ಚಿತ್ರ ನಟ ಉಪೇಂದ್ರ ದಂಪತಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಬಳಿಕ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಅವರ ಪತ್ನಿಗೆ ಸೈಬರ್ ದುರುಳರು ಕಾಟ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

  •  ಬೆಂಗಳೂರು : ಚಿತ್ರ ನಟ ಉಪೇಂದ್ರ ದಂಪತಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಬಳಿಕ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಅವರ ಪತ್ನಿಗೆ ಸೈಬರ್ ದುರುಳರು ಕಾಟ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ಅಕ್ರಮ ಹಣ ವರ್ಗಾವಣೆ ಕೇಸ್‌ ಹೆಸರಿನಲ್ಲಿ ಬೆದರಿಸಿ ಸುಧಾಕರ್ ಅವರ ಪತ್ನಿ ಪ್ರೀತಿ ಅವರನ್ನು ಡಿಜಿಟಲ್ ಅರೆಸ್ಟ್‌ ಮಾಡಿ 14 ಲಕ್ಷ ರು. ದೋಚಿದ್ದ ಸೈಬರ್ ವಂಚನೆ ಮಾಡಿದ್ದರು. ಪಶ್ಚಿಮ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಹಣ ವರ್ಗಾವಣೆಯಾಗಿದ್ದ ಆರೋಪಿ ಖಾತೆಯಲ್ಲಿ ಹಣವನ್ನು ಮುಟ್ಟುಗೋಲು ಹಾಕಿಸಿ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಪ್ರೀತಿ ಅವರ ಖಾತೆಗೆ ಮರಳಿ ವರ್ಗಾಯಿಸಿದ್ದಾರೆ.

ಏನಿದು ಪ್ರಕರಣ?:

ಆ.26 ರಂದು ಪ್ರೀತಿ ಅವರಿಗೆ ವಂಚಕರು ವಾಟ್ಸಪ್‌ ಕರೆ ಮಾಡಿ, ತಾವು ಮುಂಬೈ ಸೈಬರ್ ಕ್ರೈಂ ಪೊಲೀಸ್‌ನವರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದು, ನಿಮ್ಮ ಹಣವನ್ನು ಆರ್‌ಬಿಐಗೆ ಪರಿಶೀಲನೆಗೆ ಕಳುಹಿಸಿ ಪುನಃ 45 ನಿಮಿಷದಲ್ಲಿ ಮರಳಿ ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇವೆ. ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡದಿದ್ದಲ್ಲಿ ನಿಮ್ಮನ್ನು ಅರೆಸ್ಟ್ ಮಾಡಲಾಗುವುದು ಎಂದು ಬೆದರಿಸಿದ್ದರು. ಬಳಿಕ ಅವರ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ಒಟ್ಟು 14 ಲಕ್ಷ ರು. ಅನ್ನು ಅಪರಿಚಿತ ಯೆಸ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಸೈಬರ್ ದುರುಳರು ಮೋಸ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಅದೇ ದಿನ ಸಂಜೆ ಪಶ್ಚಿಮ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರೀತಿ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಯಿತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಪ್ರೀತಿ ಅವರಿಂದ ಕೂಡಲೇ (Within Golden Hour ರಾಷ್ಟ್ರೀಯ ಸೈಬರ್ ಸಹಾಯವಾಣಿ (NCRP) ನಂಬರ್ 1930 ಗೆ ಕರೆ ಮಾಡಿಸಿ ಹಣ ವರ್ಗಾವಣೆಯಾದ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿ ಹಣ ಮುಟ್ಟುಗೋಲು ಹಾಕಿಕೊಳ್ಳುವಂತೆ ದೂರು ದಾಖಲಿಸಿದರು. ಈ ಕರೆ ಮೇರೆಗೆ ಆರೋಪಿಯ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್‌ ಅಧಿಕಾರಿಗಳು ಮುಟ್ಟುಗೋಲು ಹಾಕಿದರು. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಆರೋಪಿ ಖಾತೆಯಲ್ಲಿ ಫ್ರೀಜ್ ಆಗಿದ್ದ ಹಣವನ್ನು ಮರಳಿ ಸಂಸದ ಸುಧಾಕರ್ ಅವರ ಪತ್ನಿ ಖಾತೆಗೆ ವರ್ಗಾವಣೆಗೆ ಮಾಡಿಸಿದ್ದಾರೆ.

ಸೈಬರ್ ವಂಚನೆಗೆ ಒಳಗಾಗಿ ಹಣವನ್ನು ಕಳೆದುಕೊಂಡವರು ಗಾಬರಿಗೊಂಡು ಸಮಯವನ್ನು ವ್ಯರ್ಥ ಮಾಡದೆ ಕೂಡಲೇ (Within Golden Hour) ರಾಷ್ಟ್ರೀಯ ಸೈಬರ್ ಸಹಾಯವಾಣಿ (NCRP) ನಂಬರ್ 1930ಕ್ಕೆ ದೂರು ದಾಖಲಿಸಬೇಕು ಹಾಗೂ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದರೆ ತ್ವರಿತವಾಗಿ ಕ್ರಮ ಕೈಗೊಂಡು ಆಗುವ ನಷ್ಟವನ್ನು ತಪ್ಪಿಸಬಹುದು. ವಂಚನೆ ನಡೆದ ತಕ್ಷಣ ದೂರು ಕೊಟ್ಟ ಕಾರಣಕ್ಕೆ ಪ್ರೀತಿ ಅವರಿಗೆ 14 ಲಕ್ಷ ರು. ಮರಳಿ ಸಿಕ್ಕಿದೆ.

-ಎಸ್‌.ಗಿರೀಶ್, ಡಿಸಿಪಿ, ಪಶ್ಚಿಮ ವಿಭಾಗ

ಕೆಲ ದಿನಗಳ ಹಿಂದೆ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಮಾಜಿ ಶಾಸಕರನ್ನು ಡಿಜಿಟಲ್ ಅರೆಸ್ಟ್‌ಗೊಳಪಡಿಸಿ ಸೈಬರ್ ವಂಚರರು 40 ಲಕ್ಷ ರು. ದೋಚಿದ್ದರು. ಅದೇ ರೀತಿ ಉಪೇಂದ್ರ ದಂಪತಿ ಅವರ ಮೊಬೈಲ್ ಹ್ಯಾಕ್ ಮಾಡಿ 1.5 ಲಕ್ಷ ರು. ಹಾಗೂ ಮಾಜಿ ಮುಖ್ಯಮಂತ್ರಿ ಅವರ ಬ್ಯಾಂಕ್ ಖಾತೆಯಿಂದ 3 ಲಕ್ಷ ರು. ಅನ್ನು ದುಷ್ಕರ್ಮಿಗಳು ಎಗರಿಸಿದ್ದರು. ಈಗ ಸೈಬರ್ ದುರುಳರ ಕಾಟಕ್ಕೆ ಸಂಸದ ಸುಧಾಕರ್ ಅವರ ಪತ್ನಿ ಪ್ರೀತಿ ಹಣ ಕಳೆದುಕೊಂಡಿದ್ದರು.