ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜೀವನದ ಮೌಲ್ಯ, ಸಂಸ್ಕೃತಿ, ಸಂಸ್ಕಾರದೊಂದಿಗೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಲು ಯುವ ಸಮೂಹಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಅಭಿಪ್ರಾಯಪಟ್ಟರು.ನಗರದ ಒಳಾಂಗಣ ಕ್ರೀಡಾಂಗಣ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ನಾಗರಿಕರಿಗಾಗಿ ಜಿಲ್ಲಾಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ನಾವು ತಾಂತ್ರಿಕ ಯುಗದಲ್ಲಿ ಬದುಕುತ್ತಿದ್ದೇವೆ. ಮೊಬೈಲ್‌ನಲ್ಲಿ ಜ್ಞಾನಕ್ಕೆ ಅಗತ್ಯವಾದ ಮಾಹಿತಿಗಳನ್ನು ಶೀಘ್ರದಲ್ಲೇ ಪಡೆಯಬಹುದು. ಆದರೆ, ಬದುಕಿಗೆ ಅಗತ್ಯವಾದ ಜೀವನದ ಮೌಲ್ಯಗಳನ್ನು ಹಿರಿಯರಿಂದ ಮಾತ್ರ ತಿಳಿಯಲು ಸಾಧ್ಯ. ಜೀವನದ ಪ್ರತಿ ಘಟ್ಟದಲ್ಲಿ ಜೀವಿಸಿರುವ ಹಿರಿಯ ನಾಗರಿಕರ ಅನುಭವ ಮಹತ್ವವಾದದ್ದು, ಆದ್ದರಿಂದ ಯುವ ಪೀಳಿಗೆಗೆ ಬದುಕಿನ ಮೌಲ್ಯಗಳನ್ನು ತಿಳಿಸುವ ಮಹತ್ತರ ಪಾತ್ರ ವಹಿಸುವಂತೆ ಹಿರಿಯರಲ್ಲಿ ಮನವಿ ಮಾಡಿದರು.
ವಯಸ್ಸು ಎಂಬುದು ದೇಹಕ್ಕೆ ಆಗುವಂತಹದ್ದು, ಸದಾ ಚೈತನ್ಯದಿಂದ ಉತ್ಸಾಹದಲ್ಲಿ ಬದುಕುವವರಿಗೆ ವಯಸ್ಸು ಕೇವಲ ಸಂಖ್ಯೆ ಅಷ್ಟೇ ಆಗಿರುತ್ತದೆ. ದೇಹದ ಜತೆಗೆ ಮನಸ್ಸಿಗೂ ವ್ಯಾಯಾಮದ ಅವಶ್ಯಕತೆಯಿದೆ. ಮನಸ್ಸು ಮತ್ತು ದೇಹವನ್ನು ಚಲನಶೀಲವಾಗಿರಿಸಿಕೊಂಡು ಉತ್ಸಾಹದಿಂದ ಬದುಕು ನಡೆಸಬೇಕು ಎಂದು ತಿಳಿ ಹೇಳಿದರು.ಬದುಕಿನ ಉದ್ದಕ್ಕೂ ಕುಟುಂಬಕ್ಕಾಗಿ ಜೀವಿಸಿ, ೬೦ರ ನಂತರದ ನಿವೃತ್ತಿ ಬದುಕನ್ನು ನಿಮಗಾಗಿ ಬದುಕಿ, ಯಾರಲ್ಲಿಯೂ ಯಾವುದೇ ನಿರೀಕ್ಷೆಯಿಲ್ಲದೆ ಆತ್ಮ ಗೌರವದಿಂದ ಜೀವನ ನಡೆಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಹಿರಿಯ ನಾಗರಿಕರನ್ನು ಉದ್ದೇಶಿಸಿ ಸ್ಫೂರ್ತಿದಾಯಕವಾದ ಮಾತುಗಳನ್ನು ಹೇಳಿದರು.
ಹಿರಿಯ ನಾಗರಿಕರಿಗಾಗಿ ಜಿಲ್ಲಾ ಮಟ್ಟದಲ್ಲಿ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ, ಬಕೆಟ್ಟಿಗೆ ಚೆಂಡು ಹಾಕುವುದು ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೀತ-ಗಾಯನ, ಏಕಪಾತ್ರ ಅಭಿನಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುಕ್ತಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಓಂಪ್ರಕಾಶ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಶಿವಲಿಂಗಯ್ಯ, ಜಿಲ್ಲಾ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕಹುಚ್ಚಯ್ಯ ಹಾಗೂ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ರಂಗೇಗೌಡ ಉಪಸ್ಥಿತರಿದ್ದರು.