ಹಾನಗಲ್ಲ: ಗ್ರಾಮೀಣ ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಂಕಲ್ಪಿಸಿ ಶೈಕ್ಷಣಿಕ, ಔದ್ಯೋಗಿಕ ತರಬೇತಿ ಒಳಗೊಂಡು, ಶಾಲಾ ಮಟ್ಟದಿಂದ ವಿಶ್ವವಿದ್ಯಾಲಯದ ವರೆಗಿನ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಗದು ಪ್ರೋತ್ಸಾಹದೊಂದಿಗೆ ಹೃದಯಸ್ಪರ್ಶಿ ಸಮಾರಂಭಕ್ಕೆ ಶಾಸಕ ಶ್ರೀನಿವಾಸ ಮಾನೆ ಅವರ ಮಹಾಪೋಷಕತ್ವದ ಪರಿವರ್ತನ ಕಲಿಕಾ ಕೇಂದ್ರ ಸಾಕ್ಷಿಯಾಗುತ್ತಿದೆ.ಸಂಸ್ಥೆ ವಿದ್ಯಾರ್ಥಿಗಳ ಜ್ಞಾನದಾಹಕ್ಕೆ ನೀರೆರೆದು ಪೋಷಿಸುವ ಸಂಕಲ್ಪ ಕೈಗೂಡಿದ್ದು, ಶೈಕ್ಷಣಿಕವಾಗಿ ಬೆಂಬಲಿಸಿ, ಪ್ರೋತ್ಸಾಹಿಸಿ ಭೇಷ್ ಎಂದು ಹುರಿದುಂಬಿಸುವ ಕೆಲಸ ಸದ್ದಿಲ್ಲದೆ ನಡೆದಿದೆ. ೨೦೨೨ರಲ್ಲಿ ಧಾರವಾಡದ ಕೆಸಿಎಸ್ ಅಕಾಡೆಮಿಯಲ್ಲಿ ಹಾನಗಲ್ಲ ತಾಲೂಕಿನ ೭೦ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಊಟ, ವಸತಿ ಸಹಿತ ಎಲ್ಲ ಅನುಕೂಲ ಕಲ್ಪಿಸಿ, ಪರಿಣತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ದೊರಕಿಸಿದ ಶಾಸಕ ಶ್ರೀನಿವಾಸ ಮಾನೆ, ಹಾನಗಲ್ಲಿನಲ್ಲಿಯೇ ಇಂತಹ ಶಿಕ್ಷಣಕ್ಕೆ ಅವಕಾಶವಾಗಬೇಕು ಎಂಬ ಮಹದಾಸೆ ಹೊಂದಿದ್ದರು. ೨೦೨೩ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾನಗಲ್ಲಿನಲ್ಲಿ ಉಚಿತ ತರಬೇತಿ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದರು.ಚುನಾವಣೆಯಲ್ಲಿ ಜಯಶೀಲರಾದ ಕೆಲದಿನಗಳಲ್ಲಿ ಶ್ರೀನಿವಾಸ ಮಾನೆ ಅವರ ಮಹಾಪೋಷಕತ್ವದ ಬೆಂಬಲದೊಂದಿಗೆ ನ್ಯಾಯವಾದಿ ಸ್ವಾತಿ ಮಾಳಗಿ ಅವರ ಅಧ್ಯಕ್ಷತೆಯಲ್ಲಿ ೨೦೨೩ರಲ್ಲಿ ಹಾನಗಲ್ಲಿನಲ್ಲಿ ಆರಂಭವಾದ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರ ಈ ವರೆಗೆ ೫ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಸಿಇಟಿ, ನೀಟ್, ಸ್ಪೋಕನ್ ಇಂಗ್ಲಿಷ್, ಎನ್‌ಎಂಎಂಎಸ್, ಎಸ್‌ಎಸ್‌ಎಲ್‌ಸಿ ವರ್ಗ ಪೂರ್ವ ತರಬೇತಿ, ಸೈನ್ಯ ಸೇರುವ ಯುವಕರಿಗೆ ತರಬೇತಿ, ಹದಿಹರೆಯದ ಮಕ್ಕಳಿಗೆ ಮಾರ್ಗದರ್ಶನ ಶಿಬಿರಗಳನ್ನು ನಡೆಸುತ್ತ ಬಂದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಕನ್ನಡ, ಆಂಗ್ಲ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ೬ ಸಾವಿರಕ್ಕೂ ಅಧಿಕ ಮಾರ್ಕ್ಸ್ ಸ್ಕೋರರ್ ಪುಸ್ತಕಗಳನ್ನು ನೀಡಿ ಅತ್ಯುತ್ತಮ ಪರೀಕ್ಷಾ ಸಿದ್ಧತೆಗೆ ಅನುಕೂಲ ಕಲ್ಪಿಸಿ, ಫಲಿತಾಂಶ ಸುಧಾರಣೆಗೆ ಕೈ ಜೋಡಿಸಲಾಗಿದೆ. ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳೆದ ಮೂರು ವರ್ಷಗಳಿಂದ ಏರಿಕೆ ಕಾಣುತ್ತಿರುವುದು ವಿಶೇಷ. ಉದ್ಯೋಗ ಸಮೃದ್ಧಿ ಕೇಂದ್ರದ ಮೂಲಕ ೧೦ ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿ ಯುವಕ ಯುವತಿಯರಿಗೆ ಮಾಹಿತಿ ಮಾರ್ಗದರ್ಶನ ನೀಡಿದ್ದಲ್ಲದೇ, ೩೨೦೦ಕ್ಕೂ ಅಧಿಕ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ವಿವಿಧ ಉದ್ಯಮಗಳಲ್ಲಿ ಉದ್ಯೋಗ ಕಲ್ಪಿಸಿರುವುದು ಹೆಮ್ಮೆಯ ಸಂಗತಿ. ಮೇ ೯ರಂದು ಇಲ್ಲಿನ ಪಿಎಂಶ್ರೀ ಶಾಸಕರ ಮಾದರಿ ಶಾಲೆಯ ಮೈದಾನದಲ್ಲಿ ತಾಲೂಕಿನ ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶವನ್ನಾಧರಿಸಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಎನ್‌ಎಂಎಂಎಸ್, ಬಿಇಡಿ, ಸ್ನಾತಕೋತ್ತರ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ತೋರಿದ ೩೭೫ ವಿದ್ಯಾರ್ಥಿಗಳನ್ನು ಗೌರವಿಸುವ ೩ನೇ ವರ್ಷದ ಸಾಧನೆ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಸನ್ಮಾನ, ಪ್ರಶಸ್ತಿ ಫಲಕ, ಪುಸ್ತಕ ಕೊಡುಗೆ, ಒಟ್ಟು ₹೫ ಲಕ್ಷಕ್ಕೂ ಅಧಿಕ ನಗದು ಬಹುಮಾನವೂ ಸೇರಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಕಾರ್ಯ ಆಗಲಿದೆ.