ಸಾರಾಂಶ
ಮೂಡುಬಿದಿರೆ ರೋಟರಿಯಲ್ಲಿ ಕನ್ನಡಪ್ರಭ ತಾಲೂಕುಮಟ್ಟದ ಚಿತ್ರಕಲಾ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಮೂಡುಬಿದಿರೆನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.47ರಷ್ಟು ಕಾಡುಗಳಿದ್ದವು. ಕಳೆದ 75 ವರ್ಷಗಳಲ್ಲಿ ಅವುಗಳ ಪ್ರಮಾಣ ಶೇ.25ಕ್ಕೆ ಇಳಿದಿರುವುದು ನಮ್ಮ ಪರಿಸರ ಕಾಳಜಿಗೆ ಕರಾಳ ಸಾಕ್ಷಿ. ಭೂಮಿಯ ಮೇಲಿರುವ ಎಲ್ಲ ಪ್ರಭೇದಗಳಲ್ಲಿ ಮಾನವ ಜೀವಿ ಎಂಬ ಪ್ರಭೇದದಿಂದಲೇ ಸಮಸ್ಯೆಯಾಗಿರುವುದು. ನಾವು ಬರೀ ಬುದ್ಧಿಜೀವಿಗಳಾದರೆ ಸಾಲದು, ನೆಲ, ಜಲ ಸಂರಕ್ಷಣೆಯೊಂದಿಗೆ ಅವುಗಳಿಗೆ ತಲೆಬಾಗಲೇಬೇಕು ಎಂದು ಮೂಡುಬಿದಿರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಹೇಳಿದರು.
ಕನ್ನಡಪ್ರಭ ದಿನಪತ್ರಿಕೆಯ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಕಾರದಲ್ಲಿ, ಮೂಡುಬಿದಿರೆ ರೋಟರಿ ಕ್ಲಬ್ ಹಾಗೂ ರೋಟರಿ ಎಜುಕೇಶನ್ ಸೊಸೈಟಿ ಪ್ರಾಯೋಜಕತ್ವದಲ್ಲಿ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಚಿತ್ರಕಲಾ ಸ್ಪರ್ಧೆಯ ಅಂಗವಾಗಿ ಶನಿವಾರ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆ ಸಮ್ಮಿಲನ ಸಭಾಂಗಣದಲ್ಲಿ ಆಯೋಜಿಸಲಾದ ಮೂಡುಬಿದಿರೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಕಲೆ ಎನ್ನುವುದು ಎಲ್ಲರಿಗೂ ಒಲಿಯುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಚಿತ್ರಕಲಾ ಪ್ರತಿಭೆಯನ್ನು ನಿರಂತರ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಓದಿನ ಜತೆಗೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹೆಗ್ಡೆ ಹೇಳಿದರು.
ಸಕಾಲಿಕ ವಿಚಾರವಾಗಿರುವ ಪರಿಸರ, ವನ್ಯ ಜೀವಿಗಳ ಕುರಿತಾದ ಕನ್ನಡಪ್ರಭದ ಕಾಳಜಿಯನ್ನು ಶ್ಲಾಘಿಸಿದ ನಾಗರಾಜ್ ಹೆಗ್ಡೆ, ಎಳೆಯ ಮಕ್ಕಳಲ್ಲೂ ಚಿತ್ರಕಲೆಯ ಮೂಲಕ ಪರಿಸರ ಕಾಳಜಿಗೆ ಒತ್ತು ನೀಡಿರುವ ಪತ್ರಿಕೆಯ ಧೋರಣೆಯನ್ನು ಅಭಿನಂದಿಸಿದರು. ರೋಟರಿ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಅನಂತ ಕೃಷ್ಣ ರಾವ್ ಮಾತನಾಡಿ, ದೇಶದಲ್ಲಿ ಅನಕ್ಷರಸ್ಥರು ಹೆಚ್ಚಿದ್ದ ಸಂದರ್ಭದಲ್ಲಿ ಅರಣ್ಯ, ಪರಿಸರ ಸುರಕ್ಷಿತವಾಗಿತ್ತು. ಶಿಕ್ಷಿತರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪರಿಸರ ನಾಶ ಹೆಚ್ಚುತ್ತಲೇ ಇದೆ. ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ವಿಶೇಷವಾಗಿ ಶಿಕ್ಷಕರು ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.ರೋಟರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ.ಎಂ. ಅಧ್ಯಕ್ಷತೆ ವಹಿಸಿ, ಅರಣ್ಯ, ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದರು.ಬದುಕಿನ ಭಾಗವಾದ ಕಲೆ: ಜೆ.ಡಬ್ಲ್ಯು. ಪಿಂಟೋ
ಚಿತ್ರಕಲಾ ಸ್ಪರ್ಧೆಯನ್ನು ರೋಟರಿ ಪಿಯು ಕಾಲೇಜಿನ ಸಂಚಾಲಕ ಜೆ.ಡಬ್ಲ್ಯು. ಪಿಂಟೋ ಉದ್ಘಾಟಿಸಿದರು.ಬಳಿಕ ಮಾತನಾಡಿ, ಕಲೆ ನಮ್ಮೆಲ್ಲರಲ್ಲಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೆತ್ತವರು ಗುರುತಿಸಿ ಅವುಗಳನ್ನು ಪೋಷಿಸಿದಾಗ ಮಹಾನ್ ಕಲಾವಿದರು ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದು ಮೂಡುಬಿದಿರೆ ಮೂಲದ ಚಿತ್ರ ಕಲಾವಿದ ದೆಹಲಿಯ ಮಂಜುನಾಥ್ ಕಾಮತ್ ಅವರ ಬದುಕನ್ನು ಪಿಂಟೋ ಉದಾಹರಿಸಿದರು. ತೀರ್ಪುಗಾರರಾಗಿದ್ದ ರಘುರಾಮ ಆಚಾರ್ಯ, ಸ್ಪರ್ಧಾ ಸಂಯೋಜಕ ಮಹೇಶ್ ಹುಲೇಕಲ್, ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದ ಸಂಸ್ಥೆಯ ಆಡಳಿತಾಧಿಕಾರಿ ಪ್ರಫುಲ್ ಡಿಸೋಜ, ಕಚೇರಿ ಮುಖ್ಯಸ್ಥ ಸತೀಶ್, ಶಿಕ್ಷಕ ಗೋಪಾಲಕೃಷ್ಣ, ಕಚೇರಿ ವ್ಯವಸ್ಥಾಪಕ ಸತೀಶ್, ಸಿಬ್ಬಂದಿ ಮಾನಸ, ನಿಶ್ಮಿತಾ, ರೇಷ್ಮಾ ಅವರನ್ನು ಗೌರವಿಸಲಾಯಿತು.
ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ್ ಜೈನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕರಾದ ಜಯಪ್ರಕಾಶ್, ಮೋಹನ್ ವಂದಿಸಿದರು. ಮೂಡುಬಿದಿರೆ ತಾಲೂಕು ವರದಿಗಾರ ಗಣೇಶ್ ಕಾಮತ್ ಎಂ. ಕಾರ್ಯಕ್ರಮ ನಿರೂಪಿಸಿದರು.ಗಮನ ಸೆಳೆದ ಕನ್ನಡಪ್ರಭ ಕಾಳಜಿ:ಕನ್ನಡ ಭಾಷೆ, ನೆಲ ಜಲ ಕುರಿತು ನಾಡಿನ ಹಿರಿಯ ಪತ್ರಿಕೆ ಕನ್ನಡಪ್ರಭ ಇಂದಿಗೂ ಅದೇ ಕಾಳಜಿ ವಹಿಸಿದೆ. ಪತ್ರಿಕೆಯ ಧೋರಣೆ, ಸುದ್ದಿಯ ನಿಖರತೆ ನಾಡಿನ ಓದುಗರಿಗೆ ಜ್ಞಾನ ಲಾಭ ನೀಡಿದೆ ಎಂದ ಮೂಡುಬಿದಿರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ., ಈ ಹಿಂದೆ ಕನ್ನಡಪ್ರಭ ಪ್ರಕಟಿಸಿದ ಕಾಂಡ್ಲಾ ಸಸ್ಯ ಪ್ರಬೇಧದ ಕುರಿತದಾದ ವರದಿ, ಅರಣ್ಯ ಇಲಾಖಾ ಸಿಬ್ಬಂದಿ ಕುರಿತು ಮುಖಪುಟದಲ್ಲಿ ಬೆಳಕು ಚೆಲ್ಲಿದ ವರದಿಗಳು, ರಾಜ್ಯ ಸರ್ಕಾರದ ಸದನದಲ್ಲೂ ಪ್ರತಿಧ್ವನಿಸಿ ಸಮಸ್ಯೆಗೆ ಪರಿಹಾರ ದೊರೆತಿದ್ದನ್ನು ನೆನಪಿಸಿಕೊಂಡರು.
