ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳಲ್ಲ: ಸಂಸದ ಡಾ.ಕೆ.ಸುಧಾಕರ್‌ ಆಶ್ವಾಸನೆ

| Published : Sep 19 2025, 01:00 AM IST

ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳಲ್ಲ: ಸಂಸದ ಡಾ.ಕೆ.ಸುಧಾಕರ್‌ ಆಶ್ವಾಸನೆ
Share this Article
  • FB
  • TW
  • Linkdin
  • Email

ಸಾರಾಂಶ

ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಪಾಸ್ ಗಳನ್ನು ನಿರ್ಮಾಣ ಮಾಡಿದ್ದಾರೆ. ಮಳೆ ಬಂದರೆ, ಕಾರುಗಳೂ ಮುಳುಗಡೆಯಾಗುತ್ತಿವೆ. ನಾವು ಹೋರಾಟ ಮಾಡಿ, ಕೇಸುಗಳು ಹಾಕಿಸಿಕೊಂಡಿದ್ದೇವೆ. ಯಾವ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಬುಳ್ಳಹಳ್ಳಿ ರಾಜಪ್ಪ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆವಿಜಯಪುರ

ರೈಲ್ವೆ ಯೋಜನೆಗಳ ನಿರ್ಮಾಣಕ್ಕಾಗಿ ಗುರುತಿಸಿದ್ದ ಹೋಬಳಿಯ ವೆಂಕಟಗಿರಿಕೋಟೆ, ಬಿಜ್ಜವಾರ ಸೇರಿದಂತೆ ಈ ಭಾಗದಲ್ಲಿ ಒಂದಿಂಚು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ, ರೈತರು ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಸಂಸದ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಹೋಬಳಿಯ ವೆಂಕಟಗಿರಿಕೋಟೆಯಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ದೇಶದ ರೈತರ ಪರವಾಗಿದ್ದಾರೆ. ರೈತರ ಆದಾಯ ದ್ವಿಗುಣಗೊಳ್ಳದ ಹೊರತು, ನಾವು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ನಮಗೆಲ್ಲಾ ಪಾಠ ಮಾಡಿದ್ದಾರೆ. ಕೈಗಾರಿಕೆಗಳ ಸ್ಥಾಪನೆ, ರೈಲ್ವೆ ಯೋಜನೆಗಳು, ವಿಮಾನ ಯೋಜನೆಗಳು ಇವೆಲ್ಲಾ ಅಭಿವೃದ್ಧಿಗಾಗಿ ಬೇಕು. ಆದರೆ, ರೈತರು ತಮ್ಮ ಜೀವನಕ್ಕಾಗಿ ಇಟ್ಟುಕೊಂಡಿರುಚ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಂಡು ರೈಲ್ವೆ ಯೋಜನೆಗಳನ್ನು ಮಾಡಲು ನಾನು ಬಿಡುವುದಿಲ್ಲ. ಇದು ಕೇವಲ ಭರವಸೆಯಲ್ಲ. ಈ ಬಗ್ಗೆ ರೈಲ್ವೆ ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚಿಸಿ, ನಿಮ್ಮೊಂದಿಗೆ ಪ್ರಕಟಿಸುತ್ತಿದ್ದೇನೆ. ಬಂಜರುಭೂಮಿಗಳನ್ನು ಗುರುತಿಸಿ, ರೈಲ್ವೆ ಟರ್ಮಿನಲ್ ಯೋಜನೆಗಳನ್ನು ಸ್ಥಾಪಿಸಲು ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗುತ್ತದೆ ಎಂದರು. ವೆಂಕಟಗಿರಿಕೋಟೆ, ಬಿಜ್ಜವಾರ, ಹಾರೋಹಳ್ಳಿ, ಮುದುಗುರ್ಕಿ, ಬುಳ್ಳಹಳ್ಳಿ ಸೇರಿದಂತೆ ಬಹಳಷ್ಟು ಹಳ್ಳಿಗಳಲ್ಲಿ ರೈತರು ಕೃಷಿ ಮಾಡುತ್ತಿರುಬ್ಬಗ್ಗೆ ನಮಗೂ ಅರಿವಿದೆ. ಈ ಭಾಗದ ರೈತರನ್ನು ನೋಡಿ, ಚಿಕ್ಕಬಳ್ಳಾಪುರದಲ್ಲಿ ೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ, ಮತ್ತಿತರೆ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದೇವೆ ಎಂದು ಹೇಳಿದರು.

