ನರಗುಂದ: ಕ್ಷಯರೋಗ ಮನುಷ್ಯನ ಆರೋಗ್ಯದ ಮೇಲೆ ದುಷ್ಟಪರಿಣಾಮ ಬಿರುತ್ತದೆ. ಆದ್ದರಿಂದ ಈ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ತಾಲೂಕು ವೈದ್ಯಾಧಿಕಾರಿ ಡಾ. ರೇಣುಕಾ ಕೊರವನವರ ಹೇಳಿದರು.
ಸೋಮವಾರ ಪಟ್ಟಣದ ಚಿನ್ನಾಂಭಿಕಾ ಪ್ಯಾರಾಮೆಡಿಲ್ ಕಾಲೇಜಿನಲ್ಲಿ ತಾಲೂಕು ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಕ್ಷಯವಿದ್ದರೆ ಎರಡು ವಾರಕ್ಕಿಂತ ಹೆಚ್ಚು ಸತತ ಕೆಮ್ಮು ಮತ್ತು ಕಫ, ಕಫದೊಂದಿಗೆ ರಕ್ತ ಬೀಳುವುದು, ಸಂಜೆ ವೇಳೆ ಜ್ವರ ಬರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು ಮುಂತಾದ ಲಕ್ಷಣಗಳ ಬಗ್ಗೆ ಕಂಡು ಬರುತ್ತವೆ. ಸಂಶಯಾಸ್ಪದರಿಂದ ಕಫ ಸಂಗ್ರಹಿಸಿ ಅದನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತಲುಪಿಸಿ ಅವಶ್ಯವಿದ್ದಲ್ಲಿ ಕ್ಷ-ಕಿರಣ ಪರೀಕ್ಷೆಗಳನ್ನು ಮಾಡಿಸಿ ಪತ್ತೆ ಹಚ್ಚಿ ಖಚಿತ ಪಟ್ಟಲ್ಲಿ 6ರಿಂದ 9 ತಿಂಗಳ ಉಚಿತ ಚಿಕಿತ್ಸೆ ನೀಡಲಾಗುವುದು. ಜೊತೆಗೆ ರೋಗಿಗಳಿಗೆ ಚಿಕಿತ್ಸಾ ಅವಧಿಯಲ್ಲಿ ತಿಂಗಳಿಗೆ ₹500ಗಳಂತೆ ಪೌಷ್ಟಿಕ ಆಹಾರ ಸೇವನೆಗಾಗಿ ರೋಗಿಗಳ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು.
ಆರೋಗ್ಯ ಶಿಕ್ಷಣಾಧಿಕಾರಿ ಜಿ.ವ್ಹಿ. ಕೊಣ್ಣೂರ ಮಾತನಾಡಿ ಕ್ಷಯರೋಗದಲ್ಲಿ ಶ್ವಾಸಕೋಶ ಕ್ಷಯರೋಗ ಮತ್ತು ಶ್ವಾಸಕೋಶೇತರ ಕ್ಷಯರೋಗ ಎಂಬ 2 ರೀತಿಯ ಪ್ರಕಾರಗಳನ್ನು ಕಾಣಬಹುದು. ಯಾವುದೇ ರೀತಿಯ ದುಶ್ಚಟಕ್ಕೆ ಬಲಿಯಾಗದೆ ಸರಿಯಾಗಿ ಪೌಷ್ಟಿಕ ಆಹಾರ ಸೇವನೆ ಮಾಡಿದರೆ ಕ್ಷಯರೋಗದಿಂದ ಬಹುಬೇಗ ಗುಣಮುಕರಾಗುತ್ತಾರೆ. 2025ಕ್ಕೆ ಕ್ಷಯ ಮುಕ್ತ ಕರ್ನಾಟಕ ಮಾಡುವ ಗುರಿ ಹೊಂದಿದೆ ಎಂದರು.ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಎಸ್.ಬಿ. ಕುರಹಟ್ಟಿ ಮಾತನಾಡಿ, ಮಾರ್ಚ್ 24, 1882ರಂದು ವೈದ್ಯಕೀಯ ಇತಿಹಾಸದಲ್ಲಿಯೇ ಅವಿಸ್ಮರಿಣೀಯ ದಿನ. ಅಂದು ಜರ್ಮನ್ ದೇಶದ ವಿಜ್ಞಾನಿಯಾದ ರಾಬರ್ಟ ಕಾಕ್ ಅವರು ಕ್ಷಯರೋಗಕ್ಕೆ ಮೈಕೋಬ್ಯಾಕ್ಟೇರಿಯಾ ಟ್ಯುಬರಕುಲೈ ಎಂಬ ರೋಗಾಣು ಕಾರಣವಾಗಿದೆ ಎಂದು ಖಚಿತಪಡಿಸಿದ ದಿನ. ಆ ಸಂಶೋಧನೆಯಿಂದ ಅವರಿಗೆ ಪ್ರತಿಷ್ಟಿತ ನೋಬೆಲ್ ಪುರಸ್ಕಾರ ಲಭಿಸಿತು. ಹಾಗಾಗಿ ಮಾರ್ಚ್ 24 ಅನ್ನು ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎನ್.ಎಂ. ಅಪ್ಪೋಜಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು ತುಂಬಾ ಉಪಯುಕ್ತವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿ.ಎಫ್. ಕುಂಬಾರ, ಕಾಲೇಜು ವಿದ್ಯಾರ್ಥಿಗಳು ಇದ್ದರು.