-----------ಸಂಪೂರ್ಣ ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ
ಇಡೀ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿಯಿಂದ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ, ಆಹಾರ ವಿತರಣೆಯಲ್ಲೂ ಅಡಕೆ ಹಾಳೆಯ ತಟ್ಟೆಗಳು, ಚಮಚ ಹೀಗೆ ಪ್ಲಾಸ್ಟಿಕ್ ಹೊರತಾಗಿ ಕಾರ್ಯಕ್ರಮ ಸಂಯೋಜಿಸಲಾಗಿತ್ತು.--------
ವಿಜೇತರ ವಿವರ:4 ಮತ್ತು 5ನೇ ತರಗತಿ ವಿಭಾಗ: ಪ್ರಥಮ: ಪ್ರಣಮ್ಯ (ರೋಟರಿ ಆಂಗ್ಲ ಮಾಧ್ಯಮ ಶಾಲೆ), ದ್ವಿತೀಯ: ರಿಯಾ (ರೋಟರಿ ಆಂಗ್ಲ ಮಾಧ್ಯಮ ಶಾಲೆ), ತೃತೀಯ: ಅವಿನ್ ವಿಯೋನ್ ಕಾರ್ಡೋಜಾ (ಸಂತ ಇಗ್ನೇಷಿಯಸ್ ಆಂಗ್ಲ ಮಾಧ್ಯಮ ಶಾಲೆ ಪಾಲಡ್ಕ), ಸಮಾಧಾನಕರ: ಧೃತಿ (ಬೆಳುವಾಯಿ ಮೈನ್ ಶಾಲೆ), ವಿಹಾನ್ (ರೋಟರಿ ಸೆಂಟ್ರಲ್ ಶಾಲೆ).6 ಮತ್ತು 7ನೇ ತರಗತಿ ವಿಭಾಗ: ಪ್ರಥಮ: ಅಯನಾ ಪಿರೇರಾ (ರೋಟರಿ ಸೆಂಟ್ರಲ್ ಶಾಲೆ), ದ್ವಿತೀಯ: ಲತಿಕಾ (ರೋಟರಿ ಆಂಗ್ಲ ಮಾಧ್ಯಮ ಶಾಲೆ), ತೃತೀಯ: ಆದಿಶ್ ಡಿ. ನಾಯಕ್ (ರೋಟರಿ ಆಂಗ್ಲ ಮಾಧ್ಯಮ ಶಾಲೆ), ಸಮಾಧಾನಕರ: ವಿದ್ವತ್ ವಿ. ಕೋಟ್ಯಾನ್ (ಡಿ.ಜೆ. ಆಂಗ್ಲ ಮಾಧ್ಯಮ ಶಾಲೆ), ಸಾರಾ ಶಹೀನ್ (ರೋಟರಿ ಆಂಗ್ಲ ಮಾಧ್ಯಮ ಶಾಲೆ).8, 9 ಮತ್ತು 10ನೇ ತರಗತಿ ವಿಭಾಗ: ಪ್ರಥಮ: ಅದಿತಿ (ರೋಟರಿ ಆಂಗ್ಲ ಮಾಧ್ಯಮ ಶಾಲೆ), ದ್ವಿತೀಯ: ಆಶ್ನಾ ಲೇನಾ ಪಿರೇರಾ (ರೋಟರಿ ಸೆಂಟ್ರಲ್ ಶಾಲೆ), ತೃತೀಯ: ಧ್ಯಾನ್ ವಿ. ಕೋಟ್ಯಾನ್ (ಡಿ.ಜೆ. ಆಂಗ್ಲ ಮಾಧ್ಯಮ ಶಾಲೆ), ಸಮಾಧಾನಕರ: ಅನುಷಾ ಶ್ರೇಯಾ ಲೋಬೋ (ರೋಟರಿ ಆಂಗ್ಲ ಮಾಧ್ಯಮ ಶಾಲೆ), ಸ್ಕಂದ ಗಣೇಶ್ ವೈ. ನವಲಗುಂದ (ರೋಟರಿ ಸೆಂಟ್ರಲ್ ಶಾಲೆ).;Resize=(128,128))
;Resize=(128,128))
;Resize=(128,128))
;Resize=(128,128))