ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರೈತರ ಜಮೀನನ್ನು ಕಬಳಿಸಲು ಹೊರಟಿರುವ ಜಮೀರ್ ಅಹಮ್ಮದ್ ಒಬ್ಬ ರಾಷ್ಟ್ರದ್ರೋಹಿ. ಅವರ ಮಾತಿಗೆ ಕಿಮ್ಮತ್ತು ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಷ್ಟ್ರದ್ರೋಹಿಯೇ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.ವಕ್ಫ್ ಬೋರ್ಡ್ ನೀತಿಯನ್ನು ಖಂಡಿಸಿ ರಾಷ್ಟ್ರ ಭಕ್ತರ ಬಳಗದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಭಾರತದ ಅನ್ನ, ಗಾಳಿ ಸೇವಿಸುತ್ತಿರುವ ಜಮೀರ್ ಅಹಮ್ಮದ್ ಪಾಕಿಸ್ತಾನದಲ್ಲಿ ಇದ್ದವರಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನೇ ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಹರಿಹಾಯ್ದರು.
ನೂರಾರು ವರ್ಷಗಳಿಂದ ರೈತರು ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಜಮೀರ್ ಮಾತ್ರ ಇದು ವಕ್ಫ್ ಬೋರ್ಡ್ ಆಸ್ತಿ ಎಂದು ಕಾನೂನುಬಾಹಿರವಾಗಿ ರೈತರ ಜಮೀನಿನ ದಾಖಲೆಗಳನ್ನು ತಿದ್ದಿ, ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆ ಮಾಡಿಸುತ್ತಿದ್ದಾರೆ ಎಂದು ದೂರಿದರು.ಇಡೀ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಡ ರೈತರು ನೂರಾರು ವರ್ಷಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಕಂದಾಯ ಕಟ್ಟಿ ಪಹಣಿಯನ್ನೂ ಹೊಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ರೈತರ ಮತ್ತು ಹಿಂದೂ ಮಠ ಮಾನ್ಯಗಳ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ನೋಟಿಸ್ ನೀಡುತ್ತಿದೆ ಎಂದು ಕಿಡಿಕಾರಿದರು.ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ನೋಟಿಸ್ ಕೊಡುವುದನ್ನು ನಿಲ್ಲಿಸಬೇಕು. ಸಚಿವ ಜಮೀರ್ ಅಹಮ್ಮದ್ ಗೆ ಎಚ್ಚರಿಕೆ ನೀಡಿ, ಈ ರೀತಿಯ ಅದಾಲತ್ ಮಾಡದಂತೆ ನಿರ್ಬಂಧಿಸಬೇಕು. ಅನ್ನದಾತರಿಗೆ ಅವರ ಜಮೀನನ್ನು ಬಿಟ್ಟುಕೊಡಬೇಕು. ರೈತರ ಜಮೀನು ಕಸಿದುಕೊಳ್ಳುತ್ತಿರುವ ಜಮೀರ್ ತಕ್ಷಣವೇ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಈ ರೀತಿಯ ನಿರ್ಧಾರ ಖಂಡಿಸಿ ರಾಷ್ಟ್ರಭಕ್ತರ ಬಳಗ ತನ್ನ ಹೋರಾಟ ತೀವ್ರಗೊಳಿಸುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ. ಕಾಂತೇಶ್, ಇ. ವಿಶ್ವಾಸ್, ಸುವರ್ಣಾ ಶಂಕರ್, ಮೋಹನ್, ಕುಬೇರಪ್ಪ, ಕಾಚಿನಕಟ್ಟೆ ಸತ್ಯನಾರಾಯಣ್, ಬಾಲು, ಮೋಹನ್ ಕುಮಾರ್, ಅನಿತಾ, ಗುರು ಶೇಠ್, ಲಕ್ಷ್ಮೀಶ್, ಶ್ರೀಕಾಂತ್ ಮತ್ತಿತರರು ಇದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಏನೋ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಬಾಯಿ ಮಾತಿಗೆ ಹೇಳುತ್ತಾರೆ. ಆದರೆ ನಡೆದುಕೊಳ್ಳುವುದೇ ಬೇರೆ. ಮತ್ತೆ ಮತ್ತೆ ನೋಟಿಸ್ ಕೊಡಿಸುತ್ತಲೇ ಇದ್ದಾರೆ. ವಿರಕ್ತಮಠ ಸೇರಿದಂತೆ ಹಲವು ಮಠದ ಆಸ್ತಿಗಳು ಕೂಡ ವಕ್ಪ್ ಬೋರ್ಡ್‌ನದು ಎಂದು ಈಗಾಗಲೇ ನೋಟಿಸ್ ನೀಡಿದ್ದಾರೆ. ಒಂದು ಕಡೆ ರೈತರು ಮತ್ತೊಂದು ಕಡೆದ ಮಠದ ಆಸ್ತಿಗಳನ್ನು ಈ ರೀತಿ ಕಬಳಿಸುತ್ತಿರುವುದನ್ನು ನಾವು ವಿರೋಧಿಸುತ್ತೇವೆ.
ಕೆ.ಎಸ್. ಈಶ್ವರಪ್ಪ ರಾಷ್ಟ್ರಭಕ್ತರ ಬಳಗದ ಸಂಚಾಲಕ