ ಇಳಿಸಲಿ. ಆಮೇಲೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದರು.

ಜನರ ಮನಸ್ಸನ್ನು ವಿಷಯಾಂತರ ಮಾಡುವ ಉದ್ದೇಶದಿಂದಲೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ‌ ಮಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ ಎಂದರು.

ತಾಳ್ಮೆ ಕಳೆದುಕೊಂಡ ಸಿಎಂ: ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಿಎಂ‌ ಸಿದ್ಧರಾಮಯ್ಯ ಕೈ ಎತ್ತಿದ ಕುರಿತು ಪ್ರತಿಕ್ರಿಯಿಸಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯದ‌ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರಿಗೆ ಮೈಂಡ್ ಡಿಸ್ಟರ್ಬ್ ಆಗಿದೆ. ಪ್ರತಿಯೊಂದು ವಿಚಾರದಲ್ಲೂ ಸಿದ್ಧರಾಮಯ್ಯ ಗೊಂದಲದಲ್ಲಿದ್ದಾರೆ. ಹೀಗಾಗಿ ತಾಳ್ಮೆ ಕಳೆದುಕೊಂಡು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.ಸಿಎಂ ವರ್ತನೆಗೆ ಶಾಸಕ ಟೆಂಗಿನಕಾಯಿ ಆಕ್ರೋಶ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಮೇಲೆ ಕೈ ಎತ್ತಿದ್ದು, ನಿಮಗೆ ಅಧಿಕಾರದ ಮದ ನೆತ್ತಿಗೇರಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸಹ ಪೊಲೀಸ ಅಧಿಕಾರಿಗಳ ಮೇಲೆ ದರ್ಪ ತೋರಿದ್ದಾರೆ. ಹೀಗಾಗಿ, ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದಲ್ಲಿ ಯಾವುದೇ ಅಧಿಕಾರಿಗಳಿಗೆ ಗೌರವ ಸಿಗುತ್ತಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಅವರ ಹೇಳಿಕೆ ಸರಿಯಲ್ಲ ಎಂದು ಸಿಎಂ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.