ಕನ್ನಡ ಸಾಹಿತ್ಯದ ಭಾಷಾಂತರ ಅಗತ್ಯ ಇದೆ: ಕೆ.ಪಿ.ರಾವ್

KannadaprabhaNewsNetwork |  
Published : Nov 23, 2025, 03:15 AM IST
22ಕನ್ನಡ | Kannada Prabha

ಸಾರಾಂಶ

ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನಾರಿ ಚೇತನ’ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.

ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ರಾಷ್ಟ್ರೀಯ ವಿಚಾರ ಸಂಕಿರಣ ಕನ್ನಡಪ್ರಭ ವಾರ್ತೆ ಉಡುಪಿ

ಕನ್ನಡ ಭಾಷೆಯ ಅಮೂಲ್ಯವಾದ ಸಾಹಿತ್ಯ ಪ್ರಕಾರಗಳನ್ನು ದೇಶದ ಇತರ ಭಾಷೆಗಳಿಗೆ ಭಾಷಾಂತರ ಮಾಡಬೇಕಾದ ಅಗತ್ಯತೆ ಇದೆ. ಇದರಿಂದ ನಮ್ಮ ಭಾಷೆಯ ಈ ಗ್ರಂಥಗಳು ವಿದೇಶಗಳಿಗೆ ಕೂಡ ತಲುಪಲು ಸಾಧ್ಯವಾಗುತ್ತದೆ ಎಂದು ಖ್ಯಾತ ವಿದ್ವಾಂಸ ಕೀಲಿಮಣೆ ತಜ್ಞ ಪ್ರೊ. ಕೆ.ಪಿ. ರಾವ್ ಹೇಳಿದರು.

ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ನಾರಿ ಚೇತನ’ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಸ್ಕೃತ ಭಾಷೆ ಸತ್ತ ಭಾಷೆ ಅಲ್ಲ, ಪ್ರಪಂಚದಲ್ಲಿ ಇರುವ ಭಾಷೆಗಳಲ್ಲಿ ಅತ್ಯಂತ ಅಮೂಲ್ಯವಾದ ಭಾಷೆಗಳಲ್ಲಿ ಒಂದಾಗಿದೆ. ನಮ್ಮ ಸಂಸ್ಕೃತಿ ಬಗ್ಗೆ ಇರುವ ಕೀಳರಿಮೆಯನ್ನು ದೂರ ಮಾಡಬೇಕಾಗಿದೆ ಎಂದ ಅವರು, ಒಂದು ಭಾಷೆಯನ್ನು ಬಳಕೆ ಮಾಡಿದಷ್ಟು ಮತ್ತು ಗ್ರಾಂಥಿಕವಾಗಿ ಪ್ರಸಾರ ಮಾಡಿದಷ್ಟು ಅದರ ಬೆಳವಣಿಗೆ ಸಾಧ್ಯ ಎಂದರು.ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಜನ್ ಕೆ. ಉದ್ಘಾಟಿಸಿ ಶುಭಹಾರೈಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯರಾದ ಚನ್ನಪ್ಪ ಅಂಗಡಿ, ಅಕಾಡೆಮಿಯ ಕಾರ್ಯ ವೈಖರಿಯ ಕುರಿತು ಮಾಹಿತಿ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಾಂಸ್ಕೃತಿಕ ನಗರಿ ಉಡುಪಿಯಲ್ಲಿ ಈ ರೀತಿಯ ವೈಶಿಷ್ಟ ಪೂರ್ಣ ಕಾರ್ಯಕ್ರಮ ನಡೆಯುತ್ತಿರುವುದು ಅಭಿನಂದನೀಯ ಎಂದರು.ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಮಾತನಾಡಿ, ಕಸಾಪ ಉಡುಪಿ ತಾಲೂಕು ವತಿಯಿಂದ ನಿರಂತರವಾಗಿ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಮುಖ್ಯವಾಗಿ ಮನೆಯೇ ಗ್ರಂಥಾಲಯ ಮತ್ತು ಕಥೆ ಕೇಳೋಣ ಅಭಿಯಾನ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ವಿದ್ಯಾರ್ಥಿಗಳು ಕೂಡ ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಕರೆ ನೀಡಿದರು.ನಂತರ ವಿಚಾರಗೋಷ್ಠಿಯಲ್ಲಿ ರಂಗಭೂಮಿಯಲ್ಲಿ ಮಹಿಳಾ ಧ್ವನಿ ಈ ವಿಷಯದ ಕುರಿತು ಸಾಹಿತಿ ಡಾ. ಕಾತ್ಯಾಯನಿ ಕುಂಜಿಬೆಟ್ಟು, ತುಳುನಾಡಿನ ಮಹಿಳಾ ಸಾಹಿತ್ಯದ ಕುರಿತು ಉಪನ್ಯಾಸಕಿ ಡಾ. ನಿಕೇತನ, ಮಹಿಳಾ ಕಾದಂಬರಿಗಳಲ್ಲಿ ಸ್ತ್ರೀ ವಾದಿ ಚಿಂತನೆ ಬಗ್ಗೆ ಡಾ. ರೇಖಾ ಬನ್ನಾಡಿ ವಿಚಾರ ಮಂಡನೆ ಮಾಡಿದರು.ಕನ್ನಡ ಉಪನ್ಯಾಸಕಿ ಡಾ. ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಸಾಪ ಸಂ.ಕಾರ್ಯದರ್ಶಿಗಳಾದ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿದರು. ಸತೀಶ್ ಕೊಡವೂರು ವಂದಿಸಿದರು.

PREV

Recommended Stories

ಮಾನವ ಎಷ್ಟೇ ಬುದ್ಧಿವಂತನಾದರೂ ಪರಿಸರಕ್ಕೆ ತಲೆಬಾಗಲೇಬೇಕು: ಶ್ರೀಧರ್
ಬಿಜೆಪಿ ಚುನಾವಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ: ಮಂಜುನಾಥ್ ಗೌಡ