ಸಾರಾಂಶ
ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು : ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಚಾರಣೆಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಕೇಂದ್ರ ಕಚೇರಿಗೆ ಬೆಳಗ್ಗೆ 10.15ಕ್ಕೆ ಲೋಕಾಯುಕ್ತ ಡಿವೈಎಸ್ಪಿ ಹಾಗೂ ತನಿಖಾಧಿಕಾರಿ ಎಚ್.ಎಂ.ಸತೀಶ್ ಅವರ ಮುಂದೆ ಜಮೀರ್ ಹಾಜರಾದರು. ಬಳಿಕ ಸುದೀರ್ಘ ವಿಚಾರಣೆ ಮುಗಿಸಿಕೊಂಡು ಮಧ್ಯಾಹ್ನ 12.45 ಗಂಟೆಗೆ ಸುಮಾರಿಗೆ ಸಚಿವರು ಹೊರ ಬಂದಿದ್ದಾರೆ.
ತನಿಖೆಗೆ ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ತನಿಖಾಧಿಕಾರಿ ಸತೀಶ್ ಸೂಚಿಸಿರುವುದಾಗಿ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಕಾನೂನುಬದ್ಧ ವ್ಯವಹಾರ-ಜಮೀರ್:
ನಾನು ಕಾನೂನು ಬದ್ಧವಾಗಿ ಹಣಕಾಸು ವ್ಯವಹಾರ ನಡೆಸಿದ್ದೇನೆ. ಹಲವು ವರ್ಷಗಳಿಂದ ಸಾರಿಗೆ ಉದ್ಯಮದಲ್ಲಿ ತೊಡಗಿದ್ದೆ. ಆದರೆ ಅಕ್ರಮವಾಗಿ ಆಸ್ತಿ ಸಂಪಾದಿಸಿಲ್ಲ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗಿದೆ. ಪ್ರತಿ ವರ್ಷ ಆದಾಯ ತೆರಿಗೆ ಪಾವತಿಸಿದ್ದೇನೆ. ಚುನಾವಣೆ ವೇಳೆ ಸಲ್ಲಿಸಿದ್ದ ಅಪಿಢವಿಟ್‌ನಲ್ಲಿ ಕೂಡ ಎಲ್ಲ ವಿವರ ಕೊಟ್ಟಿದ್ದೇನೆ ಎಂದು ಲೋಕಾಯುಕ್ತ ಪೊಲೀಸರಿಗೆ ಸಚಿವ ಜಮೀರ್ ವಿವರಣೆ ನೀಡಿರುವುದಾಗಿ ತಿಳಿದು ಬಂದಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದಡಿ ಜಮೀರ್ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಚಿವರ ಆದಾಯದ ಮೂಲ ಶೋಧಿಸುತ್ತಿರುವ ಪೊಲೀಸರು, ಈಗಾಗಲೇ ಅವರೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ನಟಿ ರಾಧಿಕಾ ಕುಮಾರಸ್ವಾಮಿ, ಸಚಿವ ದಿನೇಶ್ ಗೂಂಡಾರಾವ್, ಉದ್ಯಮಿ ಕೆಜಿಎಫ್ ಬಾಬು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಸೇರಿ ಹಲವು ಮಂದಿಗೆ ತನಿಖೆ ಬಿಸಿ ತಟ್ಟಿದೆ. ಈ ಪೈಕಿ ಸಚಿವ ದಿನೇಶ್ ಗುಂಡುರಾವ್ ಹಾಗೂ ಕುಪ್ಪೇಂದ್ರ ರೆಡ್ಡಿ ಹೊರತುಪಡಿಸಿ ಇನ್ನುಳಿದವರು ಪೊಲೀಸರಿಗೆ ವಿವರಣೆ ನೀಡಿದ್ದಾರೆ.