ಸಚಿವರಿಂದಲೂ ವಿರೋಧ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರೂ ಸಹಾ ಈ ಭಾಗದಲ್ಲಿ ರೈಲ್ವೆ ಯೋಜನೆಗಳನ್ನು ಜಾರಿಗೆ ತರುವುದು ಬೇಡ. ಬಹಳಷ್ಟು ರೈತರು ಭಾವನಾತ್ಮಕವಾಗಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹಲವಾರು ಬಾರಿ ಪ್ರಸ್ತಾಪ ಮಾಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ವೆಂಕಟಗಿರಿಕೋಟೆ ಗ್ರಾಪಂ ಮಾಜಿ ಅಧ್ಯಕ್ಷ ಆರ್.ಅಮರನಾಥ್ ಮಾತನಾಡಿ, ಈ ಭಾಗದಲ್ಲಿನ ಜನರು, ಪರಸ್ಪರ ಹೊಂದಾಣಿಕೆಯಿಂದ ಭಾವನಾತ್ಮಕವಾಗಿ ಬದುಕು ಕಟ್ಟಿಕೊಂಡಿದ್ದೇವೆ. ರೈಲ್ವೆ ಯೋಜನೆಗಳನ್ನು ಇಲ್ಲಿ ಅನುಷ್ಠಾನಗೊಳಿಸಿದರೆ, ಊರಿಗೆ ಊರೇ ಖಾಲಿ ಮಾಡಬೇಕಾಗುತ್ತದೆ. ಮತ್ತೆ ಬೇರೆ ಕಡೆಯಲ್ಲಿ ಹೋಗಿ ಜೀವನ ರೂಪಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಇಲ್ಲಿ ಮಾಡುವ ಬದಲಿಗೆ ಬೇರೆ ಕಡೆಯಲ್ಲಿ ಮಾಡಿ ಎಂದು ಮನವಿ ಮಾಡಿಕೊಂಡರು.

ನೀರು ಕೊಟ್ಟಿದ್ದೀರಿ ಭೂಮಿ ಉಳಿಸಿ:

ನೀವು ರಾಜ್ಯದಲ್ಲಿ ಸಚಿವರಾಗಿದ್ದಾಗ ಸತತ ಪ್ರಯತ್ನದಿಂದ ಈ ಭಾಗದ ಕೆರೆಗಳಿಗೆ ಎಚ್.ಎನ್. ವ್ಯಾಲಿ ಯೋಜನೆಯಡಿ ನೀರು ಹರಿಸಿದ್ದೀರಿ. ಈಗ ಈ ನೀರು ಬಳಕೆ ಮಾಡಿಕೊಂಡು ಬೆಳೆ ಬೆಳೆಯಲು ಭೂಮಿಯನ್ನೂ ಉಳಿಸಿಕೊಡಿ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮನವಿ ಮಾಡಿದರು.

ರೈಲ್ವೆ ಅಂಡರ್ ಪಾಸ್ ಗಳನ್ನು ಸರಿಪಡಿಸಿ:

ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಪಾಸ್ ಗಳನ್ನು ನಿರ್ಮಾಣ ಮಾಡಿದ್ದಾರೆ. ಮಳೆ ಬಂದರೆ, ಕಾರುಗಳೂ ಮುಳುಗಡೆಯಾಗುತ್ತಿವೆ. ನಾವು ಹೋರಾಟ ಮಾಡಿ, ಕೇಸುಗಳು ಹಾಕಿಸಿಕೊಂಡಿದ್ದೇವೆ. ಯಾವ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಬುಳ್ಳಹಳ್ಳಿ ರಾಜಪ್ಪ ಮನವಿ ಮಾಡಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ರವಿಕುಮಾರ್, ಲೋಕೇಶ್, ಬಿ.ಚೇತನ್ ಗೌಡ, ವೆಂಕಟಗಿರಿಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಹುರುಳುಗುರ್ಕಿ ಶ್ರೀನಿವಾಸ್, ರಾಮಕೃಷ್ಣಪ್ಪ, ಎಸ್.ಎಲ್.ಎನ್.ಅಶ್ವಥನಾರಾಯಣ, ಹನುಮೇಗೌಡ, ಇರಿಗೇನಹಳ್ಳಿ ಶ್ರೀನಿವಾಸ್, ಓಬದೇನಹಳ್ಳಿ ಮುನಿಯಪ್ಪ, ಆರ್.ಕೆ.ನಂಜೇಗೌಡ, ಬಸವರಾಜ್ ಮುಂತಾದವರು ಹಾಜರಿದ್ದರು.